ಜಾನುವಾರು ಗಣತಿ ಕಾರ್ಯ ಸಮರ್ಪಕವಾಗಿರಲಿ: ರಾಹುಲ್ ಶಿಂಧೆ

KannadaprabhaNewsNetwork |  
Published : Aug 30, 2024, 02:01 AM IST
ಜಿಪಂ ಸಿಇಓ ರಾಹುಲ ಶಿಂಧೆ ಅವರು ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಾಗಾರದಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಆ್ಯಪ್ ಆಧರಿಸಿ ಜಾನುವಾರು ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್‌ ಶಿಂಧೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಆ್ಯಪ್ ಆಧರಿಸಿ ಜಾನುವಾರು ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಗಣತಿಯಲ್ಲಿ ರೈತರ ಮಾಹಿತಿ, ರೈತರ ವರ್ಗ, ಜಾನುವಾರುಗಳ ವಯಸ್ಸು, ಎಷ್ಟು ಮಹಿಳೆಯರು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಇತ್ಯಾದಿ ಮಾಹಿತಿಗಳನ್ನು ಲೋಪದೋಷಗಳಿಲ್ಲದೆ ಕಲೆಹಾಕಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಿಪಂ ಸಭಾಂಗಣದಲ್ಲಿ ಗುರುವಾರ ಸೆ.1 ರಿಂದ ಡಿಸೆಂಬರ್ 31ರವರೆಗೆ ನಡೆಯಲಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಗಾರದಲ್ಲಿ ಮಾತನಾಡಿದರು.

21ನೇ ಜಾನುವಾರು ಗಣತಿ ಸೆಪ್ಟೆಂಬರ್ 1ಕ್ಕೆ ದೇಶಾದ್ಯಂತ ಆರಂಭಗೊಂಡು ಡಿಸೆಂಬರ್‌-31ರವರೆಗೆ ಚಾಲ್ತಿಯಲ್ಲಿದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸಲಾಗುತ್ತಿತ್ತು. ಆದರೆ, ಮೊದಲ ಬಾರಿಗೆ ಸ್ಮಾರ್ಟ್‌ಪೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪಶು ಸಂಗೋಪನಾ ಇಲಾಖೆಯಿಂದಲೇ 21ಸ್ಟ್ ಲೈವ್‌ಸ್ಪಾಕ್ ಸೆನ್ಸಸ್ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಗಣತಿದಾರರು ಆ್ಯಪ್ ಬಳಸಿ ಮಾಹಿತಿ ಪಡೆದು ಗಣತಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಗಣತಿ ಕಾರ್ಯದಲ್ಲಿ ಯಾವುದೇ ದತ್ತಾಂಶ ಸಂಗ್ರಹಣೆಯಲ್ಲಿ ಲೋಪದೋಷ ಆಗಬಾರದು. ಜಾನುವಾರುಗಳಿಗೆ ವ್ಯಾಕ್ಸಿನ್, ಔಷಧಿಗಳ ಬಳಕೆ ಬಗ್ಗೆ ಸಮಗ್ರ ಮಹಿಸಿ ನೀಡಬೇಕು ಎಂದು ಸಲಹೆ ನೀಡಿದರು.

ಅಚ್ಚುಕಟ್ಟು ನಿರ್ವಹಣೆಗೆ ಸಿದ್ಧತೆ : ಕಳೆದ ನಾಲ್ಕು ತಿಂಗಳಿಂದ ಪಶುಸಂಗೋಪನೆ ಇಲಾಖೆ ಬೃಹತ್ ಸಮೀಕ್ಷಾ ಕಾರ್ಯಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 8 ಜನ ಮಾಸ್ಟರ್ ಟ್ರೇನರ್‌ಗಳು ಆ. 12ರಂದು ರಾಜ್ಯಮಟ್ಟದಲ್ಲಿ ನಡೆದ ಕಾರ್ಯಾಗಾರದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ ಎಂದು ಪಶು ಸಂಗೋಪನ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ್ ಮಾಹಿತಿ ನೀಡಿದರು.

1919 ರಿಂದ ಜಾನುವಾರು ಗಣತಿ ನಡೆಯುತ್ತ ಬಂದಿದೆ. ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿವೆ. ಇದು 21ನೇ ಜಾನುವಾರು ಗಣತಿಯಾಗಿದೆ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂ ಭರ್ತಿ ಮಾಡಬೇಕಾಗಿತ್ತು. ಈ ಬಾರಿ ಚುಟುಕಾಗಿ ಆ್ಯಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್ವರ್ಕ್ ಇಲ್ಲದಿದ್ದರೂ ಈ ಆ್ಯಪ್ ನೆಟ್ವರ್ಕ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿ ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಲಾಗಿದೆ. ಎಣಿಕೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ಪ್ರತ್ಯೇಕವಾದ ಯುಸರ ಐಡಿ ಮತ್ತು ಪಾಸ್ ವರ್ಡ್ ನೀಡಲಾಗುವುದು ಎಂದರು.

ಗಣತಿಯಲ್ಲಿ ಗಣತಿದಾರರು ಯಾವ ತಳಿಯ ಜಾನುವಾರುಗಳಿವೆ? ಅವುಗಳ ವಯಸ್ಸೆಷ್ಟು, ಎಷ್ಟು ರೈತರು, ಯಾವ ವರ್ಗದ ರೈತರು, ಎಷ್ಟು ಮಹಿಳೆಯರು ಜಾನುವಾರು ಸಾಕಾಣಿಕೆ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಕಲೆಹಾಕಬೇಕು ಎಂಬುದನ್ನು ಈಗಾಗಲೇ ತಿಳಿಸಿಲಾಗಿದೆ. ಗಣತಿ ಮಹಿಯನ್ನಾಧರಿಸಿ ಸರ್ಕಾರಗಳು ತಮ್ಮ ಮುಂದಿನ ಯೋಜನೆ ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ, ಕಾರ್ಯಕ್ರಮ ರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ ಎಂದು ಹೇಳಿದರು.

ಗೋಶಾಲೆ ಮಾಹಿತಿ ಪಡೆಯಲು ನಿರ್ದೇಶನ: ಜಾನುವಾರು ಸಾಕಾಣಿಕೆದಾರರು ಸಾಕಿರುವ ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಹಂದಿ ಬಾತುಕೋಳಿ ಹಾಗೂ ಎಮು ಹಕ್ಕಿಗಳ ಮಾಹಿತಿ ಪಡೆಯಬೇಕು. ಮಾಲೀಕರಿಲ್ಲದ ದನಕರುಗಳು, ನಾಯಿಗಳ ಮಾಹಿತಿಯನ್ನೂ ಸಹ ಸೇರಿಸಲಾಗುತ್ತದೆ. ದೇವಸ್ಥಾನದಲ್ಲಿ ಆನೆ, ದನ ಸಾಕುವುದಿದ್ದರೆ, ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಜಾಸ್ತಿ ದನಗಳಿದ್ದರೆ, 1,000ಕ್ಕೂ ಅಧಿಕ ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಬೇಕು ಎಂದು ತಿಳಿಯಲಾಗಿದೆ ಎಂದು ಹೇಳಿದರು.

ಮಾಸ್ಟರ್ ಟ್ರೈನರ್ ಡಾ. ಆನಂದ್ ಪಾಟೀಲ ಮತ್ತು ಡಾ.ವಿರುಪಾಕ್ಷ ಅಡ್ಡಣಗಿ, ಗಣತಿಕಾರ್ಯ ನಿರ್ವಹಿಸಲು 21ಸ್ಟ್ ಲೈವ್‌ಸ್ಪಾಕ್ ಸೆನ್ಸಸ್ ಆ್ಯಪ್ ಬಳಕೆಯ ಕುರಿತು ಮಾಹಿತಿ ನೀಡಿದರು.

ಕೈಪಿಡಿ- ಮಾಹಿತಿ ಪುಸ್ತಕ ಬಿಡುಗಡೆ: ಇದೇ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕುಲೇರ್, ಮಾಹಿತಿ ಕೈಪಿಡಿ, ಪೋಸ್ಟರ್ ಬ್ಯಾನರ್ ಹಾಗೂ ಗಣತಿ ಕಾರ್ಯದಲ್ಲಿ ಮನೆಗಳಿಗೆ ಅಂಟಿಸುವ ಸ್ಟಿಕರ್ ಬಿಡುಗಡೆ ಮಾಡಿದರು.

ಪಶು ಸಂಗೋಪನೆ ಇಲಾಖೆಯ ಸಹಾಯ ನಿರ್ದೇಶಕರಾದ ಡಾ.ಅಂಬುರಾಯ ಕೊಡಗಿ, ಡಾ.ಮೋಹನ್ ಕಾಮತ್, ಡಾ.ಸದಾಶಿವ ಉಪ್ಪಾರ, ಮೇಲ್ವಿಚಾರಕರು, ಪಶು ವೈದ್ಯರು ಸೇರಿದಂತೆ ಪಶು ಸಂಗೋಪನೆ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!