ದೊಡ್ಡಬಳ್ಳಾಪುರ: ಪರಿಶಿಷ್ಟ ಸಮುದಾಯಗಳಿಗೆ ನಿರಂತರವಾಗಿ ಅವಕಾಶಗಳ ವಂಚನೆಯಾಗುತ್ತಿದ್ದು, ಅದನ್ನು ನಿಗ್ರಹಿಸಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸೂಕ್ತ ಅವಕಾಶ ಹಾಗೂ ಮನ್ನಣೆಯನ್ನು ಪಡೆಯಲು ಜಾತಿ ಸಮೀಕ್ಷೆ ಸಹಕಾರಿಯಾಗಿದೆ ಎಂದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಎಕೆ, ಎಡಿ, ಎಎ ಎಂದು ಬರೆಸದೆ, ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಬಿ-061 ಮಾದಿಗ ಎಂದೇ ಬರಸಬೇಕು ಕಳೆದ ನಾಲ್ಕು ದಶಕಗಳ ಹೋರಾಟ, ತ್ಯಾಗ, ಬಲಿದಾನಗಳ ಫಲಶೃತಿಯಾಗಿ ಕರ್ನಾಟಕ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೆ ತಂದಿರುವುದು ನಮಗೆಲ್ಲರಿಗೂ ಸಂತೋಷದಾಯಕ ವಿಷಯವಾಗಿದೆ. ಮುಂದುವರೆದು ಒಳ ಮೀಸಲಾತಿ ಪ್ರಯೋಜನವನ್ನು ನಮ್ಮ ಸಮುದಾಯ ಪಡೆದುಕೊಳ್ಳುವ ದಾರಿ ಸುಗಮವಾಗಿಲ್ಲ, ಮೀಸಲಾತಿಗೆ ಅನುಗುಣವಾದ ಶೈಕ್ಷಣಿಕ ಅರ್ಹತೆಗಳುಳ್ಳ ಅಭ್ಯರ್ಥಿಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿರುವುದು ದುರಾದೃಷ್ಟಕರ ಸಂಗತಿ. ಆದ್ದರಿಂದ ನಮ್ಮ ಸಮುದಾಯದ ಯುವ ಜನರನ್ನು ಕನಿಷ್ಠ ಪದವಿ ವಿದ್ಯಾವಂತರನ್ನಾಗಿ ರೂಪಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಒಳಮೀಸಲಾತಿಯ ಹೋರಾಟದ ಅನೇಕ ಮಜಲುಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದುಡಿದ ಸಮಾಜದ ನಾಯಕರುಗಳು ಈ ಒಳಮೀಸಲಾತಿ ಪಡೆದು ಕೊಳ್ಳುವಲ್ಲಿ ಇರುವಂತಹ ತೊಡಕುಗಳನ್ನು ಪರಿಹರಿಸುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷಗಳ ನೇತಾರರು ಪಕ್ಷಾತೀತವಾಗಿ ಒಗ್ಗೂಡಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ಮಾದಾರ ಮಹಾಸಭಾವನ್ನು ಸ್ಥಾಪಿಸಲಾಗಿದ್ದು, ಸಮುದಾಯವನ್ನು ಸದೃಢವಾಗಿ ಕಟ್ಟಿ ಬೆಳೆಸಲು ಅನೇಕ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮಾದಿಗರು ಇದ್ದಾರೆ. ಮಾದಿಗ ಕುರಿತು ಚಿಂತನ ಮಂಥನವಾಗಬೇಕು. ಮೂಲ ಜಾತಿ ಮಾದಿಗ ಎಂದು ಬರೆಸಿದರೆ ಮಾತ್ರ ಮೀಸಲಾತಿ, ಇಲ್ಲದಿದ್ದಲ್ಲಿ ಯಾವ ಮೀಸಲಾತಿಯೂ ಬರುವುದಿಲ್ಲ ಎಂದು ಎಚ್ಚರಿಸಿದರು.
16ಕೆಡಿಬಿಪಿ3-
ದೊಡ್ಡಬಳ್ಳಾಪುರದಲ್ಲಿ ಸಾಮಾಜಿಕ ಸಮೀಕ್ಷೆ ಕುರಿತು ಕರ್ನಾಟಕ ಮಾದಾರ ಮಹಾಸಭಾದಿಂದ ಜಾಗೃತಿ ಅಭಿಯಾನ ನಡೆಯಿತು.