ಶ್ರೀರಾಮಮಂದಿರಕ್ಕೆ ಬೆಳ್ಳಿಇಟ್ಟಿಗೆ ಸಮರ್ಪಣೆ ಸಮಾರಂಭದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಅಭಿಮತ , ಹುತಾತ್ಮರಾದ ಕುಟುಂಬಕ್ಕೆ ಸನ್ಮಾನ ಕನ್ನಡಪ್ರಭ ವಾರ್ತೆ ದಾವಣಗೆರೆ ಬಡವ ಬಲ್ಲಿದನೆಂಬ ಬೇಧ ತೋರದೆ ಸದಾ ಸನ್ಮಾರ್ಗದಲ್ಲಿ ನಡೆದ ಮರ್ಯಾದ ಪುರುಷೋತ್ತಮ ಶ್ರೀರಾಮನ ಹಾದಿಯಲ್ಲಿ ಸಾಗಿ ಜಾತೀಯತೆ, ಅಸ್ಪೃಶ್ಯತೆ ಹೊಡೆದೊಡಿಸಿ ರಾಷ್ಟ್ರ ನಿರ್ಮಾಣಕ್ಕೆ ಶಕ್ತಿ ತುಂಬೋಣ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಕರೆ ನೀಡಿದರು. ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ ಹಾಗೂ ರಾಮಜ್ಯೋತಿ ರಥಯಾತ್ರೆಯಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾತೀಯತೆ, ಅಸ್ಪೃಶ್ಯತೆ ಎಂಬ ಪಿಡುಗುಗಳು ದೇಶ ನಿರ್ಮಾಣವನ್ನು ದುರ್ಬಲಗೊಳಿಸುತ್ತಿದ್ದು, ಮನೆ-ಮನಗಳಲ್ಲಿ ಅವುಗಳ ನಿರ್ಮೂಲನೆಗೊಳಿಸಿ ಒಗ್ಗಟ್ಟಿನ ಮಂತ್ರ ಜಪಿಸಿ, ರಾಷ್ಟ್ರ ನಿರ್ಮಾಣದ ಸಂದೇಶ ಸಾರಬೇಕಿದೆ ಎಂದರು. ರಾಷ್ಟ್ರನಿರ್ಮಾಣಕ್ಕೆ ಶಕ್ತಿ ನೀಡಿ: ಭಾರತದಲ್ಲಿ ಸಂಸ್ಕೃತಿ, ಪರಂಪರೆ ಇನ್ನೂ ಉಳಿದಿದೆ ಎಂದರೆ ಅದಕ್ಕೆ ಹಿಂದುತ್ವವೇ ಕಾರಣ. ಸಂವಿಧಾನ, ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಉಳಿಯಬೇಕೆಂದರೆ ಬಹು ಸಂಖ್ಯಾತರು ಅಲ್ಪ ಸಂಖ್ಯಾತರಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಶಬರಿ ಬುಡಕಟ್ಟು ಮಹಿಳೆಯಾಗಿದ್ದರೂ ಪ್ರಭು ಶ್ರೀರಾಮ ಆಕೆಯ ಭಕ್ತಿ ಮೆಚ್ಚಿ ಆಕೆ ಕಚ್ಚಿ ಕೊಟ್ಟ ಹಣ್ಣನ್ನು ಎಂಜಲು ಎನ್ನದೇ ಸವಿದವನು. ರಾಮನಿಗೆ ಜಾತಿ ಮತ್ತು ಬಡ-ಶ್ರೀಮಂತರು ಎಂಬ ಬೇಧವಿರಲಿಲ್ಲ. ಹಾಗಾಗಿ, ಅವನು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ರಾಷ್ಟ್ರನಿರ್ಮಾಣಕ್ಕೆ ಶಕ್ತಿಕೊಡಬೇಕು ಎಂದು ಹೇಳಿದರು. ಮತಾಂಧ ಮಾನಸಿಕತೆ ಜೀವಂತವಿದೆ: ಕೆಲವರಿಗೆ ಕೇಸರಿ, ಕುಂಕುಮ ಕಂಡರೆ ಅಲರ್ಜಿಯಾಗುತ್ತದೆ, ಹಿಂದೂ ಮತ್ತು ಹಿಂದುತ್ವವೇ ಬೇರೆ ಎನ್ನುತ್ತಾರೆ. ಮತ್ತೆ ಕೆಲವರು ಹಿಂದೂ ಧರ್ಮದ ಹೆಸರು ಕೇಳಿದರೆ ಚೇಳು ಕುಟುಕಿದಂತಾಡುತ್ತಾರೆ. ದೇಶದಲ್ಲಿ ಟಿಪ್ಪು, ಘಜ್ನಿ ಮಹಮ್ಮದ್, ಔರಂಗಜೇಬನ ಮತಾಂಧ ಮಾನಸಿಕತೆ ಪೋಷಿಸುವ ಮನಸ್ಥಿತಿಗಳು ಇನ್ನೂ ಜೀವಂತವಾಗಿವೆ. ಇಂಥವರ ಮಾನಸಿಕತೆ ಇಟ್ಟುಕೊಂಡು ಬಂದವರಿಗೆ ನಾವು ಉರಿಗೌಡ, ನಂಜೇಗೌಡನ ಮೂಲಕವೇ ಉತ್ತರ ಕೊಡಬೇಕಾಗುತ್ತದೆ. ನಮ್ಮಲ್ಲಿ ಶಿವಾಜಿಯ ‘ಭವಾನಿ’ (ಖಡ್ಗ) ಸದಾ ಜಾಗೃತವಾಗಿಯೂ ಇರಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು. ಚುನಾವಣೆಯಲ್ಲಿ ರಾಷ್ಟ್ರಹಿತ ಮರೆತು ಮತ ಹಾಕಿದರೆ ಊಹಿಸಲೂ ಸಾಧ್ಯವಾಗದ ನಷ್ಟ ನಮ್ಮ ದೇಶಕ್ಕೆ ಆಗಲಿದೆ. ಆದ್ದರಿಂದ ಜಾಗರೂಕರಾಗಿ ಮತ ನೀಡುವ ಮೂಲಕ ಕಾಶಿ, ಮಥುರ ಸೇರಿ ಹಲವೆಡೆ ದೇಗುಲಗಳ ಮರುಸ್ಥಾಪಿಸುವಂತೆ ಮಾಡಲು ಕೈಜೋಡಿಸಿ ಎಂದು ಕರೆ ನೀಡಿದರು. ಶಾಂತಿಮಂತ್ರ ಪಠಣ: ಸಂಸದ ಡಾ.ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಬಿಜೆಪಿ ಮತ್ತು ಆರೆಸ್ಸೆಸ್ ನವರು ಗಲಭೆಗೆ ಪ್ರಚೋದಿಸುತ್ತಾರೆ ಎಂಬ ತಪ್ಪು ಸಂದೇಶವನ್ನು ಕಾಂಗ್ರೆಸ್ ಸೇರಿದಂತೆ ಕೆಲವರು ರವಾನಿಸುತ್ತಾರೆ. ಆದರೆ, ಆರೆಸ್ಸೆಸ್, ಬಿಜೆಪಿ ಎಂದಿಗೂ ಶಾಂತಿಮಂತ್ರವನ್ನೇ ಪಠಿಸುತ್ತದೆ. ಹಾಗಾಗಿ, ನೂರಾರು ವರ್ಷಗಳಿಂದ ಕಾನೂನು ಮೂಲಕವೇ ಹೋರಾಡಿ ಕೊನೆಗೂ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೦ರ ರಾಮಜ್ಯೋತಿ ರಥಯಾತ್ರೆಯ ಸಂಧರ್ಭ ನಡೆದ ಸಂಘರ್ಷದಲ್ಲಿ ಗೋಲಿಬಾರ್‌ನಿಂದ ೮ ಜನ ಹುತಾತ್ಮರಾದರು, ೭೦ ಜನರಿಗೆ ಗುಂಡೇಟು ಹಾಗೂ ಸುಮಾರು ೪೦ ಜನರಿಗೆ ಆ್ಯಸಿಡ್ ದಾಳಿ ನಡೆಯಿತು. ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮೂಲಕ ಹುತಾತ್ಮರಾದವರ ಆತ್ಮಕ್ಕೆ ಶಾಂತಿ ದೊರಕುತ್ತಿದೆ ಎಂದು ತಿಳಿಸಿದರು. ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಎಂ. ಬಸವರಾಜ ನಾಯ್ಕ್, ಮಾಜಿ ಸಚೇತಕ ಡಾ. ಎ. ಎಚ್.ಶಿವಯೋಗಿ ಸ್ವಾಮಿ, ಗಾಯತ್ರಿ ಸಿದ್ದೇಶ್ವರ್, ಶಿವಕುಮಾರ್ ತುಮ್ಕೋಸ್, ಹಿಂದೂ ಮುಖಂಡ ಕೆ.ಬಿ. ಶಂಕರನಾರಾಯಣ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸೇರಿ ಮತ್ತಿತರರಿದ್ದರು. ಸಹಬಾಳ್ವೆಗೆ ಸಿದ್ಧ ಹಿಂದೂಗಳು ಸಹಬಾಳ್ವೆಗೆ ಸಿದ್ಧರಿದ್ದೇವೆ. ಷರೀಫರಂತೆ ಬಂದರೆ ಗೋವಿಂದ ಭಟ್ಟರಂತೆ ಇರುತ್ತೇವೆ, ಅಬ್ದುಲ್ ಕಲಾಂರಂತೆ ಬಂದರೆ ಅಟಲ್ ಬಿಹಾರಿ ವಾಜಪೇಯಿಯಂತೆ ಅಪ್ಪಿಕೊಳ್ಳುತ್ತೇವೆ, ಇಬ್ರಾಹಿಂ ಸುತಾರ, ಅಷ್ಫಕ್ ಅಲಿಯವರಂತಿದ್ದರೆ ನಿಮ್ಮನ್ನು ಗೌರವಿಸುತ್ತೇವೆ. ಹಾಗೊಂದು ವೇಳೆ ಟಿಪ್ಪು, ಔರಂಗಜೇಬ, ಘಜ್ನಿ ಮಹಮದ್‌ನಂತೆ ಕೆಣಕಿದರೆ ಶಿವಾಜಿ ಮೂಲಕ ಧರ್ಮ ಉಳಿಸಿಕೊಳ್ಳುತ್ತೇವೆ. ಸಿ.ಟಿ. ರವಿ, ಮಾಜಿ ಸಚಿವ ........... ಮುಸ್ಲಿಮರು ಪೂರ್ವಜರ ಮರೆಯದಿರಲಿ: ಸಿ.ಟಿ.ರವಿ ಇಂಡೋನೇಷ್ಯಾದಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಮುಸ್ಲಿಂರಿದ್ದಾರೆ. ಅಲ್ಲಿಯ ಏರ್‌ಲೈನ್ಸ್‌ಗೆ ಕರುಣ ಎಂದು ಹೆಸರಿಟ್ಟಿದ್ದಾರೆ, ಕರೆನ್ಸಿಯಲ್ಲಿ ಗಣಪತಿ ಚಿತ್ರವಿದ್ದು, ಅಲ್ಲಿನ ಪೊಲೀಸ್ ಬ್ಯಾಡ್ಜ್ ನಲ್ಲಿ ಹನುಮನ ಚಿತ್ರವಿದೆ. ರಾಮನ ಪಾತ್ರ ಹಾಕಿಕೊಂಡು ರಾಷ್ಟ್ರೀಯ ಹಬ್ಬ ಆಚರಿಸುತ್ತಾರೆ. ಅವರಲ್ಲಿ ರಾಮನಿಗೂ ನಿಮಗೂ ಏನು ಸಂಬಂಧವಿದೆ ಎಂದು ಪ್ರಶ್ನೆ ಮಾಡಿದರೆ, ಅಲ್ಲಿನ ಮುಸ್ಲಿಮರು ರಾಮ ನಮ್ಮ ಪೂರ್ವಜ, ನಾವು ಬದಲಿಸಿರುವುದು