ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ವಿದ್ಯಾರ್ಥಿಗಳು ರೈತರು ಹಾಗೂ ರೈತರ ಮಕ್ಕಳಿಗೆ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಘೋಷಣೆ ಮೊಳಗಿಸಿದರು. ಹತ್ತು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಇದುವರೆಗೂ ವಿದ್ಯಾರ್ಥಿಗಳ ಅಹವಾಲುಗಳನ್ನು ಯಾರೊಬ್ಬರೂ ಆಲಿಸುತ್ತಿಲ್ಲ. ಸರ್ಕಾರದ ವರ್ತನೆ ಹೀಗೆ ಮುಂದುವರೆದರೆ ಐದು ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಪರವಾಗಿ ಕೆ.ಇಶಾಂತ್‌ಗೌಡ ಮಾತನಾಡಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ರೈತರಿಗೆ ತಾಂತ್ರಿಕ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿಯಂತ್ರಣ, ಕೃಷಿ ವಿಸ್ತರಣಾ ಸೇವೆಗಳು, ವಿವಿಧ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಹುದ್ದೆಗಳಾಗಿವೆ. ಈ ಹುದ್ದೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಈ ಹುದ್ದೆಗಳಿಗೆ ಕೃಷಿ ಸಂಬಂಧಿತ ಪದವೀಧರರನ್ನು ಮಾತ್ರ ಪರಿಗಣಿಸಬೇಕು ಎಂದು ಕರ್ನಾಟಕ ಕೃಷಿ ಸೇವೆಗಳ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ರಾಜ್ಯಸರ್ಕಾರ ಈ ಹುದ್ದೆಗಳಿಗೆ ರೈ-ಟೆಕ್ ವಿಶ್ವವಿದ್ಯಾಲಯದ ಕೃಷಿ ಪದವೀಧರರನ್ನೂ ಅರ್ಹರೆಂದು ಪರಿಗಣಿಸಿದೆ. ಅಲ್ಲದೆ, ಬಯೋಟೆಕ್ನಾಲಜಿ ವಿಷಯದಲ್ಲಿ ಪದವಿ ಗಳಿಸಿದ ಇಂಜಿನಿಯರ್‌ಗಳನ್ನೂ ಅರ್ಹರೆಂದು ಸುತ್ತೋಲೆ ಹೊರಡಿಸಿರುವುದು ಕೃಷಿ ಪದವೀಧರರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಟೀಕಿಸಿದು.
ಕರ್ನಾಟಕ ಮುಖ್ಯಮಂತ್ರಿಗಳು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪರ ಹೋರಾಡುವುದಲ್ಲ. ಇಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವುದೇನು ಎಂದು ಪ್ರಶ್ನಿಸಿದರು.
ನ್ಯಾಯ ಸಮ್ಮತ ಬೇಡಿಕೆಗಳು ಈಡೇರುವವರೆಗೆ, ಕೃಷಿ ಶಿಕ್ಷಣದ ಘನತೆ ಕಾಪಾಡುವವರೆಗೆ, ಕೃಷಿ ಪದವೀಧರರಿಗೆ ನ್ಯಾಯ ದೊರೆಯುವವರೆಗೆ ಕೃಷಿ ಅಧಿಕಾರಿಗಳ ನೇಮಕಾತಿಯಲ್ಲಿನ ನಿಯಮಬಾಹೀರ ಅರ್ಹತೆಗಳನ್ನು ಹಿಂಪಡೆಯುವವರೆಗೆ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಎಚ್ಚರಿಸಿದರು.