ಬರದ ನಡುವೆ ರಾಜ್ಯಕ್ಕೆ ಬರ ಸಿಡಿಲು..!

KannadaprabhaNewsNetwork |  
Published : Jul 29, 2026, 01:30 AM IST
ಕೆ.ಎಸ್‌.ನಂಜುಂಡೇಗೌಡ | Kannada Prabha

ಸಾರಾಂಶ

ಕೃಷ್ಣರಾಜಸಾಗರ ಜಲಾಶಯದಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಹೊಸ ಬೆಳೆಯನ್ನು ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಬಿಸಿಲು-ಮೋಡದ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುವಂತೆ ನಿರ್ದೇಶಿಸಿರುವುದು ತೀವ್ರ ಆಘಾತ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳೆ ಕೊರತೆ, ಬರಗಾಲದ ನಡುವೆಯೂ ತಮಿಳುನಾಡಿಗೆ ನಿತ್ಯ ೩೫೦೦ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಮಂಡಳಿ ಶಿಫಾರಸು ಮಾಡಿರುವುದು ಕಾವೇರಿ ಕಣಿವೆ ಪ್ರದೇಶದ ರೈತರಿಗೆ ಬರದ ನಡುವೆ ಬರಸಿಡಿಲು ಬಡಿದಂತಾಗಿದೆ.

ಮುಂಗಾರು ವೈಫಲ್ಯದಿಂದ ಬಿತ್ತನೆ ಚಟುವಟಿಕೆ ಸ್ಥಗಿತಗೊಂಡಿದೆ. ಬೆಳೆದು ನಿಂತಿರುವ ಬೆಳೆಯನ್ನೂ ರಕ್ಷಿಸಿಕೊಳ್ಳಲಾಗುತ್ತಿಲ್ಲ. ಕೃಷ್ಣರಾಜಸಾಗರ ಜಲಾಶಯದಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಹೊಸ ಬೆಳೆಯನ್ನು ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಬಿಸಿಲು-ಮೋಡದ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುವಂತೆ ನಿರ್ದೇಶಿಸಿರುವುದು ತೀವ್ರ ಆಘಾತ ಮೂಡಿಸಿದೆ.

ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಡೆದು ತಮಿಳುನಾಡಿ ಒತ್ತಡಕ್ಕೆ ಮಣಿದು ೧೫ ದಿನಗಳವರೆಗೆ ನಿತ್ಯ ೩೫೦೦ ಕ್ಯುಸೆಕ್ ನೀರು ಹರಿಸುವಂತೆ ಆದೇಶಿಸಿದೆ. ಜು.೨೨ರಂದು ನಡೆದ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ಇದು ಸಂಕಷ್ಟ ವರ್ಷ. ಕುಡಿಯಲು ಮಾತ್ರ ನೀರನ್ನು ಬಳಸಿ, ಕೃಷಿ ಉದ್ದೇಶಕ್ಕೆ ಬಳಸದಂತೆ ಸೂಚನೆ ನೀಡಿತ್ತು. ಇದರಿಂದ ಕಾವೇರಿ ಕಣಿವೆ ಪ್ರದೇಶದ ರೈತರಿಗೆ ಅನುಕೂಲವಾಗಿತ್ತು. ಆದರೆ, ಐದು ದಿನಗಳ ನಂತರ ಸಂಕಷ್ಟ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ, ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳಲ್ಲಿರುವ ನೀರು ಸಂಗ್ರಹ, ಒಳಹರಿವು, ಹೊರಹರಿವನ್ನು ಪರಿಗಣಿಸದೆ ತಮಿಳುನಾಡಿಗೆ ಏಕಾಏಕಿ ನೀರು ಹರಿಸುವಂತೆ ಶಿಫಾರಸು ಮಾಡಿರುವುದು ಈ ಭಾಗದ ರೈತರಿಗೆ ಮಾಡಿರುವ ಅನ್ಯಾಯ ಎಂದು ಅನ್ನದಾತರು ಕಿಡಿಕಾರಿದ್ದಾರೆ.

ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ ೯೧.೮೦ ಅಡಿ ಮಾತ್ರ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ ೨೫೫೨ ಕ್ಯುಸೆಕ್ ನೀರು ಹರಿದುಬರುತ್ತಿದೆ. ನದಿಗೆ ೧೭೪೫ ಕ್ಯುಸೆಕ್ ನೀರನ್ನು ಹರಿಯಬಿಡಲಾಗುತ್ತಿದ್ದು, ಜಲಾಶಯದಲ್ಲಿ ಕೇವಲ ೮.೬೬೦ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈಗಾಗಲೇ ಆಗಸ್ಟ್ ತಿಂಗಳಿಗೆ ಕಾಲಿಡುತ್ತಿದ್ದರೂ ಮಳೆ ಬಂದು ಜಲಾಶಯ ಭರ್ತಿಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ನೀರು ಹರಿಸುವಂತೆ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಸಂಕಷ್ಟ ಸಮಯದಲ್ಲಿ ನೀರನ್ನು ಹಂಚಿಕೊಳ್ಳುವ ಸಂಬಂಧ ಸಂಕಷ್ಟ ಸೂತ್ರವನ್ನೂ ರಚಿಸಿಲ್ಲ. ಮಳೆ ಕೊರತೆಯಾದ ಸಮಯದಲ್ಲೂ ನಿಗದಿಯಷ್ಟೇ ನೀರನ್ನು ಬಿಡುವಂತೆ ಶಿಫಾರಸು ಮಾಡುವುದು ಅವೈಜ್ಞಾನಿಕ. ಉತ್ತಮ ಮಳೆಯಾದಾಗಲೆಲ್ಲಾ ನಿಗದಿಗಿಂತ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಈ ಸತ್ಯ ತಮಿಳುನಾಡು ಹಾಗೂ ನೀರು ನಿರ್ವಹಣಾ ಮಂಡಳಿಯವರಿಗೆ ಗೊತ್ತಿದ್ದರೂ ಮಳೆ ಕೈಕೊಟ್ಟ ಸಮಯದಲ್ಲಿ ಪರಸ್ಪರ ಹೊಂದಾಣಿಕೆ, ಸಮನ್ವಯತೆಯ ಸೂತ್ರವನ್ನು ಮುಂದಿಡದೆ ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಬಿಡುವಂತೆ ನಿರ್ದೇಶನ ನೀಡಿರುವುದು ಒಂದು ರೈತರಿಗೆ ಮಾಡುವ ಅನ್ಯಾಯ ಎಂದು ರೈತ ಮುಖಂಡರು ಹರಿಹಾಯ್ದಿದ್ದಾರೆ.

ನೀರು ನಿರ್ವಹಣಾ ಮಂಡಳಿಗೆ ಕನಿಷ್ಠ ಮಾನವೀಯತೆ ಇಲ್ಲ. ಸಂಕಷ್ಟದಲ್ಲಿ ನೀರು ಬಿಡುವಂತೆ ಆದೇಶಿಸಿರುವುದು ಅಮಾನವೀಯ. ಮಳೆ ಕೊರತೆ, ನೀರಿನ ಅಭಾವ ಗೊತ್ತಿದ್ದೂ ನೀರು ಬಿಡುಗಡೆಗೆ ಸೂಚನೆ ನೀಡುವುದು ರಾಜ್ಯದ ಕಾವೇರಿ ಕಣಿವೆ ರೈತರಿಗೆ ಮಾಡುವ ಘೋರ ಅನ್ಯಾಯ.

- ಕೆ.ಎಸ್‌.ನಂಜುಂಡೇಗೌಡ, ರೈತ ಹೋರಾಟಗಾರ

ನೀರಿಗೆ ಎಂತಹ ಕಠಿಣ ಪರಿಸ್ಥಿತಿ ಇರುವಾಗಲೂ ತಮಿಳುನಾಡಿನ ಪರವಾಗಿಯೇ ತೀರ್ಪುಗಳು ಹೊರಬೀಳುವುದು ಸಾಮಾನ್ಯವಾಗಿದೆ. ದಶಕಗಳಿಂದಲೂ ಇದು ಸಂಪ್ರದಾಯಬದ್ಧವಾಗಿ ಹೊರಬೀಳುತ್ತಲೇ ಇವೆ. ಸಂಕಷ್ಟ ಪರಿಸ್ಥಿತಿಗೆ ಎರಡೂ ರಾಜ್ಯಗಳು ಹೊಂದಿಕೊಳ್ಳಬೇಕು. ಪ್ರಕೃತಿ ಮುನಿದ ಸಂದರ್ಭದಲ್ಲಿ ನೀರು ಬಿಡುಗಡೆ ಸಂಬಂಧ ನಿರ್ಧಾರಗಳು, ಸೂಚನೆಗಳು ಬದಲಾಗಬೇಕು.

-ಎ.ಎಲ್‌.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಗ್ರಾ.ಪಂನಲ್ಲಿ ಅರ್ಹ ಮೂವರು ಗೃಹಲಕ್ಷ್ಮಿಯರಿಗೆ ಸನ್ಮಾನ: ಎಲ್.ಪಿ. ಪ್ರಕಾಶ್‌ಗೌಡ
ಸೌಲಭ್ಯ ವಂಚಿತರಿಗೆ ನೆರವಾಗುವ ದೊಡ್ಡ ಸಂಸ್ಥೆ ರೋಟರಿ: ಅಲೆನ್ ವಿನಯ್ ಲಿವಿಸ್