ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ

KannadaprabhaNewsNetwork |  
Published : Sep 19, 2025, 01:04 AM IST
ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಬೆಮುಲ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಎಮ್ಮೆ ಹಾಲಿನ ದರವನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಮುಲ್‌ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

 ಬೆಳಗಾವಿ :  ಬೆಳಗಾವಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಎಮ್ಮೆ ಹಾಲಿನ ದರವನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಮುಲ್‌ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ನಗರದ ಗಾಂಧಿಭವನದಲ್ಲಿ ಗುರುವಾರ ನಡೆದ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಹಸುವಿನ ಹಾಲಿನ ಕುರಿತು ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಎಮ್ಮೆ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತದೆ. 

ಆದರೆ, ಹಸುವಿನ ಹಾಲಿನ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದರು.ದೀಪಾವಳಿಗೆ ಇನ್ನು ಹಾಲು ಹೆಚ್ಚಾಗುತ್ತದೆ. ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದೆ. ಯಾವುದೇ ದರ ಕಡಿಮೆ ಮಾಡುವುದಿಲ್ಲ. ಸರ್ಕಾರದ ನಿರ್ಧಾರ ಮಾಡಿದೆ. ರೈತರ ಹಿತದೃಷ್ಟಿ ಕಾಪಾಡುತ್ತೇವೆ. ಎಮ್ಮೆ ಹಾಲಿಗೆ ವ್ಯಾಪಕ ಬೇಡಿಕೆ ಬಂದಿದೆ. ಬೆಳಗಾವಿ, ಪುಣೆ ಮತ್ತು ಗೋವಾದಲ್ಲಿ ಮಾರಾಟವಾಗುತ್ತದೆ. 

ಎಮ್ಮೆ ಹಾಲಿಗೆ ಹೆಚ್ಚಳ ದರ ನೀಡಲು ಚಿಂತನೆ ಮಾಡಲಾಗುತ್ತದೆ. ಒಕ್ಕೂಟಕ್ಕೆ ಹೊರೆಯಾದರೆ, 2.50 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ 3 ಲಕ್ಷ ಲೀಟರ್‌ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.ಧಾರವಾಡದಿಂದ ಬರುವ ಪಶು ಹಾಲಿನಲ್ಲಿ ಸಮಸ್ಯೆಯಿದೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗುಣಮಟ್ಟ ಸರಿಯಿದೆಯೋ? ಇಲ್ಲವೋ? ಎಂಬುದನ್ನು ಹೇಳಬೇಕು. ಅದನ್ನು ಪರಿಶೀಲಿಸಿ, ಸೆ.24 ರಂದು ಕೆಎಂಎಫ್‌ ಸರ್ವಸಾಧಾರಣ ಸಭೆ ನಡೆಯಲಿದ್ದು, ಅಲ್ಲಿ ಹಸುವಿನ ಹಾಲಿನ ಸಮಸ್ಯೆ ಕುರಿತು ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. 

ಒಕ್ಕೂಟದ ಅಭಿವೃದ್ಧಿಗೆ, ರೈತರ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಕಳೆದ ಬಾರಿ ₹ 13 ಕೋಟಿ ಲಾಭವಾಗಿತ್ತು. ಶೇ. 60 ಅನುದಾನದಲ್ಲಿ ನಿಮಗೆ ಹಣ ಮರಳಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಒಕ್ಕೂಟವನ್ನು ನಂ.1 ಮಾಡಲು ಶ್ರಮಿಸಲಾಗುವುದು. ನಾನು, ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. 

