ವಿದ್ಯಾರ್ಥಿಗಳು ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ದಿನನಿತ್ಯದ ಚಟುವಟಿಕೆ, ಸ್ನೇಹ ಬಳಗ, ಮೊಬೈಲ್ ಬಳಕೆ ಹಾಗೂ ವರ್ತನೆಯಲ್ಲಾಗುವ ಬದಲಾವಣೆಗಳ ಬಗ್ಗೆ ನಿರಂತರ ಗಮನಹರಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಉತ್ತರ ಭಾರತದ ವಿವಿಧ ಭಾಗಗಳಿಂದ ರೈಲುಗಳ ಮೂಲಕ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಗೆ ಮಾದಕ ವಸ್ತುಗಳು ಸಾಗಾಣಿಕೆಯಾಗುತ್ತಿರುವ ಕುರಿತು ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಹಾಗೂ ನಿಗಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳು ಬಲಪಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ತಿಳಿಸಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಅಬಕಾರಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಡ್ಯ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ಜಾಗೃತಿ ಕಾಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಯಲ್ಲಿ ಕೆಲವು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗುತ್ತಿರುವುದು ಸಮಾಜಕ್ಕೆ ಗಂಭೀರ ಸವಾಲಾಗಿದೆ. ಆದ್ದರಿಂದ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಪೊಲೀಸ್ ಇಲಾಖೆ, ರೈಲ್ವೆ ಭದ್ರತಾ ಪಡೆ ಹಾಗೂ ಇತರೆ ಸಂಬಂಧಿತ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ದಿನನಿತ್ಯದ ಚಟುವಟಿಕೆ, ಸ್ನೇಹ ಬಳಗ, ಮೊಬೈಲ್ ಬಳಕೆ ಹಾಗೂ ವರ್ತನೆಯಲ್ಲಾಗುವ ಬದಲಾವಣೆಗಳ ಬಗ್ಗೆ ನಿರಂತರ ಗಮನಹರಿಸಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಸಮನ್ವಯದೊಂದಿಗೆ ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವಜನರು ಡ್ರಗ್ಸ್ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗದೆ ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನ ನಡೆಸಬೇಕು ಎಂದರು.
ಡ್ರಗ್ಸ್ ಎಂಬ ಮಾದಕ ವಸ್ತು ವಿಶ್ವದಾದ್ಯಂತ ಯುವಜನರ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದರ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಕ್ಷಣಿಕ ಸುಖಕ್ಕಾಗಿ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದಂತೆ ಕಿವಿಮಾತು ಹೇಳಿದರು.
ಮಾದಕ ವಸ್ತುಗಳು ಮಾನವನ ಮೆದುಳು, ನರಮಂಡಲ ಹಾಗೂ ದೇಹದ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರಬರುವುದು ಅತ್ಯಂತ ಕಷ್ಟಕರ. ಆದ್ದರಿಂದ ಯುವಜನತೆ ವ್ಯಸನಗಳಿಂದ ದೂರವಿದ್ದು, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ತಮ್ಮ ಸ್ನೇಹಿತರು ಹಾಗೂ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಜವಾಬ್ದಾರಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಮೈಸೂರು ವಿಭಾಗದ ಅಬಕಾರಿ ಇಲಾಖೆಯ ಅಧೀಕ್ಷಕ ಜಿ.ವಿವೇಕ್ ಮತ್ತು ಮಂಡ್ಯ ಮನೋ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಪಕ ಕೆ.ಅಶೋಕ್‌ಕುಮಾರ್ ಮಾದಕ ವಸ್ತುಗಳ ವಿರೋಧಿ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಬಸವರಾಜು, ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಜಿ.ವೆಂಕಟಲಕ್ಷ್ಮಮ್ಮ, ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ್, ಉಪ ಆಯುಕ್ತ ಎಂ. ರಮೇಶ್, ಮಿಮ್ಸ್ ಪ್ರಾಂಶುಪಾಲ ಡಾ.ಎಂ.ಹನುಮಂತ ಪ್ರಸಾದ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.