ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಹಿಂದೆ ಪ್ರತಿ ಹಳ್ಳಿಗೊಂದರಂತೆ ಸರ್ಕಾರಿ ಶಾಲೆಗಳು ಆರಂಭಗೊಂಡು ಪ್ರಸ್ತುತ ಮುಚ್ಚುವ ಹಂತದಲ್ಲಿರುವ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಪುನಃಶ್ಚೇತನಕ್ಕಾಗಿ ಸರ್ವ ರೀತಿಯ ಸಹಕಾರ ನೀಡುವುದಾಗಿ ಶಾಸಕ ಡಾ.ಮಂತರ್‌ಗೌಡ ಹೇಳಿದ್ದಾರೆ.ಭಾನುವಾರ ಶಾಂತಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಸಮಾರೋಪದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಖಾಸಗಿ ಮತ್ತು ಅನುದಾನಿತ ಶಾಲೆಗಳು ಹೆಚ್ಚಾಗಿ ಇರದಿದ್ದ ಸಂದರ್ಭ ಗ್ರಾಮದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿ ಗ್ರಾಮದಲ್ಲಿ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆ ಆರಂಭಿಸಿತ್ತು. ಆದರೆ ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಪೋಷಕರ ಒಲವು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಬಹುತೇಕ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಹಾಗೂ ತಮ್ಮ ಸ್ವಂತ ಅನುದಾನವನ್ನು ನೀಡುವುದಾಗಿ ಘೋಷಿಸಿದರು.ಶಾಲಾ ಹಂತದಲ್ಲಿನ 12 ವರ್ಷಗಳ ವಿದ್ಯಾರ್ಥಿ ಜೀವನ ಎಲ್ಲಾ ಮಕ್ಕಳ ಪಾಲಿಗೆ ಸುವರ್ಣ ಕಾಲವಾಗಿದೆ. ಬಾಲ್ಯದ ಜೀವನ ಮತ್ತೆಂದು ದೊರಕುವುದಿಲ್ಲ. ಹೀಗಾಗಿ ಶಾಂತಳ್ಳಿ ಸರ್ಕಾರಿ ಶಾಲೆಯಲ್ಲಿ ಶತಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಶತಮನೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ದುಡಿದ ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳ ಸಂಗಮ ನಿಜಕ್ಕೂ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಈ ಸಂದರ್ಭ ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಆರಂಭದ ದಿನಗಳಲ್ಲಿ 300 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು. ಪ್ರಸ್ತುತ 1 ರಿಂದ 7ನೇ ತರಗತಿವರೆಗೆ ಕೇವಲ 21 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹೋಬಳಿ ಮಟ್ಟದಲ್ಲಿರುವ ಶತಮಾನ ಕಂಡ ಶಾಲೆಯನ್ನು ಉಳಿಸಿಕೊಳ್ಳಲು ಎಲ್ಲರೂ ಪಣ ತೊಡಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಮತ್ತು ವರ್ಗಾವಣೆಗೊಂಡ ಶಿಕ್ಷಕರನ್ನು, ಅತಿಥಿ ಶಿಕ್ಷಕರುಗಳಾಗಿ ದುಡಿದವರನ್ನು ಶತಮಾನೋತ್ಸವ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಹರಪಳ್ಳಿ ರವೀಂದ್ರ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಶಾಂತಳ್ಳಿ ಗ್ರಾಪಂ ಅಧ್ಯಕ್ಷೆ ಸವಿತ ವಿಜಯ್, ಹಳೆಯ ವಿದ್ಯಾರ್ಥಿ ಹಾಗೂ ತಹಸೀಲ್ದಾರ್ ಕೃಷ್ಣಮೂರ್ತಿ, ಪ್ರಮುಖರಾದ ಸಜನ್ ಮಂದಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಗುರುಪ್ರಸಾದ್, ದಾನಿಗಳಾದ ಚಂದ್ರಕಲ, ಹಳೆಯ ವಿದ್ಯಾರ್ಥಿ ಪ್ರಸ್ತುತ ಸಬ್ ಇನ್ಸ್ಪೆಕ್ಟರ್ ಆಗಿರುವ ಸೋನಿ, ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ಕುಮಾರಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶಿಕ್ಷಕಿ ಪ್ರೇಮ, ಶಾಲೆಯ ಮುಖ್ಯೋಪಾಧ್ಯಾಯ ಪರಮೇಶ್ವರಪ್ಪ, ಹಾಲಿ ಶಿಕ್ಷಕರಾದ ಜಯಮ್ಮ, ಸಂತೋಷ್ ಮತ್ತು ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.