ಜಾತಿ ವ್ಯವಸ್ಥೆ ಇಂದಿಗೂ ಜೀವಂತ: ಶಾಸಕ ಪ್ರಸಾದ ಅಬ್ಬಯ್ಯ

KannadaprabhaNewsNetwork |  
Published : Sep 30, 2024, 01:17 AM IST
ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನವನ್ನು ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಾತಿ ಪದ್ಧತಿ ಸಂಪೂರ್ಣವಾಗಿ ತೊಡೆದುಹಾಕಬೇಕಾದಲ್ಲಿ ದಲಿತರು ಶಿಕ್ಷಣ ಪಡೆದು ಜಾಗೃತರಾಗುವ ಕಾರ್ಯವಾಗಬೇಕಿದೆ ಎಂದು ಶಾಸಕ, ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಹುಬ್ಬಳ್ಳಿ: ಇಂದಿನ ಆಧುನಿಕ ದಿನಮಾನಗಳಲ್ಲೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಹಲವು ಕಡೆಗಳಲ್ಲಿ ದಲಿತರನ್ನು ಶೋಷಿಸುವ ಕಾರ್ಯವಾಗುತ್ತಿದೆ. ಈ ಜಾತಿ ಪದ್ಧತಿ ಸಂಪೂರ್ಣವಾಗಿ ತೊಡೆದುಹಾಕಬೇಕಾದಲ್ಲಿ ದಲಿತರು ಶಿಕ್ಷಣ ಪಡೆದು ಜಾಗೃತರಾಗುವ ಕಾರ್ಯವಾಗಬೇಕಿದೆ ಎಂದು ಶಾಸಕ, ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಭೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ಧಾರವಾಡ ಜಿಲ್ಲಾ ಶಾಖೆಯಿಂದ ಭಾನುವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗೃತರಾಗಿ

ಇಂದಿಗೂ ಹಲವು ಹಳ್ಳಿಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದೇವಸ್ಥಾನ, ಹೋಟೆಲ್‌, ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ದೇವರ ಮೂರ್ತಿ ತಯಾರಿಕೆ, ದೇವಸ್ಥಾನ ನಿರ್ಮಾಣಕ್ಕೆ ದಲಿತರನ್ನು ಬಳಸಿಕೊಳ್ಳಲಾಗುತ್ತಿದೆ. ಬಳಿಕ ಮೂರ್ತಿಗೆ ಶುದ್ಧೀಕರಣಗೊಳಿಸಿ ದೇವಸ್ಥಾನದಿಂದ ದಲಿತರನ್ನು ಹೊರಗಿಡುವ ಕಾರ್ಯಗಳು ನಡೆಯುತ್ತಿವೆ ಎಂದು ವಿಷಾಧಿಸಿದರು.

ಇನ್ನೂ ಕೆಲವೆಡೆಗಳಲ್ಲಿ ಕೆಲ ಜನಪ್ರತಿನಿಧಿಗಳೂ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಮುಗ್ದ ದಲಿತರನ್ನು ಬಳಸಿಕೊಳ್ಳುವ ಮೂಲಕ ವ್ಯವಸ್ಥಿತವಾಗಿ ಒಡೆದು ಆಳುವ ನೀತಿ ನಡೆಸಲಾಗುತ್ತಿದೆ. ಈ ಕುರಿತು ದಲಿತರು ಜಾಗೃತರಾಗಬೇಕಿದೆ ಎಂದರು.

