ಕಾರವಾರ: ಜಿಲ್ಲೆಯಲ್ಲಿ ಮುಂದಿನ ೬ ತಿಂಗಳಿಗೆ ಸಾಕಾಗುವಷ್ಟು ಜಾನುವಾರುಗಳ ಮೇವು ದಾಸ್ತಾನು ಇದ್ದು, ಈ ವರ್ಷದ ಬೇಸಿಗೆಯಲ್ಲಿ ಹೈನುಗಾರರಿಗೆ ಜಾನುವಾರಿಗೆ ನೀಡಲು ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆಯಿದೆ.
ಎಮ್ಮೆ-ಆಕಳು ೪೧ ಸಾವಿರ, ಕುರಿ-ಮೇಕೆ ೧೯ ಸಾವಿರವಿದ್ದು, ೪.೪೪ ಲಕ್ಷ ಟನ್ ಮೇವು ಸಂಗ್ರಹವಿದೆ. ೨೬ ವಾರಗಳಿಗೆ ಅಂದರೆ ೬ ತಿಂಗಳು ಕಾಲ ಆಗಬಹುದೆಂದು ಅಂದಾಜಿಸಲಾಗಿದೆ. ಉತ್ತರ ಕನ್ನಡದಲ್ಲಿ ಬಹುತೇಕ ಮೇ ಎರಡನೇ ವಾರದಲ್ಲಿ ಮಳೆ ಬೀಳಲು ಆರಂಭವಾಗುವುದರಿಂದ ಮೇ ಅಂತ್ಯದ ವೇಳೆಗೆ ಹಸಿ ಮೇವಿನ ಲಭ್ಯತೆ ಪ್ರಾರಂಭವಾಗಲಿದ್ದು, ಹೀಗಾಗಿ ಜಾನುವಾರುಗಳಿಗೆ ಮೇವಿನ ತೊಂದರೆಯಾಗುವ ಸಾಧ್ಯತೆ ಕಡಿಮೆಯಿದೆ.ತಾಲೂಕಾವಾರು:
ಅಂಕೋಲಾ ತಾಲೂಕಿನಲ್ಲಿ ೩೪ ಸಾವಿರ ಟನ್ ಮೇವಿನ ಲಭ್ಯವಿದ್ದು, ೨೫ ವಾರಗಳಿಗೆ ಆಗಬಹುದು. ಭಟ್ಕಳದಲ್ಲಿ ೨೭ಸಾವಿರ ಟನ್ ಇದ್ದು, ೨೬ವಾರಗಳಿಗೆ, ಹಳಿಯಾಳ ೪೪ ಸಾವಿರ ಟನ್ ಇದ್ದು ೨೭ ವಾರಗಳಿಗೆ, ಹೊನ್ನಾವರ ೫೯ ಸಾವಿರ ಟನ್ ದಾಸ್ತಾನು ಇದ್ದು ೨೫ ವಾರಗಳಿಗೆ, ಕಾರವಾರ ೧೩ ಸಾವಿರ ಟನ್ ಇದ್ದು, ೨೬ ವಾರಗಳಿಗೆ, ಕುಮಟಾ ೪೪ ಸಾವಿರ ಟನ್ ಇದ್ದು, ೨೫ ವಾರಗಳಿಗೆ, ಮುಂಡಗೋಡ ತಾಲೂಕಿನಲ್ಲಿ ೩೭ ಸಾವಿರ ಟನ್ ಮೇವು ಇದ್ದು, ೨೭ ವಾರಗಳಿಗೆ ಸಾಕಾಗುತ್ತದೆ.ಶಿರಸಿ ತಾಲೂಕಿನಲ್ಲಿ ೫೭ ಸಾವಿರ ಟನ್ ಮೇವು ದಾಸ್ತಾನು ಇದ್ದು, ೨೫ ವಾರಗಳಿಗೆ, ಸಿದ್ದಾಪುರ ೫೧ಸಾವಿರ ಟನ್ ಇದ್ದು, ೨೫ವಾರಗಳಿಗೆ, ಯಲ್ಲಾಪುರ ೪೦ಸಾವಿರ ಟನ್ ಇದ್ದು ೨೫ ವಾರಗಳಿಗೆ, ಜೊಯಿಡಾ ೨೯ಸಾವಿರ ಟನ್ ಇದ್ದು, ೨೬ವಾರಗಳಿಗೆ, ದಾಂಡೇಲಿ ತಾಲೂಕಿನಲ್ಲಿ ೩ಸಾವಿರ ಟನ್ ಮೇವು ದಾಸ್ತಾನಿದ್ದು, ೨೮ ವಾರಗಳಿಗೆ ಆಗಬಹುದಾಗಿದೆ.
ಕಿಟ್ ವಿತರಣೆ:ಜಿಲ್ಲೆಗೆ ಮೇವಿನ ಬೀಜದ ಕಿಟ್ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಬರಗಾಲ ಇಲ್ಲದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಸರ್ಕಾರದಿಂದ ಕಡಿಮೆ ಕಿಟ್ ನೀಡಲಾಗಿದೆ. ೨೫೦೦ ಕಿಟ್ ಪಶು ಸಂಗೋಪನಾ ಇಲಾಖೆಯ ಮುಖ್ಯ ಕಚೇರಿಯಿಂದ ಬಂದಿದ್ದು, ಅಗತ್ಯವಿರುವ ಹೈನುಗಾರರಿಗೆ ವಿತರಣೆ ಮಾಡಲಾಗಿದೆ.
ಬರಗಾಲ ಪರಿಸ್ಥಿತಿಯಿದ್ದರೆ ಪ್ರಕೃತಿ ವಿಕೋಪ ನಿಧಿಯಲ್ಲಿ ಕಿಟ್ ವಿತರಣೆ ಮಾಡಲಾಗುತ್ತಿತ್ತು. ಕಳೆದ ಬಾರಿ ಮಳೆ ಉತ್ತಮವಾಗಿ ಬಿದ್ದ ಕಾರಣ ಮೇವಿನ ಕೊರತೆ ಉಂಟಾಗಿಲ್ಲ. ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಹೀಗಾಗಿ ಈ ಬಾರಿ ಮೇವಿನ ಕಿಟ್ ಕಡಿಮೆ ನೀಡಲಾಗಿದೆ. ಪ್ರಸಕ್ತ ವರ್ಷ ಬೇಸಿಗೆಯಲ್ಲಿ ಮೇವಿಗೆ ಸಮಸ್ಯೆ ಬಹುತೇಕ ಆಗುವುದಿಲ್ಲ. ಜಾನುವಾರುಗಳಿಗೆ ನೀರಿನ ತುಟಾಗ್ರತೆ ಉಂಟಾಗದೆ ಇದ್ದರೆ ಹೈನುಗಾರರಿಗೆ ತೊಂದರೆಯಾಗುವುದಿಲ್ಲ.