ಕುಂದಗೋಳ: ತಾಲೂಕಿನ ಕೊಂಕಣಕುರಹಟ್ಟಿ ಗ್ರಾಮದಲ್ಲಿ ದೃಷ್ಟಿದೋಷದಿಂದ ನರಳುತ್ತಿದ್ದ ವಿಜಯಲಕ್ಷ್ಮೀ ಗೌಡಪ್ಪಗೌಡ ಎಂಬ ಯುವತಿ ಇದೀಗ ಪ್ರಪಂಚ ನೋಡುವಂತಾಗಿದ್ದಾಳೆ. ಅವಳ ಬದುಕಿನಲ್ಲಿ ತುಂಬಿದ್ದ ಅಂಧಕಾರ ತೊಲಗಿ ಹೊಸ ಬೆಳಕು ಮೂಡಿದೆ.
ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಅವರು ಕುಂದಗೋಳ ಮತಕ್ಷೇತ್ರದ ಬಡವರು ಅನಾರೋಗ್ಯಕ್ಕೀಡಾದಾಗ ಅವರಿಗೆ ಉಚಿತವಾಗಿ ಚಿಕಿತ್ಸೆ ದೊರೆಯುವಂತಾಗಲು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತಮ್ಮ ಓರ್ವ ಸಹಾಯಕನನ್ನು ಕಾಯಂ ಇರಿಸಿದ್ದರು. ಅದೇ ದಾರಿಯಲ್ಲಿ ಸಾಗುತ್ತಿರುವ ಅವರ ಸಹೋದರ ಷಣ್ಮುಖ ಶಿವಳ್ಳಿ ಇದೀಗ ವಿಜಯಲಕ್ಷ್ಮಿ ಅವರ ಬಾಳಿಗೆ ಬೆಳಕಾಗಿದ್ದಾರೆ.
ಆಗಿದ್ದು ಇಷ್ಟು: ತಾಲೂಕಿನ ಕೊಂಕಣ ಕುರಹಟ್ಟಿ ಗ್ರಾಮದ ವೆಂಕನಗೌಡ ಗೌಡಪ್ಪಗೌಡ ಅವರ ಮಗಳಾದ ವಿಜಯಲಕ್ಷ್ಮಿಗೆ ಹುಟ್ಟುತ್ತಲೆ ಅಲ್ಪ ಪ್ರಮಾಣದ ದೃಷ್ಟಿದೋಷ ಇತ್ತು. ಮುಂದೆ ಪ್ರಾಥಮಿಕ ಶಾಲೆ ಓದುವಾಗ ದೃಷ್ಟಿ ಬಹಳ ಕಡಿಮೆ ಆಗಿ, ಓದಲು, ಬರೆಯಲು ಕಷ್ಟವಾಯಿತು.ವೆಂಕನಗೌಡರು ಮಗಳ ದೃಷ್ಟಿ ಸರಿಪಡಿಸಲು ಸ್ಥಳೀಯ ಸರ್ಕಾರಿ ಆಸ್ಪತ್ರೆ, ಹುಬ್ಬಳ್ಳಿಯ ವಾಸನ್ ಐ ಕೇರ್, ಜಯಪ್ರಿಯ ಆಸ್ಪತ್ರೆ ಹಾಗೂ ಬೆಂಗಳೂರಿನ ಶಂಕರ ಐ ಹಾಸ್ಪಿಟಲ್ ಸೇರಿದಂತೆ ವಿವಿಧ ಕ್ಯಾಂಪಸ್ ಇರುವ ಕಡೆ ಕರೆದುಕೊಂಡು ಅಲೆದಾಡಿ ಲಕ್ಷಾಂತರ ದುಡ್ಡು ಖರ್ಚು ಮಾಡಿದರು. ಕೊನೆಗೆ ತಮ್ಮದೇ ಒಂದು ಕಣ್ಣನ್ನು ಮಗಳಿಗೆ ದಾನ ಮಾಡಲು ನಿರ್ಧರಿಸಿದರು.
ತಪಾಸಣೆ ನಡೆಸಿದ ಡಾ. ದ್ಯಾಬೇರಿ ತಮಗೆ ಗೊತ್ತಿರುವ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಮಿಂಟು ಹಾಸ್ಪಿಟಲ್ ಮುಖ್ಯಸ್ಥ ಡಾ. ಜಿ.ಸುರೇಶಬಾಬು ಎಂಬುವರಿಗೆ ಕರೆ ಮಾಡಿ ವಿಷಯ ಮನವರಿಕೆ ಮಾಡಿದರು. ಡಾ.ಸುರೇಶಬಾಬು ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮಿ ಆವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಆಪರೇಷನ್ ಮಾಡಿ ದೃಷ್ಟಿ ಸುಸ್ಥಿತಿಗೆ ಬರುವಂತೆ ಮಾಡಿದ್ದಾರೆ.
ನನಗೆ ಹುಟ್ಟಿದಾಗಿನಿಂದ ಕಣ್ಣಿನ ದೃಷ್ಟಿದೋಷ ಇತ್ತು. ಅದು ಕ್ರಮೇಣ ಹೆಚ್ಚಿಗೆ ಆಗಿ ಓದಲು, ಬರೆಯಲು ತೊಂದರೆ ಆಯಿತು. ಷಣ್ಮುಖ ಶಿವಳ್ಳಿ ಅವರು ಬೆಂಗಳೂರ ಮಿಂಟು ಹಾಸ್ಪತ್ರೇಯಲ್ಲಿ ಉಚಿತವಾಗಿ ಆಪರೇಷನ್ ಮಾಡಿಸಿ ನನ್ನ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ ಎಂದು ವಿಜಯಲಕ್ಷ್ಮಿ ಗೌಡಪ್ಪಗೌಡ್ರ ಹೇಳಿದರು.