- ಜಿಲ್ಲಾ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ, ಗುಂಪುಗಳಿಲ್ಲ: ಬಿ.ಎಸ್.ಜಗದೀಶ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಭಿನ್ನಾಮತ, ಭಿನ್ನಾಭಿಪ್ರಾಯಗಳೂ ಇಲ್ಲ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಪಕ್ಷದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಚುನಾವಣೆಗಳಾದ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಲಿದ್ದು, ರಾಜ್ಯದಲ್ಲೂ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದರು.ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸಣ್ಣಪುಟ್ಟ ಗೊಂದಲ, ಅಸಮಾಧಾನ ಸಹಜ. ಅದೇ ರೀತಿ ನಮ್ಮಲ್ಲೂ ಕೆಲವೊಂದಿಷ್ಟು ಭಿನ್ನಾಭಿಪ್ರಾಯ ಇರಬಹುದಷ್ಟೆ. ಆದರೆ, ಅದು ಭಿನ್ನಮತವಲ್ಲ, ಅಭಿಪ್ರಾಯ ಭೇದವಷ್ಟೇ. ನಮ್ಮಲ್ಲಿ ಯಾವುದೇ ಬಣವಾಗಲೀ, ಗುಂಪಾಗಲೀ ಇಲ್ಲ. ಇರುವುದೊಂದೇ ಗುಂಪು, ಅದು ಬಿಜೆಪಿ ಗುಂಪು ಎಂದು ಅವರು ಹೇಳಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಲಕ್ಷ್ಮಣ, ಖಜಾಂಚಿ ಎಚ್.ಪಿ.ವಿಶ್ವಾಸ, ಮುಖಂಡರಾದ ಮಾಜಿ ಮೇಯರ್ ಎಚ್.ಎನ್.ಗುರುನಾಥ, ಜಯಪ್ರಕಾಶ, ಗುತ್ತೂರು ಮಂಜುನಾಥ, ಜಯರುದ್ರಪ್ಪ ಇತರರು ಇದ್ದರು.
(ಬಾಕ್ಸ್)
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಐ.ಆರ್. ಪ್ರಕ್ರಿಯೆ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆಗೂ ಸಂಪರ್ಕಿಸಿ ಗಣತಿ ನಮೂನೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಶೇ.82ರಿಂದ ಶೇ.100 ಗಣಕೀಕರಣ ಯಶಸ್ವಿಯಾಗಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾಲಕಾಲಕ್ಕೆ ನಡೆದು ಬಂದಿದೆ. 2002ರಲ್ಲಿ ಪಟ್ಟಿ ಪರಿಷ್ಕರಣೆಯಾಗಿತ್ತು. ಅರ್ಹ ಮತದಾರರೆಲ್ಲರೂ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಎರಡೆರಡು ಕಡೆ ಮತ ಹೊಂದದಂತೆ ತಡೆಯುವುದಷ್ಟೇ ಎಸ್ಐಆರ್ ಉದ್ದೇಶ. ಒಂದುವೇಳೆ ಈಗ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋದರೆ, ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ಫಾರಂ-6 ಸಲ್ಲಿಸಿ ಹೊಸದಾಗಿ ಹೆಸರು ನೋಂದಾಯಿಸಲು ಅವಕಾಶವಿದೆ. ಯಾವುದೇ ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
-28ಕೆಡಿವಿಜಿ7: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಜಗದೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.