ಗ್ರಾಮದ ಮಹಿಳೆಯರ ತಂಡದಿಂದ ನಾಡಗೀತೆ ನಂತರ ಶಾಲೆಯ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆ ಆಕರ್ಷಕವಾಗಿ ಮೂಡಿಬಂತು. ಶತಮಾನೋತ್ಸವದ ಸವಿನೆನಪಿಗಾಗಿ ಹೊರತರುತ್ತಿರುವ ಸ್ಮರಣ ಸಂಚಿಕೆ ‘ಶತಕದ ಅಂತರಂಗ’ ಸ್ಮರಣ ಸಂಚಿಕೆಯನ್ನು ಶಾಸಕ ಮಂತರ್‌ಗೌಡ ಅವರು ಅನಾವರಣಗೊಳಿಸಿದರು. ಈ ಸಂದರ್ಭ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೆ.ಎಂ.ಕೃಷ್ಣಕುಮಾರ್ ಮತ್ತಿತತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಶತಮಾನೋತ್ಸವದ ನೆನಪಿಗಾಗಿ ಶಾಲೆಯ ಮುಂಭಾಗದಲ್ಲಿ ನೂತನವಾಗಿ ಅಳವಡಿಸಿರುವ ಪ್ರವೇಶದ್ವಾರವನ್ನು ಉದ್ಯಮಿ ಹರಪಳ್ಳಿ ರವೀಂದ್ರ ಅವರು ಉದ್ಘಾಟಿಸಿದರು. ನಂತರ ಬೆಂಗಳೂರಿನ ಉದ್ಯಮಿ ಮೋಹನ್‌ಕುಮಾರ್ ಅವರು ಶಾಲೆಯಲ್ಲಿ ನಿರ್ಮಿಸಿಕೊಟ್ಟಿರುವ ಶಾರದಾದೇವಿಯ ಪ್ರತಿಮೆಯನ್ನು ಉದ್ಘಾಟಿಸಿದರು. 100 ಕಳಶ ಹೊತ್ತ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ಸಭಾಭವನದವರೆಗೆ ಸಬ್ಬಮ್ಮದೇವಿ ತಂಡದಿಂದ ಆಕರ್ಷಕ ಸುಗ್ಗಿ ಕುಣಿತ ನಡೆಯಿತು.ಶಾಲೆಗೆ ದುಡಿದ ಪ್ರಮುಖರು
ಶತಮಾನ ಕಂಡ ಶಾಂತಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು 1924ರಲ್ಲಿ ಗ್ರಾಮದ ಹಿರಿಯರಾದ ಅಪ್ಪಯ್ಯ, ಮುಳ್ಳಯ್ಯ, ನಂಜಯ್ಯ, ಉತ್ತಯ್ಯ, ತಿಮ್ಮಯ್ಯ, ಮಾಚಯ್ಯ ಮುಂತಾದವರ ಪರಿಶ್ರಮದ ಫಲವಾಗಿ ಗ್ರಾಮದಲ್ಲಿ ಶಾಲೆಯು ಆರಂಭಗೊಡಿತು. ನಂತರ ಶಾಲೆಯ ಸಮಗ್ರ ಅಭಿವೃದ್ಧಿಗೆ ‘ಸಿ’ ರಾಜ್ಯವಾಗಿದ್ದ ಅಂದಿನ ಕೂರ್ಗ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕೆ.ಮಲ್ಲಪ್ಪನವರು ಮತ್ತು ಶಾಂತಳ್ಳಿ ಕ್ಷೇತ್ರದ ಶಾಸಕ ಹರಗದ ಮುತ್ತಣ್ಣನವರು ಅಪಾರವಾಗಿ ಶ್ರಮಿಸಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರ ತಂದೆ ರಾಮರಾಯರು 1936 ರಲ್ಲಿ ಶಾಂತಳ್ಳಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು
ಇದೇ ಶಾಲೆಯಲ್ಲಿ 1937ರಲ್ಲಿ ಓದಿ ಕೊಡಗಿನಲ್ಲಿ ಶಕ್ತಿ ದಿನಪತ್ರಿಕೆಯನ್ನು 1957ರಲ್ಲಿ ಆರಂಭಿಸಿದ ಕೊಡಗು ಪತ್ರಿಕಾರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಬಿ.ಎಸ್.ಗೋಪಾಲಕೃಷ್ಣ ಅವರು ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ಇವರ ಹಿರಿಯ ಸಹೋದರ ಬಿ.ಎಸ್.ಸೀತಾರಾಮಯ್ಯ ಜೇನು ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಸೂಪರಿಟೆಂಡೆಂಟ್ ಇಂಜಿನಿಯರ್ ಆಗಿ ನಿವೃತ್ತ ಹೊಂದಿದ ಮುತ್ತಣ್ಣ, ಪ್ರಸ್ತುತ ಸೋಮವಾರಪೇಟೆಯ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣಮೂರ್ತಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾಗಿರುವ ಕುಮಾರಸ್ವಾಮಿ, ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ಎಂ.ಲೋಕೇಶ್, ತಾಪಂ ಸದಸ್ಯರಾಗಿದ್ದ ಕೆ.ಎಂ.ಕೃಷ್ಣಕುಮಾರ್, ಶತಮಾನ ಕಂಡ ಶಾಂತಳ್ಳಿ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿ ದುಡಿದ ಕೆ.ಟಿ.ರಾಜಶೇಖರ್, ಮುತ್ತಣ್ಣ, ಪ್ರಸ್ತುತ ಅಧ್ಯಕ್ಷ ಹಿರಿಯ ವಕೀಲ ಜಯೇಂದ್ರ, ಕೇಂದ್ರ ಕೃಷಿ ಇಲಾಖೆಯಲ್ಲಿ ಹಿರಿಯ ಆಡಳಿತಾಧಿಕಾರಿಯಾಗಿ ನಿವೃತ್ತರಾಗಿ ಪ್ರಸ್ತುತ ಬೆಂಗಳೂರಿನ ಹೈಕೋರ್ಟ್‌ನಲ್ಲಿ ವಕೀಲರಾಗಿರುವ ಟಿ.ಎ.ವಿಶ್ವನಾಥ್, ನಿವೃತ್ತ ಡೆಪ್ಯೂಟಿ ಕಮಿಷನರ್ ಟಿ.ಎ.ನಾಗೇಶ್(ಸಹೋದರರು), ಪ್ರಸ್ತುತ ಸಬ್ ಇನ್ಸ್ಪೆಕ್ಟರ್ ಆಗಿರುವ ಸೋನಿ, ಯೂನಿಯನ್ ಬ್ಯಾಂಕ್ ಕ್ಯಾಷಿಯರ್ ಲಿಂಗರಾಜು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.