ಕನ್ನಡಪ್ರಭ ವಾರ್ತೆ ಕಲಬುರಗಿ / ಬೀದರ್
ವಾಯು ಮತ್ತು ನೀರು ಗುಣಮಟ್ಟದಿಂದ ಇದ್ದರೆ ಮಾತ್ರ ನಮ್ಮ ಸಮಾಜ ಆರೋಗ್ಯಕರವಾಗಿರಲು ಮಾತ್ರ ಸಾಧ್ಯ. ಇವು ಇಲ್ಲದೆ ಉತ್ತಮ ಭವಿಷ್ಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಜನರಿಗೆ ಪರಿಸರದ ಬಗ್ಗೆ ಇರುವ ಕಾನೂನಿನ ಅರಿವಿಲ್ಲದೆ ಮತ್ತು ಭಯವಿಲ್ಲದೆ ವರ್ತಿಸುತ್ತಿರುವುದರಿಂದ ದೊಡ್ಡ ಮಟ್ಟದ ಅನಾಹುತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಆತಂಕ ವ್ಯಕ್ತಪಡಿಸಿದರು.ಕಲಬುರಗಿ ಮತ್ತು ಬೀದರ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಸುವರ್ಣ ಮಹೋತ್ಸವದ ಗುರಿಯಾಗಿದೆ ಎಂದು ತಿಳಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ನಡೆದುಬಂದ ಹಾದಿಯ ಜೊತೆಗೆ ಪರಿಸರದ ಬಗ್ಗೆ ಇಂದಿರಾ ಗಾಂಧಿ ಅವರು ತಂದ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜನ ಪರಿಸರದ ಬಗ್ಗೆ ಎತ್ತೆಚ್ಚುಕೊಳ್ಳಬೇಕು. ಅದಕ್ಕೋಸ್ಕರ ರಾಜ್ಯಾದ್ಯಂತ ಈ ಬೃಹತ್ ಸುವರ್ಣ ಮಹೋತ್ಸವವನ್ನು ಆಯೋಜಿಸುತ್ತಿದ್ದೇವೆ ಎಂದರು.ಪ್ರಾಣಿಪಕ್ಷಿ ಸಂಕುಲ ಕೂಡ ಉಳಿಯಬೇಕು. ಅದಕ್ಕಾಗಿ ದೀಪ ಬೆಳಗಿಸಿ ದೀಪಾವಳಿಯನ್ನು ಆಚರಿಸಿ. ಪಟಾಕಿಯನ್ನು ಹೊಡೆಯಬೇಕು ಎನಿಸಿದರೆ ಪರಿಸರಸ್ನೇಹಿ ಹಸಿರು ಪಟಾಕಿಯನ್ನು ಹೊಡೆಯಿರಿ ಎಂದು ಕರೆ ನೀಡಿದರು.
ಪ್ಲಾಸ್ಟಿಕ್ ಉತ್ಪಾದನೆಗೆ ಅನುಮತಿ ಇಲ್ಲ:ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದಿಸುವ ಯಾವುದೇ ಕಾರ್ಖಾನೆಗಳಿಗೆ ಅನುಮತಿಯನ್ನು ನೀಡಿರುವುದಿಲ್ಲ. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೌರಾಡಳಿತ ಇಲಾಖೆಗಳ ಸಹಯೋಗದಲ್ಲಿ ಪ್ರತಿ 15 ದಿನಗಳಿಗೊಮ್ಮೆ ದಾಳಿ ಮಾಡಿ ದಂಡ ವಿಧಿಸಲಾಗುತ್ತದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಸುವರ್ಣ ಮಹೋತ್ಸವದ ಅಂಗವಾಗಿ ಶಾಲಾ ಮತ್ತು ಕಾಲೇಜು ಮಟ್ಟದ ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಗಣೇಶ ಮತ್ತು ದೀಪಾವಳಿ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಸಾರ್ವಜನಿಕರು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಹಲವು ಕ್ರಮ:
ಇಂದಿರಾ ಗಾಂಧಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಅನ್ನು ಜಾರಿಗೆ ತಂದರು. 1973ರಲ್ಲಿ ಅಳಿವಿನಂಚಿನಲ್ಲಿ ಇರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ರೂಪಿಸಿದರು. 1974ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು.ಇಂದಿರಾ ಸ್ಮರಣೆ ಅಗತ್ಯ:
1972ರಲ್ಲಿ ವಿಶ್ವಸಂಸ್ಥೆಯ ಸ್ಟಾಕ್‌ಹೋಮ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿ ಅವರು, ಇಡೀ ಜಗತ್ತಿಗೆ ಮೊದಲ ಬಾರಿಗೆ ಪರಿಸರ ಸಂರಕ್ಷಣೆಯ ಪಾಠ ಮಾಡಿದರು. ಹಾಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ವೇಳೆ ಇಂದಿರಾ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳಬೇಕಾದುದು ಮತ್ತು ಅವರು ತಂದ ಕಾಯಿದೆಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ನಮ್ಮ ಕರ್ತವ್ಯ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಪಸ್ಥಿತರಿದ್ದರು.