ಪರಶಿವಮೂರ್ತಿ ದೋಟಿಹಾಳಕುಷ್ಟಗಿ: ದನದ ಶೆಡ್ ಇಲ್ಲದ ಪರಿಣಾಮ ಗುಡ್ಡಗಾಡು ಪ್ರದೇಶ ವ್ಯಾಪ್ತಿಯ ಗ್ರಾಮಗಳಲ್ಲಿನ ರೈತರ ಜಾನುವಾರುಗಳು ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿದ್ದವು. ಇಂತಹ ಪ್ರಾಣಿಗಳ ಉಪಟಳವು ನರೇಗಾ ಯೋಜನೆಯಿಂದ ಸದ್ದಿಲ್ಲದೆ ನಿಯಂತ್ರಣಕ್ಕೆ ಬರುತ್ತಿದ್ದು, ರೈತರಿಗೆ ವರದಾನವಾಗಿದೆ.ಹೌದು. ತಾಲೂಕಿನ ಹಳ್ಳಿಗಳಲ್ಲಿ ಜಾನುವಾರು ಸಾಕಾಣಿಕೆ ಮಾಡಿರುವ ರೈತಾಪಿ ವರ್ಗಕ್ಕೆ ನರೇಗಾ ಯೋಜನೆಯಡಿ ದನದ ಶೆಡ್ ನಿರ್ಮಿಸಿ ಕೊಡಲಾಗುತ್ತಿದೆ. ಇದರಿಂದ ಗುಡ್ಡಗಾಡು ಪ್ರದೇಶದಲ್ಲಿನ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿದೆ.ಪ್ರಾಣಿ ಭೀತಿ ದೂರ: ಬರದ ಹಿನ್ನೆಲೆಯಲ್ಲಿ ಕಾಡಿನಲ್ಲಿ ಆಹಾರ ಸಿಗದೇ ನಾಡಿಗೆ ಆಹಾರ ಅರಸಿ ಬರುವ ಚಿರತೆ, ತೋಳ, ಕರಡಿಯಂತಹ ಪ್ರಾಣಿಗಳು ಜೀವ ಸಂಕುಲದ ಮೇಲೆ ನಿರಂತರ ದಾಳಿ ಮಾಡುತ್ತಿವೆ. ಕಾಡುಪ್ರಾಣಿಗಳಿಂದ ದನ-ಕರುಗಳ ರಕ್ಷಣೆಯೇ ತಲೆನೋವಾಗಿತ್ತು. ಆದರೆ ಇದೀಗ ನರೇಗಾದಡಿ ದನದ ಶೆಡ್ ನಿರ್ಮಿಸಿಕೊಳ್ಳುತ್ತಿರುವುದರಿಂದ ಕಾಡುಪ್ರಾಣಿಗಳ ದಾಳಿಯಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ.ಎಲ್ಲೆಲ್ಲಿ ನಿರ್ಮಾಣ?: ಕುಷ್ಟಗಿ ತಾಲೂಕಿನ ಮಾಲಗಿತ್ತಿ, ಕಾಟಾಪುರ, ಜುಮಲಾಪುರ, ಕಿಲ್ಲಾರಹಟ್ಟಿ, ಮೇಣೆದಾಳ ಇನ್ನಿತರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ದನದ ಶೆಡ್ ನಿರ್ಮಿಸಲಾಗಿದೆ.ಗ್ರಾಮದಲ್ಲಿ ದನಕರುಗಳು ಇರುವ ರೈತರು ಧನದ ಶೆಡ್ ನಿರ್ಮಿಸಿಕೊಂಡು, ಕಾಡು ಪ್ರಾಣಿಗಳಿಂದ ದನಕರುಗಳಿಗೆ ರಕ್ಷಣೆ ಒದಗಿಸಿಕೊಂಡಿದ್ದಾರೆ. ಮಳೆ, ಗಾಳಿ, ಸೊಳ್ಳೆ ಕಾಟ ತಪ್ಪಿದೆ. ಕೆಲವರು ನರೇಗಾ ಯೋಜನೆಯಡಿ ಸಿಗುವ ಸಹಾಯಧನಕ್ಕಿಂತ ಕೆಲವರು ಹೆಚ್ಚಿನ ಹಣ ವಿನಿಯೋಗಿಸಿ ಹೈಟೆಕ್ ಆಗಿ ದನದ ಶೆಡ್ ನಿರ್ಮಿಸಿಕೊಂಡು ವನ್ಯಜೀವಿಗಳ ಹಾವಳಿಯಿಂದ ತಪ್ಪಿಸಿಕೊಂಡಿದ್ದಾರೆ.ಶೆಡ್ ನಿರ್ಮಾಣ ಗುರಿ: ಕುಷ್ಟಗಿ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ತಾಪಂನಿಂದ 453 ದನದ ಶೆಡ್ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಪೈಕಿ 96 ದನದ ಶೆಡ್ ಪ್ರಗತಿಯಲ್ಲಿದ್ದು, ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದೆ.ರೈತರಿಗೆ ಅನುಕೂಲವಾಗಲೆಂದು ನರೇಗಾ ಯೋಜನೆಯಡಿ ದನದ ಶೆಡ್ ನಿರ್ಮಿಸಲಾಗುತ್ತಿದ್ದು, ಗುಡ್ಡಗಾಡು ಪ್ರದೇಶ ವ್ಯಾಪ್ತಿಯ ಗ್ರಾಮಗಳಲ್ಲಿ ವನ್ಯಜೀವಿಗಳ ಕಾಟದಿಂದ ರೈತರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ದನದ ಶೆಡ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ ಎನ್ನುತ್ತಾರೆ ಕುಷ್ಟಗಿ ತಾಪಂ ಇಒ ನಿಂಗಪ್ಪ ಮಸಳಿ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ನನಗೆ ಅನುಕೂಲವಾಗಿದೆ. ಸುಸಜ್ಜಿತ ದನದ ಶೆಡ್ ನಿರ್ಮಿಸಿಕೊಂಡಿದ್ದೇವೆ. ಇದರಿಂದ ನನಗೆ ನಿಶ್ಚಿಂತೆಯಿಂದ ಜೀವನ ಸಾಗಿಸಲು ಸಹಕಾರಿಯಾಗಿದೆ ಎನ್ನುತ್ತಾರೆ ಕಾಟಾಪುರ ರೈತ ಪರಸಪ್ಪ.