ಉಪಾಸನೆ ರೀತಿ ಹೊರತು ಪೂರ್ವಜರನ್ನಲ್ಲ. ಇಲ್ಲಿನ ಮುಸ್ಲಿಮರು ಹಣ, ಆಮಿಷ, ಬಲತ್ಕಾರಕ್ಕೆ ಒಳಗಾಗಿ ಬದಲಾಗಿದ್ದೀರಿ, ಆದರೆ, ನಿಮ್ಮ ಪೂರ್ವಜರ ನೆನಪಲ್ಲಿಟ್ಟುಕೊಳ್ಳಿ. ಈದ್‌ಮಿಲಾದ್‌ನಲ್ಲಿ ನೀವು ಮೆರೆಸಬೇಕಿರುವುದು ಮತಾಂಧರಾದ ಟಿಪ್ಪು, ಔರಂಗಜೇಬ, ಘಜ್ನಿಯಂತಹವರನ್ನಲ್ಲ. ಬದಲಿಗೆ ರಾಮ, ಕೃಷ್ಣ, ಶಿವ, ಬುದ್ಧನ ಮೆರೆಸಿದರೆ ನೀವು ನಮ್ಮವರಾಗುತ್ತೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಕಾಂಗ್ರೆಸ್ ಸರ್ಕಾರದಿಂದ ಮಾರ್ಜಾಲ ನ್ಯಾಯ * ಶಿವಮೊಗ್ಗ ಗಲಭೆ ಪ್ರಕರಣ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಆರೋಪ ದಾವಣಗೆರೆ : ಕಲ್ಲು ತೂರಿದವರ ಹಾಗೂ ಕಲ್ಲೇಟು ತಿಂದವರ ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಕಾಂಗ್ರೆಸ್ ಸರ್ಕಾರ ಮಾರ್ಜಾಲ ನ್ಯಾಯ ಅನುಸರಿಸುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದೆ, ದೌರ್ಜನ್ಯಕ್ಕೊಳಗಾದವರಿಗೆ ಕಿರುಕುಳ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದರಿಂದ ಮತಾಂಧತೆಗೆ ಸರ್ಕಾರವೇ ಉತ್ತೇಜನ ನೀಡುವಂತಾಗುತ್ತದೆ. ಎರಡೂ ಕೋಮಿನವರಿಗೆ ಸಮಾಧಾನ ಪಡಿಸಲು ಪ್ರಯತ್ನಿಸುವುದು ಬಿಟ್ಟು ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಚಿವ ರಾಮಲಿಂಗಾರೆಡ್ಡಿ ತಲೆ ಕೆಟ್ಟವರ ರೀತಿ ಮಾತಾಡಬಾರದು: ಈದ್ ಮಿಲಾದ್ ಮೆರವಣಿಗೆಯಲ್ಲಿ ಔರಂಗಜೇಬ, ಟಿಪ್ಪು ಸುಲ್ತಾನ್ ಫೋಟೋ ಹಾಕಲು ಅವಕಾಶ ಕೊಟ್ಟಿದ್ದೇ ತಪ್ಪು. ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ ಮತಾಂಧರ ವೈಭವೀಕರಣದಿಂದಲೇ ಅವರ ಉದ್ದೇಶ ಗೊತ್ತಾಗುತ್ತದೆ ಎಂದರಲ್ಲದೆ, ಘಟನೆಗೆ ಸಂಬಂಧಿಸಿ ಸಚಿವ ರಾಮಲಿಂಗಾರೆಡ್ಡಿ ತಲೆ ಕೆಟ್ಟವರ ರೀತಿಯಲ್ಲಿ ಮಾತನಾಡಬಾರದು. ತಲೆಕೆಟ್ಟವರು ಕೂಡ ಹೀಗೆ ಮಾತಾಡಲ್ಲ. ಹಿರಿತನಕ್ಕೆ ತಕ್ಕಂತೆ ಮಾತಾಡಬೇಕು ಎಂದು ತಿರುಗೇಟು ನೀಡಿದರು. ಕೇಸರಿ ಅಂದ್ರೆ ಇವರಿಗೆ ಆಗಲ್ಲ: ಬಿಜೆಪಿಯವರು ನಕಲಿ ಹಿಂದೂಗಳು ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೌದು, ನಾವು ನಕಲಿ ಹಿಂದೂಗಳು. ಹೀಗಾಗಿಯೇ ಹಣೆಗೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಅಸಲಿ ಹಿಂದೂಗಳು ಕುಂಕುಮ, ಕೇಸರಿ ಪೇಟ ಬೇಡ ಅಂತಾರೆ. ಮುಸ್ಲಿಮರ ಟೋಪಿಯನ್ನು ಆನಂದವಾಗಿ ಹಾಕಿಕೊಳ್ಳುತ್ತಾರೆ. ಕೇಸರಿ ಅಂದ್ರೆ ಇವರಿಗೆ ಆಗಲ್ಲ. ಇಂತಹವರು ನಾಳೆ ಒಸಾಮ ಬಿನ್ ಲಾಡೆನ್ ಪರವಾಗಿ ಮಾತನಾಡಿದರೂ ಆಶ್ಚರ್ಯವಿಲ್ಲ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು. ಅಧಿಕಾರ ಇಲ್ಲದಿದ್ದರೆ ಕೆಲವರಿಗೆ ಉಸಿರು ಕಟ್ಟುತ್ತದೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಪಕ್ಷದ ತೀರ್ಮಾನ ಅಂತಿಮ. ವೈಯಕ್ತಿಕ ಅಜೆಂಡಾ ಇರುವವರು ಅದನ್ನು ವಿರೋಧಿಸಬಹುದು. ನಾವಂತೂ ಪಕ್ಷ ಹೇಳಿದಂತೆ ಕೇಳಿಕೊಂಡು ರಾಜಕಾರಣ ಮಾಡುವವರು. ಅಧಿಕಾರ ಇದ್ದಾಗ ಎಸಿ ರೂಮಿನಲ್ಲಿ ಇದ್ದ ಹಾಗೆ ಇರುತ್ತದೆ. ಹಾಗೆಯೇ ಅಧಿಕಾರ ಇಲ್ಲದಿದ್ದರೆ ಕೆಲವರಿಗೆ ಉಸಿರು ಕಟ್ಟುವ ವಾತಾವರಣ ಆಗುತ್ತದೆ. ನಾವು ಸಿದ್ಧಾಂತ, ವಿಚಾರ ಇಟ್ಟುಕೊಂಡಿರುವವರು. ಅಧಿಕಾರ ಬರುತ್ತದೆ, ಹೋಗುತ್ತದೆ. ಬಿಜೆಪಿ ಕಾರ್ಯಕರ್ತ ಎಂಬುದೇ ಒಂದು ಕಳೆ. ಬದುಕಿರುವವರೆಗೂ ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ನೇಮಕಕ್ಕೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನಾನು ಹೇಳಿದರೆ ಸರಿಯಾಗಲ್ಲ. ಕೆಲವನ್ನು ಹೇಳಬಾರದು ಎಂದಷ್ಟೇ ಪ್ರತಿಕ್ರಿಯಿಸಿದರು.