ಕನಕಪುರ: ತಮಿಳುನಾಡಿಗೆ ನೀರು ಬಿಟ್ಟರೆ ಬೆಂಗಳೂರಿನಲ್ಲಿ ಆಗಸ್ಟ್ 3ರಂದು ಆಯೋಜಿಸಿರುವ ಕರ್ನಾಟಕ-ತಮಿಳುನಾಡು ಮುಖ್ಯಮಂತ್ರಿಗಳ ಸಭೆ ನಡೆಯಲು ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಯ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ CWRC ಸಭೆಯಲ್ಲಿ ಕರ್ನಾಟಕದ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3.5 ಕ್ಯೂಸೆಕ್ ನೀರು ಬಿಡುವಂತೆ ಆದೇಶ ಹೊರಡಿಸಲಾಗಿದ್ದು ಈ ಆದೇಶ ಸಂಪೂರ್ಣ ಅವೈಜ್ಞಾನಿಕ ಮತ್ತು ರಾಜ್ಯದ ಹಿತಕ್ಕೆ ವಿರುದ್ಧವಾಗಿದ್ದು ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕೆಆರ್‌ಎಸ್ ಜಲಾಶಯದ ಸಂಗ್ರಹವೂ ಅಪಾಯದ ಮಟ್ಟದಲ್ಲಿದೆ. ಈಗಿರುವ ನೀರು ಸಂಗ್ರಹ ಒಂದು ಬೆಳೆಗೂ ಸಾಕಾಗುವುದಿಲ್ಲ. ಇಂತಹ ಸಂದರ್ಭದಲ್ಲಿ 4 ಟಿಎಂಸಿ ನೀರನ್ನು ಹೊರ ರಾಜ್ಯಕ್ಕೆ ಬಿಡುವಂತೆ ಸಮಿತಿ ಹೇಳುವುದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಮಿಳುನಾಡು ಕಾವೇರಿ ನೀರನ್ನು ಕೇವಲ ಕೃಷಿಗಷ್ಟೇ ಅಲ್ಲ, ಉದ್ಯಮಕ್ಕೂ ಬಳಸಿಕೊಂಡು ಕರ್ನಾಟಕದ ಪಾಲನ್ನು ಲೂಟಿ ಮಾಡುತ್ತಿದೆ. ಸಿಡಬ್ಲ್ಯುಸಿ ಆದೇಶದಲ್ಲಿ ಕರ್ನಾಟಕದ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಪ್ರಮಾಣದ ಅಗತ್ಯವನ್ನು ಪರಿಗಣಿಸಿಯೇ ಇಲ್ಲ. ನ್ಯಾಯಾಧೀಕರಣದ ತೀರ್ಪಿನಲ್ಲಿ "ಕರ್ನಾಟಕದ ಮೊದಲು ಕುಡಿಯುವ ನೀರು " ಎಂಬ ಸ್ಪಷ್ಟ ನಿಬಂಧನೆ ಇದ್ದರೂ ಅದನ್ನು ಗಾಳಿಗೆ ತೂರಲಾಗಿದೆ. ಈ ಅವೈಜ್ಞಾನಿಕ ಆದೇಶವನ್ನು ಕರ್ನಾಟಕ ಸರ್ಕಾರ ತಕ್ಷಣ ವಿರೋಧಿಸಿ ಸುಪ್ರೀಂಕೋರ್ಟಿ ಮೆಟ್ಟಿಲೇರಬೇಕು. ಯಾವುದೇ ಕಾರಣಕ್ಕೂ KRS ನಿಂದ ಒಂದು ಹನಿ ನೀರನ್ನು ಕೂಡ ತಮಿಳುನಾಡಿಗೆ ಬಿಡಬಾರದು. ಇಂತಹ ಬರಗಾಲದ ಸಂದರ್ಭದಲ್ಲಿ ನೀರು ಬಿಟ್ಟರೆ ಕರ್ನಾಟಕದ 40 ಲಕ್ಷ ರೈತರ ಬದುಕು ಬೀದಿಗೆ ಬೀಳುತ್ತದೆ ಎಂದು ಕಿಡಿಕಾರಿದರು.ಕರ್ನಾಟಕ ರಾಜ್ಯ ರೈತ ಸಂಘಟನೆಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಕರ್ನಾಟಕ ಸರ್ಕಾರ ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆದು ಏಕಾಭಿಪ್ರಾಯದ ನಿರ್ಣಯ ಮಾಡಬೇಕು. ಅಗತ್ಯ ಬಿದ್ದರೆ ಕಾವೇರಿ ಉಳಿಸಿ, ಕರ್ನಾಟಕ ಉಳಿಸಿ ಚಳವಳಿ ಹೋರಾಟಕ್ಕೆ ರೈತ ಸಂಘ ಸಿದ್ಧವಿದೆ. ಸಿಡಬ್ಲ್ಯುಸಿ ಮತ್ತು ಕೇಂದ್ರ ಸರ್ಕಾರ ಕರ್ನಾಟಕದ ರೈತರ ಕಣ್ಣೀರಿಗೆ ಬೆಲೆ ಕೊಡದಿದ್ದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ. ಸರ್ಕಾರ ಕದ್ದು ಮುಚ್ಚಿ ನೀರು ಹರಿಸಿದರೆ ಸರ್ಕಾರಕ್ಕೆ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕೆ ಕೆ ಪಿ ಸುದ್ದಿ 01: