ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಣೆಕಟ್ಟೆ ಬಳಿ ಪ್ರಾಯೋಗಿಕವಾಗಿ ಕಾವೇರಿ ಆರತಿ ಮಾಡುವ ಮೂಲಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರಿಗೆ ದ್ರೋಹ ಹಾಗೂ ಕಾನೂನು ಭಂಗ ಉಂಟುಮಾಡಿದ್ದಾರೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದ ಜಯರಾಂ ಆರೋಪಿಸಿದರು.ಕೆಆರ್‌ಎಸ್ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರದ ಕಾವೇರಿ ನೀರಾವರಿ ನಿಗಮದಿಂದ ಪ್ರಾಯೋಗಿಕವಾಗಿ ೧೩ ಮಂದಿ ಪುರೋಹಿತರನ್ನು ಇಟ್ಟುಕೊಂಡು ಕಾವೇರಿ ಆರತಿ ಮಾಡುವ ಮೂಲಕ ಇಡೀ ಪ್ರಕ್ರಿಯೆಗೆ ದ್ರೋಹ ಮಾಡಲಾಗಿದೆ. ಅಣೆಕಟ್ಟೆ ನಿಷೇಧಿತ ಪ್ರದೇಶ. ಪ್ರವಾಸೋದ್ಯಮ ಚಟುವಟಿಕೆ ಅಣೆಕಟ್ಟೆ ಬಳಿ ಮಾಡಲಾಗದು. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆ ಸಂಬಂಧ ಪ್ರಕರಣ ಇದ್ದರೂ ಆಡಳಿತಾರೂಢ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಕಾವೇರಿ ಆರತಿ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.
ಮಂಡ್ಯ ಜನರು ಕುರಿಗಳೇ...!ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟನ್ನು ನಾಶ ಮಾಡಲು ಇಬ್ಬರು ವ್ಯಕ್ತಿಗಳು ಕಂಕಣ ತೊಟ್ಟಿದ್ದಾರೆ. ಒಬ್ಬರು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ, ಕಾವೇರಿ ಆರತಿ ಯೋಜನೆ ರೂವಾರಿ ಡಿ.ಕೆ.ಶಿವಕುಮಾರ್ ಮತ್ತೊಬ್ಬರು ಅಣೆಕಟ್ಟೆ ಹಿನ್ನೀರಿನಲ್ಲಿ ವಿಮಾನಯಾನ (ಸೀಪ್ಲೇಸ್) ಯೋಜನೆ ರೂವಾರಿ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಮಂಡ್ಯದ ಜನರನ್ನು ಕುರಿಗಳು, ಹಿಂಬಾಲಕರೆಂಬ ಧೋರಣೆಯವರಾಗಿದ್ದಾರೆ. ಖಾಸಗಿ ಲಾಭಿಗೋಸ್ಕರ ಕೆಆರ್‌ಎಸ್ ಅಣಕಟ್ಟೆ ಪ್ರದೇಶಗಳಲ್ಲಿ ಖಾಸಗೀಕರಣಕ್ಕೆ ನೀಡಲು ಬದ್ದರಾಗಿದ್ದಾರೆ ಎಂದು ಕಿಡಿಕಾರಿದರು.
೨೦೧೮ರಲ್ಲಿ ಈ ಇಬ್ಬರು ವ್ಯಕ್ತಿಗಳು ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ಸ್ಥಾಪಿಸುವ ರೂವಾರಿಗಳಾಗಿದ್ದರು. ಜಿಲ್ಲೆಯ ಪ್ರಬಲ ವಿರೋಧದಿಂದ ತಡೆಯಲಾಯಿತು. ಈ ಇಬ್ಬರನ್ನೂ ಜಿಲ್ಲೆಯ ಜನತೆ ಹೊರಗಿಡಬೇಕು. ಕಳೆದ ಜೂನ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸಲಾಗಿದೆ. ಆದರೂ ಕಾನೂನು ಉಲ್ಲಂಘಿಸಿ ಕಾವೇರಿ ಆರತಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.ಡಿಸಿ ಜನಪ್ರತಿನಿಧಿಗಳ ಮುಖವಾಣಿ:
ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡುತ್ತಿದ್ದರೂ, ಜಿಲ್ಲಾಕಾರಿ ಮತ್ತು ಇತರೆ ಅಧಿಕಾರಿಗಳು ಜನಪ್ರತಿನಿಧಿಗಳ ಮುಖವಾಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ ಮಾಡುತ್ತೇವೆ ಎನ್ನುತ್ತಾರೆಯೇ ವಿನಃ, ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.ಕೇಂದ್ರದಿಂದ ಕೈಗಾರಿಕೆ ತರಲಿ:
ಜಿಲ್ಲೆಯ ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಿ. ಅದು ಬಿಟ್ಟು ಕಾವೇರಿ, ಕೆ.ಆರ್.ಎಸ್. ತಂಟೆಗೆ ಹೋಗುವುದು ಬೇಡ ಎಂದು ಸಲಹೆ ನೀಡಿದರು.ಮೈಷುಗರ್‌ಗೆ ಹೆಚ್ಚಿನ ಅನುದಾನ-ಸ್ವಾಗತ:
ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ ಅದಕ್ಕೆ ಅನುದಾನ ನೀಡಿದ್ದರು. ಇದೀಗ ಮತ್ತೆ ೬೦ ಕೋಟಿ ಅನುದಾನ ಘೋಷಿಸಿದ್ದಾರೆ. ಆದರೆ ಅಲ್ಲಿನ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಕಾರ್ಖಾನೆಯ ಅವ್ಯವಸ್ಥೆಯ ಆಗರವಾಗಿದೆ. ಹಾವು ಬಂದಿತೆಂದು ಮರ ಕಡಿಯುವುದು, ಎಚ್ಚರಿಕೆ ನೀಡಿದ್ದರೂ ಮಲಾಸಸ್ ದಾಸ್ತಾನು ಸಂಗ್ರಹ ಮಾಡಿ ಕೋಟ್ಯಂತರ ರು. ನಷ್ಟ ಉಂಟುಮಾಡುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಿದ್ದಾರೆ. ಇದಕ್ಕೆ ಕಾರ್ಖಾನೆ ಅಧ್ಯಕ್ಷರೇ ನೇರ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ. ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಆಡಳಿತ ಸುಧಾರಣೆ ಮಾಡಿ ಅಭಿವೃದ್ಧಿಗೆ ಒತ್ತು ನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನಾವು ಎಷ್ಟೋ ಮಂದಿ ಉಸ್ತುವಾರಿ ಸಚಿವರನ್ನು ನೋಡಿದ್ದೇವೆ. ಧೋರಣೆ ಬದಲಿಸದಿದ್ದರೆ ಅವರನ್ನು ಹಿಡಿದು ಕೇಳುವ ಕೆಲಸವನ್ನು ರೈತರೊಂದಿಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ಪದಾಧೀಕಾರಿಗಳಾದ ಕೆ.ಬೋರಯ್ಯ, ಎಸ್.ಕೆಂಪೂಗೌಡ, ಎಚ್.ಚಂದ್ರಶೇಖರ್, ಎಂ.ವಿ.ಕೃಷ್ಣ ಗೋಷ್ಠಿಯಲ್ಲಿದ್ದರು.