ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಮೊನ್ನೆ ಅವರು, ನಿನ್ನೆ ಇವರು ಎಲ್ಲರೂ ಕಾಂಗ್ರೆಸ್ಸಿಗರು ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ನಾಂದಿ ಹಾಡಿರುವ ಹೊಸ ವಿಷಯವಾಗಿದೆ.
ಹಲವು ದಶಕಗಳಿಂದ ಮನೆಯೊಂದು ಮುರು ಬಾಗಿಲಾಗಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ನಾಯಕರು,ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ಆಂತರಿಕ ಕಾಳಗ ಇತ್ತೀಚೆಗೆ ಬಹಿರಂಗವಾಗಿಯೇ ಸಾಗಲಾರಂಭಿಸಿದ್ದು, ಇದರ ಪರಿಣಾಮವಾಗಿ ಇಷ್ಟು ದಿನ ಜಿಲ್ಲಾ ಕೇಂದ್ರವಾದ ರಾಯಚೂರನ್ನು ಸುಡುತ್ತಿದ್ದ ಕೈ ಪಕ್ಷದಲ್ಲಿನ ಗುಂಪು ಸಂಘರ್ಷದ ಕಿಚ್ಚು ಇದೀಗ ಜಿಲ್ಲೆಯಾದ್ಯಂತ ಆವರಿಸಲು ಆರಂಭಿಸಿದೆ.ಮೊನ್ನೆ ಸ್ಥಳೀಯ ಜಿಪಂ ಸಭಾಂಗಣದಲ್ಲಿಆಯೋಜಿಸಿದ್ದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಡಿಸಿಸಿ ಬಣಗಳ ನಡುವಿನ ಕೋಪ-ತಾಪ ಸ್ಪೋಟಗೊಂಡಿತ್ತು. ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರ ವಿರುದ್ಧವೇ ಸ್ವಪಕ್ಷದ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ, ಬಸನಗೌಡ ಬಾದರ್ಲಿ ಹಾಗೂ ಶರಣಗೌಡ ಪಾಟೀಲ್ ಬಯ್ಯಾಪುರ ನಡುವೆ ಮಿನಿ ಯುದ್ಧವೇ ನಡೆದಿತ್ತು.
ಇದಕ್ಕೆ ತಾಜಾ ಉದಾಹಾರಣೆ ಎಂದರೆ ನಿನ್ನೆ ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊರೇಬಾಳದಲ್ಲಿ ವಿಧಾಣ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್ ಗುಂಪು ಮತ್ತು ಮಾಜಿ ಶಾಸಕ ಡಿ.ಎಸ್.ಹುಲಗೇರಿ ಬಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕರ ಬೆಂಬಲಿಗರ ನಡುವೆ ನಡೆದ ಹಲ್ಲೆ ಯತ್ನದ ಪ್ರಕರಣವಾಗಿದೆ.ಶತಮಾನಗಳಿಂದ ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಎಂಎಲ್ಸಿ ಎ.ವಸಂತ ಕುಮಾರ ಅವರುಗಳ ನಡುವಿನ ಬಣ ರಾಜಕೀಯದಿಂದಾಗಿ ಪಕ್ಷ ಸಂಘಟನೆಗೆ ತೀವ್ರವಾಗಿ ಹಿನ್ನಡೆ ಉಂಟಾಗುತ್ತಿದೆ. ಯಾವ ಬಣದಲ್ಲಿ ಗುರುತಿಸಿಕೊಳ್ಳಬೇಕೋ ಎನ್ನುವ ಗೊಂದಲದ ವಾತಾವರಣ ಡಿಸಿಸಿಯಲ್ಲಿ ನಿರ್ಮಾಣಗೊಂಡಿರುವ ಈ ವೇಳೆ ಲಿಂಗಸಗೂರಿನಲ್ಲಿ ಸಹ ಬಣಗಳ ಜಗಳವು ಆಡಳಿತರೂಢ ಪಕ್ಷಕ್ಕೆ ಮುಜುಗರನ್ನುಂಟು ಮಾಡಿದೆ.
