ಅದ್ಧೂರಿ ಡಾ.ರಾಜ್‌ಕುಮಾರ್ ಹುಟ್ಟುಹಬ್ಬ
ದೇಶದಲ್ಲಿ ಕನ್ನಡ ರಾಜ್ಯ ಹಾಗೂ ಭಾಷೆಯನ್ನು ಗುರುತಿಸುತ್ತಿದ್ದಾರೆ ಎಂದರೆ ಡಾ.ರಾಜ್‌ಕುಮಾರ್‌ರವರ ಹೋರಾಟಗಳು ಹಾಗೂ ಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂದು ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣಗೋಕಾಕ್ ತಿಳಿಸಿದರು.
ಪಟ್ಟಣದ ಬಿ.ಎಂ.ರಸ್ತೆಯ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಡಾ.ರಾಜ್‌ಕುಮಾರ್ ರವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ಕನ್ನಡ ನಾಡು ನುಡಿ ಜಲದ ವಿಚಾರದಲ್ಲಿ ಎಂದೂ ರಾಜಿಯಾಗದೆ ಹೋರಾಟದ ಬದುಕಿನಲ್ಲಿ ಬಂದ ರಾಜ್‌ಕುಮಾರ್ ಸಿನಿಮಾ ರಂಗದಲ್ಲಿ ಮೇರು ನಟರಾಗಿ, ಮಾಣಿಕ್ಯದಂತೆ ಮಿನುಗುವ ನಕ್ಷತ್ರವಾಗಿದ್ದಾರೆ. ಅವರ ಸರಳತೆ, ವಿನಯತೆ ಮುಂದಿನ ಪೀಳಿಗೆಗೆ ಆದರ್ಶಮಯವಾಗಿದ್ದು ಚಿತ್ರರಂಗದಲ್ಲಿ ಅವರ ನಟನೆ ಅವರ ಸ್ಫೂರ್ತಿದಾಯಕ ಚಿತ್ರಗಳು ಎಷ್ಟೋ ಜನರ ಬದುಕನ್ನು ಬದಲಿಸಿ ಉತ್ತಮ ಜೀವನ ನಡೆಸಲು ಮಾದರಿಯಾಗಿವೆ. ಅವರ ಬದುಕೇ ನಮಗೆಲ್ಲರಿಗೂ ಆದರ್ಶಮಯವಾಗಿದೆ’ ಎಂದು ಹೇಳಿದರು.‘ಪಟ್ಟಣದಲ್ಲಿ ಒಂದು ಉತ್ತಮವಾದ ಡಾ.ರಾಜ್‌ಕುಮಾರ್ ಧಾಮವನ್ನು ನಿರ್ಮಾಣ ಮಾಡಲಾಗಿದ್ದು ನಮ್ಮ ಸಂಘದವರ ಹಾಗೂ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಹೋಗದಲ್ಲಿ ರಾಜ್‌ಕುಮಾರ್‌ರವರ ಸುಪುತ್ರಿ ಲಕ್ಷ್ಮಿಗೋವಿಂದರಾಜ್ ರವರ ಹಸ್ತದಲ್ಲಿ ಉದ್ಘಾಟನೆಯಾಗಿದೆ. ತಾಲೂಕಿನಲ್ಲಿಯೇ ಒಂದು ಮಾದರಿ ಕೆಲಸ ಮಾಡಿರುವ ಆತ್ಮತೃಪ್ತಿ ನಮಗಿದೆ. ಇದಕ್ಕೆಲ್ಲ ನಗುಮುಖದ ಪವರ್‌ಸ್ಟಾರ್ ಪುನಿತ್‌ರಾಜ್‌ಕುಮಾರ್ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.
ಡಾ.ರಾಜ್‌ಕುಮಾರ್‌ರವರ ಭಾವಚಿತ್ರಕ್ಕೆ ಸಂಘದ ಸದಸ್ಯರು ಪುಷ್ಪನಮನ ಸಲ್ಲಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿದರು.
ಚನ್ನರಾಯಪಟ್ಟಣದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಡಾ.ರಾಜ್‌ಕುಮಾರ್ ರವರ ಹುಟ್ಟುಹಬ್ಬದಂದು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು.