30 ವರ್ಷ ಮೇಲ್ಪಟ್ಟವರು ರಕ್ತದೊತ್ತಡ ಪರೀಕ್ಷಿಸಿಕೊಳ್ಳಿ

KannadaprabhaNewsNetwork |  
Published : May 20, 2025, 01:04 AM IST
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ಕಚೇರಿಯಲ್ಲಿ ವಿಶ್ವರಕ್ತದೊತ್ತಡ ದಿನಾಚರಣೆ ನಡೆಯಿತು. | Kannada Prabha

ಸಾರಾಂಶ

ಅಧಿಕ ರಕ್ತದೊತ್ತಡ ಭಾರತದಲ್ಲಿ ದೊಡ್ಡ ಆರೋಗ್ಯ ಸವಾಲಾಗಿದೆ. ಇದರ ವ್ಯಾಪಕತೆ ಹೆಚ್ಚಾಗುತ್ತಿದೆ. ಇದರಿಂದ ಹೃದಯಘಾತ ಮತ್ತು ಪಾರ್ಶ್ವವಾಯುನಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಕೊಪ್ಪಳ:

30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿರಂತರ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡ ಕಂಡುಬಂದರೆ ನಿಯಂತ್ರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗಿಯ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಘಟಕ, ಜಿಲ್ಲಾ ಎನ್.ಸಿ.ಡಿ. ವಿಭಾಗ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನ ಶೈಲಿಯಿಂದ ಬರುವ ರೋಗಗಳಲ್ಲಿ ಅಧಿಕ ರಕ್ತದೊತ್ತಡ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ರಕ್ತದೊತ್ತಡದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 17ರಂದು ವಿಶ್ವ ರಕ್ತದೊತ್ತಡ ದಿನಾಚರಣೆ ನಡೆಸಲು ನಿರ್ದೇಶನ ನೀಡಿದೆ. ಸಾರ್ವಜನಿಕರಿಗೆ ಅಧಿಕ ರಕ್ತದೊತ್ತಡ ನಿಯಂತ್ರಣ ಹಾಗೂ ಉತ್ತಮ ಜೀವನ ಶೈಲಿಯ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಇದರ ಉದ್ದೇಶವಾಗಿದೆ ಎಂದು ಹೇಳಿದರು.

"ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ " ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಚರಿಸಲಾಗುತ್ತದೆ ಎಂದರು.

ಅಧಿಕ ರಕ್ತದೊತ್ತಡ ಭಾರತದಲ್ಲಿ ದೊಡ್ಡ ಆರೋಗ್ಯ ಸವಾಲಾಗಿದೆ. ಇದರ ವ್ಯಾಪಕತೆ ಹೆಚ್ಚಾಗುತ್ತಿದೆ. ಇದರಿಂದ ಹೃದಯಘಾತ ಮತ್ತು ಪಾರ್ಶ್ವವಾಯುನಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಧಿಕ ರಕ್ತದೊತ್ತಡ ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ದಿನನಿತ್ಯ ಸೇವಿಸುವ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬಿನಾಂಶಗಳು ಸೀಮಿತವಾಗಿರಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಪ್ರತಿದಿನ ಕನಿಷ್ಠ ಪಕ್ಷ ಒಂದು ಗಂಟೆ ಕಾಲ ದೈಹಿಕ ಚಟುವಟಿಕೆ ನಡೆಸುವುದು, ಯೋಗ, ಧ್ಯಾನ ಮಾಡಬೇಕು ಎಂದು ಹೇಳಿದರು.

ಕೊಪ್ಪಳ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎಚ್. ಪ್ರಕಾಶ ಅವರು, ಮನುಷ್ಯನ ಜೀವಿತ ಅವಧಿಯ ಬಗ್ಗೆ, ಟೆಲಿ ಮನಸ್, ಇ-ಸಂಜೀವಿನ ಕುರಿತು ವಿವರಿಸಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗಿಯ ತಾಂತ್ರಿಕ ಶಿಲ್ಪಿ ಡಾ. ಬಿ.ವಿ. ಭಟ್ಟರ್ ಮಾತನಾಡಿದರು. ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳಾದ ಡಾ. ಮನು, ಡಾ. ಅಂಜನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಕ.ಕ.ರ.ಸಾ.ನಿ. ಕೊಪ್ಪಳ ವಿಭಾಗದ ಸಹಾಯಕ ಆಡಳಿತಾಧಿಕಾರಿ ಸಂಜೀವ್ ಕುಮಾರ, ಅಂಕಿ-ಸಂಖ್ಯೆಗಳ ಅಧಿಕಾರಿ ಕೆ. ದೇವರಾಜ, ಭದ್ರತಾ ಅಧಿಕಾರಿ ಶ್ರೀದೇವಿ, ಎನ್.ಸಿ.ಡಿ. ಕಾರ್ಯಕ್ರಮದ ಸಲಹೆಗಾರರಾದ ಡಾ. ಜಯಶ್ರೀ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವಿ. ಸಜ್ಜನರ್, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಾದ ರಾಜಕುಮಾರ ಹಾಗೂ ಸುಧೀರ್, ಆಪ್ತಸಮಾಲೋಚಕಿ ಕೆ. ಶಾಂತಮ್ಮ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆನಂತರ ಕ.ಕ.ರ.ಸಾ.ನಿ ಕೊಪ್ಪಳ ವಿಭಾಗದ ಕಚೇರಿಯ ಅಧಿಕಾರಿ, ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು, ಚಿಕಿತ್ಸೆ ನೀಡಲಾಯಿತು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