ವೇಮಗಲ್‌: ಸರ್ಕಾರಿ ಜಮೀನು ರಕ್ಷಣೆ ಮಾಡಿ

KannadaprabhaNewsNetwork | Published : Apr 8, 2025 12:30 AM

ಸಾರಾಂಶ

ವೇಮಗಲ್‌ನನ್ನು ಹೊಸ ತಾಲೂಕು ಕೇಂದ್ರ ಮಾಡಿದರೆ ಆ ಭಾಗದಲ್ಲಿ ಹೊಸದಾಗಿ ತಾಲೂಕು ಮಟ್ಟದ ಕಚೇರಿಗಳು, ಶಾಲೆ, ಕಾಲೇಜು ಆಸ್ಪತ್ರೆಗಾಗಿ ಜಮೀನಿನ ಅಗತ್ಯ ಇರುತ್ತದೆ. ಅದಕ್ಕಾಗಿ ಗುಂಡು ತೋಪು ಕೆರೆ, ಕುಂಟೆ ಸ್ಮಶಾನ ಜಮೀನುಗಳನ್ನು ಯಾರೂ ಭೋಗಸ್ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸದಂತೆ ಸಂರಕ್ಷಿಸಬೇಕು..

ಕನ್ನಡಪ್ರಭ ವಾರ್ತೆ ಕೋಲಾರಮುಂದಿನ ದಿನಗಳಲ್ಲಿ ವೇಮಗಲ್ ಅನ್ನು ಹೊಸ ತಾಲೂಕು ಆಗುವ ಸಾದ್ಯತೆ ಹೆಚ್ಚಾಗಿರುವುದರಿಂದ ಆ ಭಾಗದಲ್ಲಿರುವ ಗುಂಡು ತೋಪು, ಕೆರೆ, ಕುಂಟೆ, ಹಾಗೂ ಸರ್ಕಾರಿ ಜಮೀನುಗಳನ್ನು ಉಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಮಂಜೂರಾಗಿ ಖಾತೆಗಳಾಗಿರುವ ಜಮೀನುಗಳ ಪೋಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎರಡು ತಿಂಗಳೊಳಗೆ ರೈತರಿಗೆ ದಾಖಲೆಗಳನ್ನು ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು. ಸರ್ವೇ ಮಾಡಿಸಿ ಫೆನ್ಸಿಂಗ್

ವೇಮಗಲ್‌ನನ್ನು ಹೊಸ ತಾಲೂಕು ಕೇಂದ್ರ ಮಾಡಿದರೆ ಆ ಭಾಗದಲ್ಲಿ ಹೊಸದಾಗಿ ತಾಲೂಕು ಮಟ್ಟದ ಕಚೇರಿಗಳು, ಶಾಲೆ, ಕಾಲೇಜು ಆಸ್ಪತ್ರೆಗಾಗಿ ಜಮೀನಿನ ಅಗತ್ಯ ಇರುತ್ತದೆ. ಅದಕ್ಕಾಗಿ ಗುಂಡು ತೋಪು ಕೆರೆ, ಕುಂಟೆ ಸ್ಮಶಾನ ಜಮೀನುಗಳನ್ನು ಯಾರು ಅಕ್ರಮವಾಗಿ ಭೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲ. ಅದನೆಲ್ಲಾ ಸರ್ವೇ ಮಾಡಿ ಫೆನ್ಸಿಂಗ್ ಹಾಕಿಸುತ್ತೇವೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಂಡು ಅತಿಕ್ರಮಿಸಿಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ ರೈತರಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮಾಡಲಾಗಿರುವ ಜಮೀನುಗಳಿಗೆ ಹದ್ದುಬಸ್ತು ಗುರುತಿಸುವ ಕಾರ್ಯ ನಡೆಯುತ್ತಿದೆ, ರಾಜ್ಯದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಪೋಡಿ ಆಂದೋಲನದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳಲಿದೆ. ಪಿ.ನಂಬರ್ ಇರುವ ಜಮೀನುಗಳಿಗೆ ಪ್ರತ್ಯೇಕ ಪಹಣಿ ನೀಡುವ ಉದ್ದೇಶ ಈ ಆಂದೋಲನ ಪ್ರಮುಖ ಉದ್ದೇಶವಾಗಿದೆ ಎಂದರು. ನಿವೇಶನ ರಹಿತರಿಗೆ ಆಶ್ರಯ

ಆಶ್ರಯ ಯೋಜನೆಯಲ್ಲಿ ಶೀಘ್ರದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರದ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡುವ ಪ್ರಯತ್ನ ನಡೆಯುತ್ತಿದೆ, ತಾಲ್ಲೂಕಿನ ಅರಹಳ್ಳಿ ಬಳಿ ಈಗಾಗಲೇ ಜಮೀನನ್ನು ಗುರುತಿಸಲಾಗಿದೆ, ಅದಕ್ಕೂ ಮೊದಲು ಆಶ್ರಯ ಸಮಿತಿಯ ರಚನೆಯಾಗಬೇಕಿತ್ತು ಸಮಿತಿ ರಚನೆಯಾಗಿದೆ ಶೀಘ್ರದಲ್ಲೇ ಆಶ್ರಯ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು, ವಿಶೇಷವಾಗಿ ಆಪಾರ್ಟ್ಮೆಂಟ್ ರೀತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಆಲೋಚನೆ ಇದೆ ಎಂದು ಹೇಳಿದರು.

ಕುಡಾದಲ್ಲಿ ಹಣದ ಕೊರತೆ ಇದೆ ಹಾಗಾಗಿ ಕೂಡಾ ಬಡಾವಣೆಯಲ್ಲಿ ೨೭೦ ಕ್ಕೂ ಹೆಚ್ಚು ಖಾಲಿ ನಿವೇಶಗಳಿಗೆ ಅದನ್ನೆಲ್ಲಾ ಹರಾಜು ಮಾಡಿ ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ಜಮೀನು ಖರೀದಿ ಮಾಡಿ ಹೊಸ ಬಡಾವಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಸರ್ಕಾರದಿಂದ ಅನುಮತಿ ನೀಡಲು ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕೂಡ ಬಡಾವಣೆ ನಿರ್ಮಾಣ ಮಾಡಲಾಗುವುದು ಎಂದರು.

Share this article