ಶಾಲೆ, ಕಾಲೇಜಲ್ಲಿ ಜಂಕ್‌ ಫುಡ್‌ ಮಾರಾಟ ಬ್ಯಾನ್‌

KannadaprabhaNewsNetwork |  
Published : Aug 01, 2026, 01:45 AM IST
U T Khadar

ಸಾರಾಂಶ

ಮಕ್ಕಳ ಆರೋಗ್ಯ ಕಾಪಾಡುವ ಸಲುವಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಮತ್ತು ಸುತ್ತಲಿನ 50 ಮೀ. ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ಗಳ ಮಾರಾಟ, ವಿತರಣೆ, ಪ್ರಚಾರವನ್ನು ಆರೋಗ್ಯ ಇಲಾಖೆ ನಿಷೇಧಿಸಿದೆ.

 ಬೆಂಗಳೂರು :  ಮಕ್ಕಳ ಆರೋಗ್ಯ ಕಾಪಾಡುವ ಸಲುವಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಮತ್ತು ಸುತ್ತಲಿನ 50 ಮೀ. ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ಗಳ ಮಾರಾಟ, ವಿತರಣೆ, ಪ್ರಚಾರವನ್ನು ಆರೋಗ್ಯ ಇಲಾಖೆ ನಿಷೇಧಿಸಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್‌, ಮಕ್ಕಳಲ್ಲಿ ಆರೋಗ್ಯ ಕಾಪಾಡಲು ಅವರಿಗೆ ಉತ್ತಮ ಆಹಾರ ಕ್ರಮವನ್ನು ಬೆಳೆಸಬೇಕು. ಅದಕ್ಕಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಾಗೂ ಸುತ್ತಲಿನ 50 ಮೀ. ವ್ಯಾಪ್ತಿಯಲ್ಲಿ ಕೊಬ್ಬು, ಸಕ್ಕರೆ, ಉಪ್ಪಿನಾಂಶ ಹೆಚ್ಚಿರುವ (ಎಚ್‌ಎಫ್‌ಎಸ್ಎಸ್‌) ಯಾವುದೇ ಆಹಾರ ಪದಾರ್ಥಗಳ ಮಾರಾಟ ನಿಷೇಧಿಸಲಾಗಿದೆ. ಶಾಲೆ ಮತ್ತು ಕಾಲೇಜು ಕ್ಯಾಂಟೀನ್‌ಗಳಲ್ಲೂ ನಿಗದಿತ ಆಹಾರ ವಿತರಿಸದಂತೆ ಸೂಚಿಸಲಾಗುವುದು ಎಂದರು.

ರಾಜ್ಯದ 134ಕ್ಕೂ ಹೆಚ್ಚಿನ ಶಾಲೆ-ಕಾಲೇಜು ವ್ಯಾಪ್ತಿಯಲ್ಲಿ ಪರಿಶೀಲನೆ

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಜುಲೈ ತಿಂಗಳಲ್ಲಿ ರಾಜ್ಯದ 134ಕ್ಕೂ ಹೆಚ್ಚಿನ ಶಾಲೆ-ಕಾಲೇಜು ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಶಾಲೆ-ಕಾಲೇಜು ಕ್ಯಾಂಟೀನ್‌ಗಳಲ್ಲಿಯೇ ಜಂಕ್ ಫುಡ್‌ ಮಾರಾಟ ಮಾಡುವುದು ಕಂಡು ಬಂದಿದೆ. ಬಿಳಿ ಬ್ರೆಡ್‌, ಪಾಸ್ತಾ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಆಹಾರ ಪದಾರ್ಥಗಳನ್ನು ನೀಡುತ್ತಿರುವುದು ಪತ್ತೆಯಾಗಿದೆ ಎಂದರು.

ಗುಣಮಟ್ಟ, ಸ್ವಚ್ಛತೆ, ನೈರ್ಮಲ್ಯ, ಲೇಬಲಿಂಗ್‌ ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಆಹಾರ ಪದಾರ್ಥಗಳು ತಪಾಸಣೆ ವೇಳೆ ಕಂಡು ಬಂದಿದೆ. ಅದರಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ 53 ಆಹಾರದ ಮಾದರಿಯನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದೆ ಅಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗುಣಮಟ್ಟ, ಆರೋಗ್ಯಕರ ಆಹಾರ ಮಾತ್ರ ಲಭ್ಯವಾಗಬೇಕು

ಶಾಲೆ-ಕಾಲೇಜು ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ, ಗುಣಮಟ್ಟ, ಆರೋಗ್ಯಕರ ಆಹಾರ ಮಾತ್ರ ಲಭ್ಯವಾಗಬೇಕು ಎಂಬುದು ನಮ್ಮ ಗುರಿ. ಹೀಗಾಗಿಯೇ ಶಾಲೆ-ಕಾಲೇಜು ಆವರಣ ಮತ್ತು ಸುತ್ತಲಿನ 50 ಮೀ. ವ್ಯಾಪ್ತಿಯಲ್ಲಿ ಹೆಚ್ಚಿನ ಕೊಬ್ಬು, ಟ್ರಾನ್ಸ್‌ಫ್ಯಾಟ್‌, ಆ್ಯಡೆಡ್‌ ಶುಗರ್‌, ಸೋಡಿಯಂ, ಉಪ್ಪು ಹೆಚ್ಚಿರುವ ಆಹಾರ ಪದಾರ್ಥಗಳ ಮಾರಾಟ, ಉಚಿತ ವಿತರಣೆ, ದಾಸ್ತಾನು, ಪ್ರಚಾರವನ್ನೂ ನಿಷೇಧಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಲೆ-ಕಾಲೇಜು ಆಡಳಿತ ಮಂಡಳಿಗಳಿಗೆ ಸೂಚನೆಗಳನ್ನು ನೀಡಲಾಗುವುದು. ಈ ಆದೇಶ ಉಲ್ಲಂಘಿಸಿ ನಿಷೇಧಿತ ಆಹಾರ ಪದಾರ್ಥ ಮಾರಾಟ ಮಾಡುವ ಮಳಿಗೆಗಳ ಪರವಾನಗಿ ರದ್ದು ಮಾಡುವಂತೆ ಗ್ರಾಪಂ ಸೇರಿ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಲಾಗುವುದು. ಇನ್ನು, ಆದೇಶ ಉಲ್ಲಂಘಿಸುವವರ ವಿರುದ್ಧ 3 ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು ಎಂದು ವಿವರಿಸಿದರು.ಹೋಟೆಲ್‌ಗಳಲ್ಲಿ ಬಿಸಿ ನೀರಿಗೆ ಸೂಚನೆ:

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುತ್ತದೆ. ಸುರಕ್ಷತೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಎಲ್ಲರೂ ತೆಗೆದುಕೊಳ್ಳಬೇಕು. ಅದಕ್ಕಾಗಿ ಎಲ್ಲ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕುಡಿಯಲು ತಣ್ಣಗಿನ ನೀರಿನ ಬದಲು ಬಿಸಿ ನೀರು ನೀಡುವುದು ಕಡ್ಡಾಯ ಮಾಡಬೇಕೆಂದು ಚಿಂತಿಸಲಾಗಿದೆ. ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಖಾದರ್‌ ತಿಳಿಸಿದರು.

ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ, ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಡು ರಸ್ತೆಯಲ್ಲೇ ಗಣೇಶಮೂರ್ತಿ ಇಟ್ಟು ಯುವಕರ ಪ್ರತಿಭಟನೆ
ವಿಜೃಂಭಣೆಯಿಂದ ನಡೆದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವ