ಕಾವೇರಿ: ರಾಜ್ಯದ ಮುಂದಿರುವ ಆಯ್ಕೆ ಬಗ್ಗೆ ತೀವ್ರ ಚರ್ಚೆ

KannadaprabhaNewsNetwork |  
Published : Aug 01, 2026, 01:45 AM IST
KRS

ಸಾರಾಂಶ

ತಮಿಳುನಾಡಿಗೆ 15 ದಿನಗಳ ಕಾಲ 3 ಕ್ಯುಸೆಕ್‌ನಂತೆ 4.5 ಟಿಎಂಸಿ ಕಾವೇರಿ ನೀರು ಬಿಡುಗಡೆ ಆದೇಶ ಪಾಲನೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕಠಿಣ ಸವಾಲು ಎದುರಾಗಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ತಮ್ಮ ಮುಂದಿರುವ ಅವಕಾಶಗಳ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಸುಧೀರ್ಘ ಚರ್ಚೆ ನಡೆಸಲಾಗಿದೆ.

  ಬೆಂಗಳೂರು :  ತಮಿಳುನಾಡಿಗೆ 15 ದಿನಗಳ ಕಾಲ 3 ಕ್ಯುಸೆಕ್‌ನಂತೆ 4.5 ಟಿಎಂಸಿ ಕಾವೇರಿ ನೀರು ಬಿಡುಗಡೆ ಆದೇಶ ಪಾಲನೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕಠಿಣ ಸವಾಲು ಎದುರಾಗಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ತಮ್ಮ ಮುಂದಿರುವ ಅವಕಾಶಗಳ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಸುಧೀರ್ಘ ಚರ್ಚೆ ನಡೆಸಲಾಗಿದೆ.

ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ರಾಜ್ಯದ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ನೀರನ್ನು ಹೊರತುಪಡಿಸಿ ಉಳಿದದ್ದನ್ನು ತಮಿಳುನಾಡಿಗೆ ಹರಿಸಲಾಗುತ್ತದೆಯೇ ಅಥವಾ ರೈತರು, ವಿರೋಧ ಪಕ್ಷಗಳ ವಿರೋಧದಿಂದ ನೀರು ಹರಿಸದೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕೆ ಎಂಬ ಕುರಿತಂತೆ ಚರ್ಚೆ ಮಾಡಲಾಗಿದೆ.

66 ಟಿಎಂಸಿ ಅಡಿ ನೀರು ಸಂಗ್ರಹ:

ಸದ್ಯ ಕಾವೇರಿ ಕೊಳ್ಳದ ಕೆಆರ್‌ಎಸ್‌, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ 66 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಿದೆ. ಅಲ್ಲದೆ, ನಾಲ್ಕೂ ಜಲಾಶಯಗಳಿಗೆ ಒಳಹರಿವಿನಲ್ಲಿ ಸ್ವಲ್ಪ ಏರಿಕೆಯಾಗಿದೆ. ಇನ್ನು, ಸಂಗ್ರಹವಿರುವ 66 ಟಿಎಂಸಿ ಅಡಿಗಳಷ್ಟು ನೀರಿನಲ್ಲಿ 40 ಟಿಎಂಸಿ ನೀರು ಹತ್ತು ಜಿಲ್ಲೆಗಳ ಕುಡಿಯುವ ನೀರಿನ ಬಳಕೆಗೆ ಬೇಕಾಗಲಿದೆ. ಉಳಿದ 26 ಟಿಎಂಸಿ ಅಡಿಗಳಲ್ಲಿ 10 ಟಿಎಂಸಿ ಅಡಿಯನ್ನು ಡೆಡ್‌ ಸ್ಟೋರೇಜ್‌ ಎಂದು ಮೀಸಲಿಡಬೇಕಾಗುತ್ತದೆ. ಉಳಿದ 16 ಟಿಎಂಸಿ ನೀರು ಹೆಚ್ಚುವರಿಯಾಗಿ ನಾಲ್ಕೂ ಜಲಾಶಯಗಳಲ್ಲಿ ಉಳಿಯಲಿದೆ.

ಉಳಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಹಾಗೂ ತಮಿಳುನಾಡಿಗೆ ನೀರು ಬಿಡಬಾರದು ಎಂಬ ಒತ್ತಡ ಸರ್ಕಾರದ ಮೇಲಿದೆ. ಆದರೆ, ಕಳೆದ 20ರಿಂದ 23 ವರ್ಷಗಳಲ್ಲಿ ಕಾವೇರಿ ನೀರು ಹರಿಸುವ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಾಡಿರುವ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ. ಅಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವು ವೈಜ್ಞಾನಿಕವಾಗಿ, ತಜ್ಞರ ತಂಡದಿಂದ ಪರಿಶೀಲಿಸಿದ ವರದಿ ಆಧರಿಸಿಯೇ ಇರಲಿದೆ ಎಂಬುದೇ ಸುಪ್ರೀಂ ಕೋರ್ಟ್‌ನ ಅಭಿಪ್ರಾಯ. ಈಗಲೂ ಮೇಲ್ಮನವಿ ಸಲ್ಲಿಸಿದರೆ ಸುಪ್ರೀಂಕೋರ್ಟ್‌ನಿಂದ ರಾಜ್ಯ ಸರ್ಕಾರದ ಮನವಿ ಪುರಸ್ಕರಿಸುತ್ತದೆ ಎಂದು ಹೇಳಲಾಗದು. ಒಂದು ವೇಳೆ ಸುಪ್ರೀಂಕೋರ್ಟ್‌ ಪ್ರಾಧಿಕಾರದ ಆದೇಶದ ಪರವಾಗಿ ಆದೇಶಿಸಿದರೆ ಆಗ ಅನಿವಾರ್ಯವಾಗಿ ನೀರು ಬಿಡಬೇಕಾಗುತ್ತದೆ.

ಮೇಲ್ಮನವಿ ಸಲ್ಲಿಸುವ ಬಗ್ಗೆ ಗೊಂದಲ:

ಹೀಗೆ ಕುಡಿಯುವ ನೀರಿಗೆ ಅಗತ್ಯ ನೀರು ಉಳಿಸಿಕೊಂಡು ತಮಿಳುನಾಡಿಗೆ 4.5 ಟಿಎಂಸಿ ಅಡಿ ನೀರು ಹರಿಸಲು ಸರ್ಕಾರ ನಿರ್ಧರಿಸುತ್ತದೆಯೇ ಅಥವಾ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡರೂ ಸರಿಯೇ ಮೇಲ್ಮನವಿ ಸಲ್ಲಿಸಿ, ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ನೀರು ಬಿಡುವುದಿಲ್ಲ ಎಂದು ನಿರ್ಧರಿಸಬಹುದೇ ಎಂಬ ಗೊಂದಲದಲ್ಲಿ ಸರ್ಕಾರವಿದೆ.

ಹೀಗಾಗಿ ಭಾನುವಾರ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿಯೂ ಈ ಎರಡೂ ವಿಚಾರಗಳನ್ನು ಚರ್ಚಿಸಿ, ಎಲ್ಲ ಪಕ್ಷದ ನಾಯಕರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬುದನ್ನು ನೋಡಿ ನಂತರ ಮುಂದಿನ ನಡೆಯನ್ನಿಡುವ ಕುರಿತು ಸರ್ಕಾರ ನಿರ್ಧರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಾಲ ಕಾರ್ಮಿಕರು ಕೆಲಸಕ್ಕಿದ್ದ 105 ಮಾಲೀಕರ ವಿರುದ್ಧ ಕೇಸ್‌
ಬಿಜೆಪಿ, ದಳದ ಹಲವು ನಾಯಕರು ನನ್ನ ಸಂಪರ್ಕದಲ್ಲಿ: ಡಿಕೆ ಬಾಂಬ್‌