ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಚಂದ್ರಶೇಖರ್ ಫೌಂಡೇಷನ್‌ನ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ 18ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ವಿಭಾಗಗಳ 413 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ 128 ನರ್ಸಿಂಗ್, 38 ಸೆಂಟ್ ಆಲ್ಪೋನ್ಸಾ ನರ್ಸಿಂಗ್, 68 ಫಿಜಿಯೋಥೆರಪಿ, 144 ಅಲೈಡ್ ಹೆಲ್ತ್‌ಸೈನ್ಸ್ ಹಾಗೂ 35 ಫಾರ್ಮಸಿ ವಿದ್ಯಾರ್ಥಿಗಳು ಸೇರಿ ಒಟ್ಟು 413 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ 60 ಮಂದಿ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕುಲಪತಿ ಡಾ.ಬಿ.ಸಿ. ಭಗವಾನ್ ಪದಕ ಹಾಗೂ ಪದವಿ ಪ್ರಮಾಣ ಪತ್ರ ವಿತರಿಸಿದರು.ಬಳಿಕ ಮಾತನಾಡಿದ ಭಗವಾನ್ ಅವರು, ಆರೋಗ್ಯ ಕ್ಷೇತ್ರ ಎಂದಾಕ್ಷಣ ಕೇವಲ ವೈದ್ಯರು ಮಾತ್ರವಲ್ಲದೆ, ಡಯಾಗ್ನೋಸ್ಟಿಕ್ ಸಿಬ್ಬಂದಿ, ನರ್ಸ್, ಮೆಡಿಕಲ್ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ. ವೈದ್ಯರು ಮೆದುಳಿನಂತೆ ಕೆಲಸ ಮಾಡಿದರೆ, ನರ್ಸ್ ಮತ್ತಿತರ ಸಿಬ್ಬಂದಿ ಹೃದಯದಂತೆ ಕೆಲಸ ಮಾಡುತ್ತಾರೆ. ನರ್ಸಿಂಗ್ ಮಾಡಿದವರಿಗೆ ಶೇ.100ಕ್ಕೆ 100ರಷ್ಟು ಉದ್ಯೋಗ ದೊರಕುತ್ತದೆ. ಏಕೆಂದರೆ ವಿಶದಲ್ಲಿ ಸುಮಾರು 20 ಲಕ್ಷ ನರ್ಸ್ ಗಳ ಅಗತ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹೆಲ್ತ್ ಸೈನ್ಸ್ ವಿಭಾಗದಲ್ಲಿಯೇ ಬೇಡಿಕೆ ಇದ್ದು, ಆಸ್ಪತ್ರೆಯ ಪ್ರಮುಖ ಕಾರ್ಯ ನಿರ್ವಹಣೆಯ ಜವಾಬ್ದಾರಿ ನರ್ಸ್ ಮ್ತತು ಸಿಬ್ಬಂದಿಯದ್ದಾಗಿರುತ್ತದೆ. ಮುಂದಿನ ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯು ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ 11 ನರ್ಸಿಂಗ್ ಕೋರ್ಸ್ ಅನ್ನು ನಡೆಸುತ್ತಿದೆ ಎಂದರು.ಘಟಿಕೋತ್ಸವ ಭಾಷಣ ಮಾಡಿದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ವಿಶ್ವದಲ್ಲಿಯೇ ಹೆಲ್ತ್ ಕೇರ್‌ಗಳ ಅಗತ್ಯ ಹೆಚ್ಚಾಗಿದ್ದು, ವೈದ್ಯಕೀಯ ಪ್ರವಾಸೋದ್ಯಮ ಹಬ್ ಗಳ ಅಗತ್ಯವೂ ಇದೆ. ಹಾಗೆಯೇ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ಮೆಷಿನ್ ಲರ್ನಿಂಗ್‌ತಂತ್ರಜ್ಞಾನಗಳು, ಕ್ಯಾನ್ಸರ್, ಹೃದ್ರೋಗ, ನರರೋಗ ಮುಂಚಿತವಾಗಿ ಗುರುತಿಸಲು ಸಹಕಾರಿಯಾಗಿದೆ ಎಂದರು.
ನರ್ಸಿಂಗ್, ಹೆಲ್ತ್‌ಸೈನ್ಸ್, ಫಿಜಿಯೋಥೆರಪಿ ಕೋರ್ಸ್‌ಮೂಲಕ ಸಂಪನ್ಮೂಲ ವ್ಯಕ್ತಿಗಳನ್ನು ಸೃಷ್ಟಿಸುತ್ತಿದೆ ಎಂದರು.ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಜಿ.ಆರ್.ಚಂದ್ರಶೇಖರ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಸುರಕ್ಷಾ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕಿ ಡಾ. ಸರಳಾ ಚಂದ್ರಶೇಖರ್, ಕಾಲೇಜಿನ ಡೀನ್ ಪ್ರೊ.ಎಸ್. ಶ್ರೀಕಂಠಸ್ವಾಮಿ, ಮುಖ್ಯ ಆಡಳಿತಾಧಿಕಾರಿ ಡಿ. ಅಶೋಕ್, ಪ್ರಾಂಶುಪಾಲ ಡಾ.ಜೆ. ನಂದೀಸ್, ಡಾ.ಬಿ.ಕೆ. ಮಧುಸೂದನ್, ಡಾ.ಆರ್.ಎಂ. ಅರವಿಂದ್, ಡಾ. ಲಿಸಾ, ಡಾ. ವಿಷಕಂಠೇಗೌಡ, ಪ್ರೊ.ಜಿ. ಪವನ್ ಕುಮಾರ್, ಡಾ.ಎನ್. ರಾಜ್‌ಕಣ್ಣನ್, ಆಡಳಿತಾಧಿಕಾರಿ ಮತ್ತು ಸಿಬ್ಬಂದಿ ಇದ್ದರು.