ಕಾವೇರಿ ನೀರಿ: ಮಂಡ್ಯದಲ್ಲಿ ಉರುಳು ಸೇವೆ, ಅರೆಬೆತ್ತಲೆ ಪ್ರತಿಭಟನೆ

KannadaprabhaNewsNetwork |  
Published : Jul 29, 2026, 01:30 AM IST
೨೮ಕೆಎಂಎನ್‌ಡಿ-೪ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಕಾವೇರಿ ನೀರು ನಿರ್ವಹಣಾ ಮಂಡಳಿ ಶಿಫಾರಸನ್ನು ವಿರೋಧಿಸಿ ಮಂಡ್ಯದಲ್ಲಿ ರೈತಸಂಘ, ಬಿಜೆಪಿ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. | Kannada Prabha

ಸಾರಾಂಶ

ನೀರು ನಿರ್ವಹಣಾ ಮಂಡಳಿಯಲ್ಲಿರುವ ಅಧ್ಯಕ್ಷರು, ಸದಸ್ಯರಿಗೆ ಸಂಕಷ್ಟ ಪರಿಸ್ಥಿತಿ ಅರ್ಥವಾಗುವುದಿಲ್ಲವೇ. ಬರಗಾಲದಲ್ಲಿ ನೀರು ಬಿಡಿ ಎಂದರೆ ಹೇಗೆ ಬಿಡಲು ಸಾಧ್ಯ. ಮಳೆ ಕೊರತೆ ಎದುರಾದಾಗಲೆಲ್ಲಾ ತಮಿಳುನಾಡಿನ ರೈತರ ಪರಿಸ್ಥಿತಿಯನ್ನು ಪರಿಗಣಿಸುವಂತೆ ಕರ್ನಾಟಕದ ಕಾವೇರಿ ಕಣಿವೆ ರೈತರ ಪರಿಸ್ಥಿತಿಯನ್ನು ಪರಿಗಣಿಸುವುದಿಲ್ಲವೇಕೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ೧೫ ದಿನಗಳ ಕಾಲ ೩,೫೦೦ ಕ್ಯುಸೆಕ್‌ನಂತೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಶಿಫಾರಸು ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ರೈತಸಂಘ, ಬಿಜೆಪಿ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಉರುಳು ಸೇವೆ, ಹೆದ್ದಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ತೀರ್ಮಾನ ಹೊರಬೀಳುತ್ತಿದ್ದಂತೆ ರಸ್ತೆಗಿಳಿದ ರೈತಸಂಘ, ಬಿಜೆಪಿ ಮತ್ತು ಕನ್ನಪರ ಸಂಘಟನೆಗಳ ಕಾರ್ಯಕರ್ತರು ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಧಿಕ್ಕಾರದ ಘೋಷಣೆ ಕೂಗಿದರು. ಕಾವೇರಿ ಕಣಿವೆಯ ಅಣೆಕಟ್ಟೆಗಳು ಇಲ್ಲಿನ ರೈತರ ಉದ್ಧಾರಕ್ಕಾಗಿಲ್ಲ. ಬದಲಿಗೆ ತಮಿಳುನಾಡಿನ ರೈತರ ಉದ್ಧಾರಕ್ಕಷ್ಟೇ ಸೀಮಿತವಾಗಿವೆ ಎಂದು ಕಿಡಿಕಾರಿದರು.

