ಕಾವೇರಿ: ಪ್ರಾಧಿಕಾರದಿಂದ ‘ಕತ್ತಲ ನ್ಯಾಯ’

KannadaprabhaNewsNetwork |  
Published : Jul 31, 2026, 01:30 AM IST
ಕೆಆರ್‌ಎಸ್‌ ಅಣೆಕಟ್ಟು | Kannada Prabha

ಸಾರಾಂಶ

ತಮಿಳುನಾಡಿಗೆ ೧೫ ದಿನಗಳವರೆಗೆ ನಿತ್ಯ ೩೫೦೦ ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸನ್ನೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪುನರುಚ್ಚರಿಸಿದೆ. ನದಿ ನೀರು ಹಂಚಿಕೆಯಲ್ಲಿ ರಾಜ್ಯದ ಕಾವೇರಿ ಕಣಿವೆ ರೈತರ ಪಾಲಿಗೆ ‘ಕತ್ತಲ ನ್ಯಾಯ’ವಾಗಿ ಪರಿಣಮಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ೧೫ ದಿನಗಳವರೆಗೆ ನಿತ್ಯ ೩೫೦೦ ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸನ್ನೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪುನರುಚ್ಚರಿಸಿದೆ. ನದಿ ನೀರು ಹಂಚಿಕೆಯಲ್ಲಿ ರಾಜ್ಯದ ಕಾವೇರಿ ಕಣಿವೆ ರೈತರ ಪಾಲಿಗೆ ‘ಕತ್ತಲ ನ್ಯಾಯ’ವಾಗಿ ಪರಿಣಮಿಸಿದೆ.

ಮಳೆ ಕೊರತೆ, ಬರಗಾಲದಿಂದಾಗಿ ಕಾವೇರಿ ಕಣಿವೆ ಜಲಾಶಯಗಳಲ್ಲಿ ಕುಡಿಯಲು ಸಾಕಾಗುವಷ್ಟು ನೀರು ಮಾತ್ರ ಸಂಗ್ರಹವಿರುವುದಾಗಿ ಹೇಳುತ್ತಿದ್ದರೂ ಅದಾವುದನ್ನೂ ಕೇಳಿಸಿಕೊಳ್ಳದ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲೇಬೇಕೆಂಬ ಆದೇಶ ಹೊರಡಿಸಿರುವುದು ರಾಷ್ಟ್ರೀಯ ದುರಂತವೆಂದೇ ಹೇಳಬಹುದು. ಸಮಿತಿಯ ಶಿಫಾರಸಿನ ವಿರುದ್ಧ ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ. ಕನ್ನಡಪರ, ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸಿನ ವಿರುದ್ಧ ಪ್ರತಿಭಟನೆ, ಹೋರಾಟ, ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಇದೀಗ ಪ್ರಾಧಿಕಾರವೂ ಸಮಿತಿಯ ತೀರ್ಮಾನವನ್ನೇ ಎತ್ತಿ ಹಿಡಿದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕೆಆರ್‌ಎಸ್ ಜಲಾಶಯದಲ್ಲಿ ಬಳಕೆಗೆ ಸಿಗುವ ೮ ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ೧೫ ದಿನಗಳ ಕಾಲ ತಮಿಳುನಾಡಿಗೆ ನೀರು ಹರಿದರೆ ೪.೫ ಟಿಎಂಸಿ ನೀರು ಖಾಲಿಯಾಗಲಿದೆ. ಉಳಿಯುವ ೪ ಟಿಎಂಸಿ ನೀರನ್ನು ಮುಂದಿನ ಬೇಸಿಗೆ ಮುಗಿಯುವವರೆಗೆ ನಿರ್ವಹಣೆ ಮಾಡುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ತಮಿಳುನಾಡಿಗೆ ನೀರು ಬಿಡುವಾಗಲೆಲ್ಲಾ ಸರ್ಕಾರಗಳ ದೃಷ್ಟಿ ನೇರವಾಗಿ ಕೃಷ್ಣರಾಜಸಾಗರ ಜಲಾಶಯದ ಮೇಲೆ ಬೀಳುವುದು ಸರ್ವೇ ಸಾಮಾನ್ಯವಾಗಿದೆ. ಏಕೆಂದರೆ, ಕಾವೇರಿ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯವನ್ನು ಕೆಆರ್‌ಎಸ್ ಹೊಂದಿದೆ. ಈ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಡುವ ಒತ್ತಡ ಹೆಚ್ಚಾಗಿ ಕೆಆರ್‌ಎಸ್ ಮೇಲೆ ಬೀಳುತ್ತದೆ.

ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿರುವ ನೀರಿನ ಸಂಗ್ರಹದ ಪರಿಸ್ಥಿತಿಯನ್ನು ಕೇಳಿಸಿಕೊಳ್ಳುವ, ಅದನ್ನು ಅರಿಯುವ ಸ್ಥಿತಿಯಲ್ಲಿ ನೀರು ನಿಯಂತ್ರಣ ಸಮಿತಿಯಾಗಲೀ, ನೀರು ನಿರ್ವಹಣಾ ಪ್ರಾಧಿಕಾರವಾಗಲಿ ಇಲ್ಲ. ನಿಗದಿಯಂತೆ ತಮಿಳುನಾಡಿಗೆ ಹಂಚಿಕೆ ಮಾಡಿರುವಷ್ಟು ನೀರನ್ನು ನೀಡುವಂತೆ ಮಾತ್ರ ಆದೇಶ ಮಾಡುತ್ತಿದೆ. ಮಳೆಯ ಕೊರತೆ, ನೀರಿನ ಸಂಗ್ರಹದ ಅಂಕಿ-ಅಂಶಗಳು ಪ್ರಾಧಿಕಾರದ ಮುಂದಿದ್ದರೂ ಅದಾವುದನ್ನೂ ಪರಿಗಣಿಸದಿರುವುದು ಈ ಭಾಗದ ರೈತರ ದುರದೃಷ್ಟವಾಗಿದೆ.

ತಮಿಳುನಾಡಿಗೆ ಈವರೆಗೆ ೪೦ ಟಿಎಂಸಿಯಷ್ಟು ನೀರು ಹರಿಸಬೇಕಿತ್ತು ಎಂಬುದಾಗಿ ತಮಿಳುನಾಡು ಪ್ರಾಧಿಕಾರದ ಎದುರು ವಾದ ಮಂಡಿಸಿದೆ. ಅದರಲ್ಲಿ ೪.೫ ಟಿಎಂಸಿ ನೀರನ್ನಾದರೂ ಬಿಡುಗಡೆ ಮಾಡುವಂತೆ ಪ್ರಾಧಿಕಾರ ಆದೇಶ ಹೊರಡಿಸಿದೆ. ಆದರೆ, ಕುಡಿಯುವ ನೀರನ್ನೂ ಕಸಿದುಕೊಳ್ಳುತ್ತಿರುವ ಆದೇಶದ ವಿರುದ್ಧ ರೈತರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಳೆ ಕೊರತೆಯಿಂದ ಹೊಸ ಬೆಳೆ ಬೆಳೆಯುವುದನ್ನೇ ಮಂಡ್ಯ ಜಿಲ್ಲೆಯ ರೈತರು ಕೈಬಿಟ್ಟಿದ್ದಾರೆ. ಬೆಳೆದು ನಿಂತಿರುವ ಕಬ್ಬು ಉರುವಲಾಗಿದೆ. ಮಳೆ ಮಾಯವಾಗಿದೆ. ರೈತರ ಬದುಕು ದುಸ್ತರವಾಗಿದೆ. ಪ್ರಕೃತಿಯ ಮುನಿಸಿಗೆ ಕಾವೇರಿ ಕಣಿವೆ ರೈತರು ಮಾತ್ರ ಕಣ್ಣೀರಿಡುವಂತಾಗಿದ್ದರೆ, ಕುಡಿಯುವ ನೀರನ್ನೂ ಕಸಿದುಕೊಂಡು ಬೆಳೆ ಬೆಳೆಯುವ ತವಕದಲ್ಲಿ ತಮಿಳುನಾಡು ರೈತರಿದ್ದಾರೆ. ಕರ್ನಾಟಕದ ಪಾಲಿಗೆ ಕತ್ತಲ ನ್ಯಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಯಲ್ಲಿ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮ
ಮಾಧ್ಯಮ ಒಂದು ಪ್ರವೃತ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡಲಿ