ಜಾತಿ, ಧರ್ಮಗಳ ಬೇಲಿಯನ್ನು ಕಿತ್ತೆಸೆದು ತಮ್ಮ 111 ವರ್ಷಗಳ ಕಾಲ ಅನ್ನ, ವಿದ್ಯೆ, ಆಸರೆಯನ್ನು ಎಲ್ಲಾ ಸಮುದಾಯದ ಬಡಮಕ್ಕಳಿಗೂ ನೀಡಿ ಶಿಕ್ಷಣ ಕ್ರಾಂತಿಯ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿದ ಸಿದ್ಧಗಂಗಾಶ್ರೀಗಳು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅವರ ತತ್ವ ಆದರ್ಶಗಳು ಅನುಕರಣೀಯವಾಗಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತ್ರಿವಿಧ ದಾಸೋಹದ ಮೂಲಕ ಇಡೀ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಕಾಯಕತತ್ವ ಸಾರಿದ ಮಹಾನ್ ಸಂತ ಎಂದು ಲಯನ್ ಸಂಸ್ಥೆ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿಯವರ ಉದ್ಯಾನವನದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಕಾಯಕಯೋಗಿ ಫೌಂಡೇಶನ್, ಕನ್ನಿಕಾಶಿಲ್ಪ ನವೋದಯ ಟ್ರಸ್ಟ್, ಪ್ರತಿಭಾಂಜಲಿ ಸುಗಮಸಂಗೀತ ಸಂಸ್ಥೆ ಆಯೋಜಿಸಿದ್ದ ನಿಜಶರಣ ಹಡಪದ ಅಪ್ಪಣ್ಣ, ಶ್ರೀಸಿದ್ದಲಿಂಗ ಮಹಾ ಸ್ವಾಮೀಜಿ ಜನ್ಮದಿನಾಚರಣೆ ಹಾಗೂ ಎಸ್.ಜಾನಕಿ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾತಿ, ಧರ್ಮಗಳ ಬೇಲಿಯನ್ನು ಕಿತ್ತೆಸೆದು ತಮ್ಮ 111 ವರ್ಷಗಳ ಕಾಲ ಅನ್ನ, ವಿದ್ಯೆ, ಆಸರೆಯನ್ನು ಎಲ್ಲಾ ಸಮುದಾಯದ ಬಡಮಕ್ಕಳಿಗೂ ನೀಡಿ ಶಿಕ್ಷಣ ಕ್ರಾಂತಿಯ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿದ ಸಿದ್ಧಗಂಗಾಶ್ರೀಗಳು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅವರ ತತ್ವ ಆದರ್ಶಗಳು ಅನುಕರಣೀಯವಾಗಿವೆ ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕನ್ನಿಕಾಶಿಲ್ಪ ನವೋದಯ ಟ್ರಸ್ಟ್ ಅಧ್ಯಕ್ಷೆ ಡಾ.ಎಚ್.ಆರ್.ಕನ್ನಿಕಾ ಸಂಗೀತಲೋಕದ ಮಹಾನ್ ಸಾಧಕಿ ಎಸ್.ಜಾನಕಿ ಅಮ್ಮನವರ ಸುಶ್ರಾವ್ಯ ಕಂಠದಲ್ಲಿ ಎಂತಹ ಕಲ್ಲುಹೃದಯವನ್ನು ಕರಗಿಸುವ ಶಕ್ತಿ ಇದೆ. ಕನ್ನಡಭಾಷೆಯನ್ನು ಶ್ರೀಮಂತಗೊಳಿಸಿದ ಅವರ ಹಾಡುಗಳು ಸದಾ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದಿವೆ ಎಂದು ಭಾವುಕರಾಗಿ ನುಡಿದರು.
ಕನ್ನಡ ಸಹಾಯಕ ಪ್ರಾಧ್ಯಾಪಕಿ ಜಿ.ಉಷಾರಾಣಿ ಮಾತನಾಡಿ, ಪ್ರತಿ ಹುಣ್ಣಿಮೆಯಲ್ಲೂ ದಾಸೋಹ ನೀಡಿ ಕಾಯಕತತ್ವದ ಸಂದೇಶವನ್ನು ಸಾರುತ್ತಾ ಬಂದಿರುವುದು ಮಾದರಿಯ ಕೆಲಸವಾಗಿದೆ. ದಾಸೋಹದ ಜೊತೆಗೆ ಎಸ್.ಜಾನಕಿಯವರ ಸಂಗೀತ ರಸದೌತಣ ಉಣಬಡಿಸಿರುವ ಕಲಾವಿದರ ಶ್ರಮ ಸಾರ್ಥಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಿದ್ಧಗಂಗಾಶ್ರೀಗಳ ಪುತ್ಥಳಿಗೆ ಗಣ್ಯರು ವಿಶೇಷ ಪೂಜೆ ಸಲ್ಲಿಸಿ ಗುರುನಮನ ಸಲ್ಲಿಸಿದರು. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಕಲಾವಿದರು ಎಸ್.ಜಾನಕಿಯವರ 88 ಚಲನಚಿತ್ರಗಳ ಪಲ್ಲವಿಯನ್ನು ಸುಶ್ರಾವ್ಯವಾಗಿ ಹಾಡಿ ಜನಮನ ಸೂರೆಗೊಂಡರು.
ಅಕಾಡೆಮಿಯ ಅಧ್ಯಕ್ಷ ಡೇವಿಡ್ ಹಾಗೂ ಕಲಾವಿದರನ್ನು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಅಭಿನಂದಿಸಿದರು. ವೇದಿಕೆಯಲ್ಲಿ ಸಮಾಜಸೇವಕ ಹೊನ್ನಾವರ ಪುಟ್ಟರಾಜು, ಸಿದ್ಧಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ನಗರಸಭೆ ಮಾಜಿ ಸದಸ್ಯೆ ಕೆ.ವಿದ್ಯಾಮಂಜುನಾಥ್, ಅನನ್ಯಟ್ರಸ್ಟ್ ಅಧ್ಯಕ್ಷೆ ಬಿ.ಎಸ್.ಅನುಪಮಾ, ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಕವಿ ದೋ.ಚಿ.ಗೌಡ, ಕಟ್ಟೆಕೃಷ್ಣಸ್ವಾಮಿ, ಸಿ.ಎಂ.ದ್ಯಾವಪ್ಪ, ಶಂಕರಲಿಂಗೇಗೌಡ, ಶಿವರುದ್ರಪ್ಪ, ಮಲ್ಲಿಕಾರ್ಜುನಯ್ಯ, ಎ.ಎಲ್.ಬಸವೇಗೌಡ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.