ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬ ದೇವಿಯ ದರ್ಶನಕ್ಕೆ 10ನೇ ದಿನವಾದ ಶನಿವಾರ ಭಕ್ತರ ಮಹಾಸಾಗರ ಹರಿದು ಬಂದಿದ್ದು, ಬೆಳಗ್ಗೆ 3 ಗಂಟೆಯಿಂದಲೇ ಸಾವಿರಾರು ಸರತಿ ಸಾಲಿನಲ್ಲಿ ಸತತ 10 ಗಂಟೆ ನಿಂತು ದೇವಿಯ ದರ್ಶನ ಪಡೆದರು. ಭಕ್ತರ ದಂಡನ್ನು ಕಂಟ್ರೋಲ್ ಮಾಡಲು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರೇ ಅಖಾಡಕ್ಕೆ ಇಳಿದರು.ಶನಿವಾರ ಬೆಳ್ಳಂಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಕೃಷ್ಣ ಬೈರೇಗೌಡ ಅವರು, ಸ್ವತಃ ಮೈಕ್ ಹಿಡಿದು ಭಕ್ತರಿಗೆ ಮಾರ್ಗದರ್ಶನ ನೀಡಿದರು. ಈ ವೇಳೆ ಮಾತನಾಡಿದ ಅವರು, ಅ.20ರಿಂದ ಪ್ರೋಟೋಕಾಲ್ ಬಂದ್ ಆಗಲಿದ್ದು, ಗಣ್ಯರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಸಹ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸರಣಿ ರಜೆಗಳ ಹಿನ್ನೆಲೆ ರಶ್:ಜಿಲ್ಲಾಡಳಿತವು ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕಾಗಿ ಧರ್ಮ ದರ್ಶನ ಸಾಲಿನ ಬ್ಯಾರಿಕೇಡ್‌ಗಳನ್ನು 10 ಕಿ.ಮೀ ವಿಸ್ತರಿಸಿದೆ. ವಿಶೇಷ ದರ್ಶನ ಸಾಲುಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ವಾರಾಂತ್ಯ ಹಾಗೂ ಸರಣಿ ರಜೆಗಳ ಹಿನ್ನೆಲೆಯಲ್ಲಿ ಹೊರರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದಲೂ ಭಕ್ತರ ದಂಡು ಹರಿದುಬಂದಿದ್ದು, ಅನೇಕರು ದೇವಿ ದರ್ಶನ ಪಡೆದ ಬಳಿಕ ಬಸ್ ನಿಲ್ದಾಣ ಹಾಗೂ ರಸ್ತೆಗಳ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಿಗಾಗಿ ಹಾಸನ ಬಸ್ ನಿಲ್ದಾಣಗಳಲ್ಲಿ ರಶ್ ಉಂಟಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸುತ್ತಲಿನ ಹಲವು ಗ್ರಾಮಗಳಲ್ಲಿ ಗಂಟೆಗಟ್ಟಲೆ ಬಸ್‌ಗಾಗಿ ಕಾಯುವಂತಾಗಿದೆ.
ಬಾಕ್ಸ್))))ಸಾಲಿನಲ್ಲಿ ನಿಂತು ದೇವಿಯ
ದರ್ಶನ ಪಡೆದ ಸಿಎಂ ಪತ್ನಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ದೇವಿಯ ದರ್ಶನ ಪಡೆದರು. ತಮ್ಮ ಆಪ್ತರೊಂದಿಗೆ ಶನಿವಾರ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಅವರು ಭಕ್ತರ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬಳಿಕ ಸಿದ್ದೇಶ್ವರಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದರು. ಈ ವೇಳೆ ದೇವಾಲಯದ ಆವರಣದಲ್ಲಿ ಮಾಧ್ಯಮದವರು ಚಿತ್ರೀಕರಣ ಮಾಡಲು ಯತ್ನಿಸಿದಾಗ, ಸಿಎಂ ಪತ್ನಿಯ ಭದ್ರತಾ ಸಿಬ್ಬಂದಿ ಹಾಗೂ ಗನ್‌ಮ್ಯಾನ್‌ಗಳು ಮಾಧ್ಯಮದವರಿಗೆ ಅಡ್ಡಿ ಪಡಿಸಿದರು. ಕೋಟ್:
ಧರ್ಮ ದರ್ಶನಕ್ಕೆ ಸರಾಸರಿ 8 ರಿಂದ 9 ಗಂಟೆ, ₹300 ಟೀಕೆಟ್ ಸಾಲಿಗೆ 4-5 ಗಂಟೆ, ಹಾಗೂ ₹1000 ಟೀಕೆಟ್ ಸಾಲಿನಲ್ಲಿ ಸಾಗಲು 2-3 ಗಂಟೆ ಬೇಕಾಗುತ್ತದೆ. ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದು, ಸ್ವಲ್ಪ ವಿಳಂಬವಾಗುತ್ತಿದೆ. ಭಕ್ತರು ಮಾನಸಿಕವಾಗಿ ಸಿದ್ಧರಾಗಿ ಬರಬೇಕು.- ಕೃಷ್ಣ ಬೈರೇಗೌಡ, ಸಚಿವ