ನೀರು ನಿರ್ವಹಣಾ ಮಂಡಳಿಯಲ್ಲಿರುವ ಅಧ್ಯಕ್ಷರು, ಸದಸ್ಯರಿಗೆ ಸಂಕಷ್ಟ ಪರಿಸ್ಥಿತಿ ಅರ್ಥವಾಗುವುದಿಲ್ಲವೇ. ಬರಗಾಲದಲ್ಲಿ ನೀರು ಬಿಡಿ ಎಂದರೆ ಹೇಗೆ ಬಿಡಲು ಸಾಧ್ಯ. ಮಳೆ ಕೊರತೆ ಎದುರಾದಾಗಲೆಲ್ಲಾ ತಮಿಳುನಾಡಿನ ರೈತರ ಪರಿಸ್ಥಿತಿಯನ್ನು ಪರಿಗಣಿಸುವಂತೆ ಕರ್ನಾಟಕದ ಕಾವೇರಿ ಕಣಿವೆ ರೈತರ ಪರಿಸ್ಥಿತಿಯನ್ನು ಪರಿಗಣಿಸುವುದಿಲ್ಲವೇಕೆ. ಇಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರಿಲ್ಲ. ಮಳೆ ಕೊರತೆಯಿಂದ ಹೊಸ ಬೆಳೆಯನ್ನೂ ಬೆಳೆಯದಂತಾಗಿದೆ. ರೈತರ ಬದುಕು ಬೀದಿ ಪಾಲಾಗುತ್ತಿದೆ. ಕಬ್ಬು ಬೆಳೆ ನೀರಿಲ್ಲದೆ ಉರುವಲಾಗಿದೆ. ಈ ಬವಣೆ ಮಂಡಳಿಗೆ ಅರ್ಥವಾಗದಿದ್ದ ಮೇಲೆ ಅದನ್ನು ವಿಸರ್ಜಿಸುವಂತೆ ಆಗ್ರಹಿಸಿದರು.

ತಮಿಳುನಾಡಿಗೆ ನೀರು ಬಿಡದಂತೆ ನಾವೇನು ಹಿಡಿದಿಟ್ಟುಕೊಂಡಿಲ್ಲ. ಕೇಂದ್ರ ತಂಡವನ್ನು ಕಳುಹಿಸಿ ಇಲ್ಲಿನ ಜಲಾಶಯಗಳಲ್ಲಿರುವ ನೀರಿನ ಪರಿಸ್ಥಿತಿಯನ್ನು ನೋಡಲಿ. ಉತ್ತಮ ಮಳೆಯಾದ ಸಮಯದಲ್ಲೆಲ್ಲಾ ನೀರು ತನ್ನಿಂತಾನೇ ತಮಿಳುನಾಡಿಗೆ ಹರಿದುಹೋಗಿದೆ. ಈಗ ಮಳೆ ಅಭಾವದಿಂದ ಜಲಾಶಯಗಳಿಗೆ ಒಳಹರಿವೇ ಇಲ್ಲದಂತಾಗಿದೆ. ಕುಡಿಯಲು ಕಾಯ್ದಿರಿಸಿರುವ ನೀರನ್ನು ಕೊಟ್ಟು ನಾವೇನು ವಿಷ ಕುಡಿಯಬೇಕೆ ಎಂದು ಆವೇಶದಿಂದ ನುಡಿದರು.

ರಾಜ್ಯಸರ್ಕಾರ ಇಲ್ಲಿನ ರೈತರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಬಾರದು. ಸುಪ್ರೀಂಕೋರ್ಟ್‌ಗೆ ಹೋದರೂ ರೈತರ ಹಿತ ಕಾಯುವುದಕ್ಕೆ ಸಿದ್ಧವಾಗಿರಬೇಕು. ನೀರು ಬಿಡುಗಡೆಗೆ ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಎಚ್.ಟಿ.ಮಂಜುನಾಥ್, ಬಿಜೆಪಿಯ ಸಿ.ಟಿ.ಮಂಜುನಾಥ್, ಶಿವಕುಮಾರ ಆರಾಧ್ಯ, ಶಿವಳ್ಳಿ ಚಂದ್ರಶೇಖರ್, ಜೈ ಕರ್ನಾಟಕ ಸಂಘಟನೆಯ ಅಧ್ಯಕ್ಷ ಎಸ್.ನಾರಾಯಣ್, ಮುಡಾ ಮಾಜಿ ಅಧ್ಯಕ್ಷ ನಯೀಂ, ಸುಧೀರ್‌ಕುಮಾರ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಗ್ರಾ.ಪಂನಲ್ಲಿ ಅರ್ಹ ಮೂವರು ಗೃಹಲಕ್ಷ್ಮಿಯರಿಗೆ ಸನ್ಮಾನ: ಎಲ್.ಪಿ. ಪ್ರಕಾಶ್‌ಗೌಡ
ಸೌಲಭ್ಯ ವಂಚಿತರಿಗೆ ನೆರವಾಗುವ ದೊಡ್ಡ ಸಂಸ್ಥೆ ರೋಟರಿ: ಅಲೆನ್ ವಿನಯ್ ಲಿವಿಸ್