 1 ರುಪಾಯಿ ಲೆಕ್ಕ ಹಾಕಿ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.ರೈತರು ಗುಣಮಟ್ಟದ ಹಾಲು ಪೂರೈಸಬೇಕು. ಕಳೆದ ಬಾರಿ ₹ 400 ಕೋಟಿ ವ್ಯಾಪಾರ ವಹಿವಾಟು ಮಾಡಲಾಗಿದೆ. ಈ ಬಾರಿ ₹ 500 ಕೋಟಿ ವ್ಯವಹಾರ ಮಾಡುವ ಗುರಿ ಹೊಂದಲಾಗಿದೆ. ನಮ್ಮ ಒಕ್ಕೂಟಕ್ಕೆ ಜಿಲ್ಲೆಯ 35 ಸಾವಿರ ರೈತರು ಹಾಲು ಪೂರೈಕೆ ಮಾಡುತ್ತಿದ್ದಾರೆ. ಅಕಾಲಿಕವಾಗಿ ಮೃತಪಟ್ಟ ಸದಸ್ಯರ ಕುಟುಂಬದ ಅವಲಂಬಿತರಿಗೆ ರೈತರ ಕಲ್ಯಾಣ ನಿಧಿಯಿಂದ ₹5 ರಿಂದ ₹ 10 ಸಾವಿರ ಪರಿಹಾರ ನೀಡುತ್ತ ಬರಲಾಗಿತ್ತು. ಆದರೆ, ಈ ಅಲ್ಪ ಪ್ರಮಾಣದ ಹಣ ಕೊಡುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಹಾಗಾಗಿ, ಈಗ ರೈತರಿಗೆ ₹1 ಲಕ್ಷ ಜೀವ ವಿಮೆ ಯೋಜನೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ವಿಮಾ ಕಂಪನಿಗೆ ₹ 60 ಲಕ್ಷ ಹಣವನ್ನು ಒಕ್ಕೂಟದಿಂದ ಪಾವತಿಸಲಾಗುವುದು ಎಂದು ಹೇಳಿದರು. 

ಕಮಿಷನ್‌ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೆಚ್ಚಳ ಮಾಡಿದರೆ ಒಕ್ಕೂಟಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಕ್ಕೂಟಕ್ಕೆ ಲಾಭ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ನೀವೆಲ್ಲರೂ ಬೆನ್ನೆಲುಬಾಗಬೇಕು. ಖಾನಾಪುರದಲ್ಲಿ 10 ದಿನಕ್ಕೆ ಬಿಲ್‌ ಹೋಗುತ್ತಿದೆ. ವಾರದ ಸಂತೆ ಈ ಬಿಲ್‌ ಮೇಲೆ ರೈತರ ಜೀವನ ನಡೆಯಬೇಕು. ತ್ವರಿತವಾಗಿ ಬಿಲ್‌ ಪಾವತಿಸಲು ಶ್ರಮಿಸಲಾಗುವುದು. ನಮ್ಮ ಒಕ್ಕೂಟ ಹಳೆಯದಾಗಿದ್ದು, ಯಂತ್ರೋಪಕರಣಗಳು ಹಳೆಯದ್ದಾಗಿವೆ.  

ಬೇರೆ ಕಡೆ ಡೈರಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ 4-5 ಎಕರೆ ಜಮೀನು ಬೇಕಾಗುತ್ತದೆ. ಈ ಕುರಿತು ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ನಮ್ಮ ಆಡಳಿತದ ಅವಧಿಯಲ್ಲಿ ರೈತರ ಹಿತದೃಷ್ಟಿಯಿಂದ ಉತ್ತಮ ಸೇವೆ ಸಲ್ಲಿಸಲಾಗುವುದು. ಅಲ್ಲದೇ ಬಿಡಿಸಿಸಿ ಬ್ಯಾಂಕ್‌ ಮೂಲಕವೇ ರೈತರಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಲಾಗುವುದು. 

ರೈತರು ಹೆಚ್ಚಿನ ಪ್ರಮಾಣದಲ್ಲಿ ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು ಎಂದು ಮನವಿ ಮಾಡಿದರು.ಈ ವೇಳೆ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಡಾ.ಬಸವರಾಜ ಪರವಣ್ಣವರ, ಬಾಬುರಾವ್ ವಾಘಮೋಡೆ, ವಿರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ ವಿ.ಎನ್. ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