ಶಿಕ್ಷಣವಂತರಾಗಿ

ದಲಿತ ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಭಾರತ ಬದಲಾಗಿದೆ ಎಂದು ಹೆಸರಿಗೆ ಮಾತ್ರ ಹೇಳಲಾಗುತ್ತಿದೆ. ಆದರೆ, ಇಂದಿಗೂ ದಲಿತ ಕೇರಿಗಳ ಸುಧಾರಣೆಯಾಗಿಲ್ಲ. ದೇವಸ್ಥಾನ ಪ್ರವೇಶಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಾಗ ಮೌನವಹಿಸುವ ಜನಪ್ರತಿನಿಧಿಗಳು, ಚುನಾವಣೆ ಬಂದಾಗ ಮಾತ್ರ ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುತ್ತಾರೆ. ದಲಿತರು ಬರೀ ಮೀಸಲಾತಿ ಪಡೆಯಲು ಸೀಮಿತ ಆಗಬಾರದು. ಶಿಕ್ಷಣವಂತರಾಗಬೇಕು. ಅಕ್ಷರ, ಅನ್ನ ನಿರಾತಂಕವಾಗಿ ಸಿಕ್ಕಾಗ ಮಾತ್ರ ಭಾರತ ಬೆಳೆಯಲು ಸಾಧ್ಯ ಎಂದರು.

ದೇವೇಂದ್ರ ಬಾಲ್ಕೆ, ವೈಶಾಲಿ ಮೋರೆ, ಮನೋಹರ ಮೋರೆ ಮಾತನಾಡಿದರು. ಇದೇ ವೇಳೆ ರಾಧಾ ಸಿ.ವೈ. ಅವರ ಬುದ್ಧ ಮತ್ತು ಆತನ ದಮ್ಮದ ಭವಿಷ್ಯ ಕೃತಿ ಬಿಡುಗಡೆ ಮಾಡಲಾಯಿತು.

ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ನಿಂಗಪ್ಪ ಸಿಂದಗಿ ಅಧ್ಯಕ್ಷತೆ ವಹಿಸಿದ್ದರು. ಧರ್ಮ ಗುರುಗಳಾದ ಬಂತೆ ನ್ಯಾನಲೋಕ, ಬಂತೆ ಧಮ್ಮವೀರೊ, ಬಂತೆ ಧಮ್ಮಪಾಲ ಸಾನಿಧ್ಯ ವಹಿಸಿದ್ದರು. ಭಾರತೀಯ ಬೌದ್ಧ ಮಹಾಸಭಾದ ಮಲ್ಲಿಕಾರ್ಜುನ ಬಾಲ್ಕೆ, ಜಯಪ್ರಕಾಶ, ಶಿವರಾಜ ಎಂ.ಸಿ, ಬಿ.ಎಫ್. ಕಾಳೆ, ಸಿದ್ದರಾಮ ಹಿಪ್ಪರಗಿ, ಸಂಜುಕುಮಾರ ಸೇರಿದಂತೆ ಹಲವರಿದ್ದರು.

ವಿವಿಧ ಗೋಷ್ಠಿಗಳು

ಕಾರ್ಯಕ್ರಮದ ಅಂಗವಾಗಿ ಗೋಷ್ಠಿಗಳನ್ನು ಆಯೋಜಿಸಲಾಯಿತು. ಮೊದಲ ಗೋಷ್ಠಿಯಲ್ಲಿ ಶಿಗ್ಗಾಂವಿಯ ಕರ್ನಾಟಕ ಜಾನಪದ ವಿವಿ ಕುಲಪತಿ ಟಿ.ಎಂ. ಭಾಸ್ಕರ ಅವರು ಸಿದ್ಧಾರ್ಥನ ಜನನ ಮತ್ತು ಜ್ಞಾನೋದಯ ಕುರಿತು, ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಧನವಂತ ಹಾಜವಗೋಳ ಅವರು ಆಧುನಿಕ ಭಾರತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಹಾಗೂ ಸಾಹಿತಿ ಚಂದ್ರಕಾಂತ ಪೋಸ್ತೆ ಅವರು ಸಮಕಾಲೀನ ಭಾರತ ಮತ್ತು ಬೌದ್ಧರು ವಿಷಯದ ಕುರಿತು ಮಾತನಾಡಿದರು. ಕಲಬುರಗಿಯ ಗೋದುತಾಯಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪುಟ್ಟಮಣಿ ದೇವಿದಾಸ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