ಜಿಲ್ಲೆಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರನ್ನು ಕರೆಸುವುದರಲ್ಲಿ ಬಣಗಳ ಶಕ್ತಿಪ್ರದರ್ಶನ, ಸಮಾರಂಭಗಳ ಆಯೋಜನೆ, ಅಧಿಕಾರಿಗಳ ವರ್ಗಾವಣೆ ಯಲ್ಲಿಯೂ ಮೇಲಾಟದ ತಂತ್ರಗಾರಿಕೆಗಳು ಸಹ ಡಿಸಿಸಿ ಗುಂಪುಗಾರಿಕೆಯನ್ನು ಪ್ರತಿಬಿಂಬಿಸುತ್ತಲೆಯೇ ಇವೆ.ಹೀಗೆ ಮೊನ್ನೆ ಕೆಡಿಪಿ ಸಭೆಯಲ್ಲಿ, ನಿನ್ನೆ ರಸ್ತೆ ಮೇಲೆ ಹಾಗೂ ದಶಕಗಳಿಂದ ಪಕ್ಷದ ಆತಂರೀಕ ಹಾಗೂ ಬಾಹ್ಯವಾಗಿ ನಡುಯುತ್ತಲೇ ಇರುವ ಗುಂಪು ಸಂಘರ್ಷದ ಸುಳಿಯಲ್ಲಿ ಕೈ ಪಕ್ಷ ಸಂಪೂರ್ಣವಾಗಿ ಸಕ್ಕಿಹಾಕಿಕೊಂಡು ಪಕ್ಷ ಸಂಘಟನೆ, ನಮ್ಮಂತ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಾ ಬರುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ನೊಂದ ಕಾರ್ಯಕರ್ತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
-------------------ಭೂಪನಗೌಡ ಸೇರಿ 4 ಜನರ ಮೇಲೆ ಜಾತಿ ನಿಂದನೆ ಕೇಸ್
ಕನ್ನಡಪ್ರಭ ವಾರ್ತೆ ಲಿಂಗಸುಗೂರುತಾಲೂಕಿನ ಗೊರೇಬಾಳದಲ್ಲಿ ಎಂಎಲ್ಸಿ ಮೇಲೆ ಹಲ್ಲೆ ಘಟನೆಗೆ ಬಳಿಕ ಬಯ್ಯಾಪುರ ಹಿಂಬಾಲಕರಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಎಂಎಲ್ಸಿ ಬಯ್ಯಾಪುರ ರವರ ಖಾಸಗಿ ಆಪ್ತ ಸಹಾಯಕ ಸೇರಿದಂತೆ ಒಟ್ಟು 4 ಜನರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಗೊರೇಬಾಳದಲ್ಲಿ ಇತ್ತಿಚೀಗೆ ಎಂಎಲ್ಸಿ ಶರಣಗೌಡ ಬಯ್ಯಾಪುರ ಮತ್ತು ಹೂಲಗೇರಿ ಬೆಂಗಲಿಗರ ಮಧ್ಯೆ ಘರ್ಷಣೆ ನಡೆದಿತ್ತು. ಇದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಹಾಗೂ ಇತರರು ಸಂಚು ರೂಪಿಸಿ ಎಂಎಲ್ಸಿಗೆ ನಿಂದನೆ ಮಾಡಿ ಅವರ ಬೆಂಬಲಿಗ ಜಗದೀಶಗೌಡರ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದು, ದೂರು ಆಧರಿಸಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ.ಹೂಲಗೇರಿ ಬೆಂಬಲಿಗರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ ಭೂಪನಗೌಡ ಕರಡಕಲ್, ಎಂಎಲ್ಸಿ ಶರಣಗೌಡ ಬಯ್ಯಾಪುರ ರವರ ಖಾಸಗಿ ಸಹಾಯಕ ಚನ್ನರೆಡ್ಡಿ ಬಿರದಾರ ಹಾಗೂ ಭೂಪನಗೌಡರ ಪುತ್ರ ಶರಣಗೌಡ ಕರಡಕಲ್ ಹಾಗೂ ಜಗದೀಶ ಗೌಡ ಹಾಲಬಾವಿಯವರ ಮೇಲೆ ಪ್ರೇಮಗೌಡ ಎಂಬುವವರು ದೂರು ನೀಡಿದ್ದು ದೂರು ಆಧರಿಸಿ ಬಿಎನ್ಎಸ್ ಕಾಯ್ದೆ ಕಲಂ 189 (2), 191 (2), 133 (2), 133, 54, 352, 351(2), 190 ಅಟ್ರಾಸಿಟಿ ತಿದ್ದುಪಡಿ ಕಾಯ್ದೆ ಕಲಂ 3ಸಿಎಲ್ (1), (ಆರ್),(ಎಸ್), 3 (2) (ವಿಎ)ರಡಿ ಜಾಂತಿ ನಿಂದನೆ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದು ಕ್ಷೇತ್ರದ ಜನರಿಗೆ ಕಾಂಗ್ರೆಸ್ ಪಕ್ಷದ ಮುಖಂಡರ ಮೂಲಕ ಅಭಿವೃದ್ಧಿ ಕೆಲಸಗಳ ನಡೆಯುತ್ತವೆ ಎಂಬ ಆಶಾಭಾವನೆ ಜನರಲ್ಲಿ ಇತ್ತು. ಆದರೆ ಕಾಂಗ್ರೆಸ್ದಲ್ಲಿ ಪರಸ್ಪರ ಭಿನ್ನಮತ ತೀವ್ರ ಬಿರುಕು ಉಂಟು ಮಾಡಿದೆ. ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಎಂಎಲ್ಸಿ ಶರಣಗೌಡ ಬಯ್ಯಾಪುರ ಬೆಂಬಲಿಗರ ಮಧ್ಯೆ ಘಟನೆಗಳು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಆರೋಪ ಪ್ರತ್ಯಾರೋಪಗಳು ಮೇರೆ ಮೀರಿವೆ. ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆ ಕದನ ಏರ್ಪಟ್ಟು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಒಂದೇ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ದೊಡ್ಡ ಬಿರುಕಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಬಣ ರಾಜಕಾರಣ ಕೊಡಲಿ ಏಟು ನೀಡಿದೆ.