ಮೇಕೆದಾಟು ಯೋಜನೆ ಜಾರಿಗೆ ಸಕಾಲ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Jul 29, 2026, 01:30 AM IST
೨೮ಕೆಎಂಎನ್‌ಡಿ-೧ಮಂಡ್ಯದ ನಗರಸಭೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಇನ್ನು ಯಾವುದೇ ವಿಳಂಬ ಮಾಡದೆ ಮೇಕೆದಾಟು ಯೋಜನೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದು ಕೇವಲ ಮಂಡ್ಯ ಅಥವಾ ದಕ್ಷಿಣ ಕರ್ನಾಟಕದ ಪ್ರಶ್ನೆಯಲ್ಲ, ಭವಿಷ್ಯದ ಕುಡಿಯುವ ನೀರಿನ ಭದ್ರತೆ ಹಾಗೂ ಜಲಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಯೋಜನೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನ ಅನುಮತಿ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟ ನಿಲುವನ್ನು ಪ್ರಕಟಿಸಿರುವುದರಿಂದ ಯೋಜನೆ ಜಾರಿಗೆ ಇದು ಸಕಾಲವಾಗಿದ್ದು, ಇನ್ನು ವಿಳಂಬ ಮಾಡುವುದು ಬೇಡ. ಆದಷ್ಟು ಬೇಗ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರಸಭೆಯ ಶಾಸಕರ ಕಚೇರಿಯಲ್ಲಿ ಮಂಗಳವಾರ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೮ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನೇ ಕೇಂದ್ರ ಸರ್ಕಾರ ಪುನರುಚ್ಚರಿಸಿರುವುದರಿಂದ ಕರ್ನಾಟಕದ ವಾದಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಕಾವೇರಿ ನದಿಯ ಮೇಲೆ ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಅಥವಾ ಅಣೆಕಟ್ಟು ನಿರ್ಮಿಸಲು ಇತರೆ ರಾಜ್ಯಗಳ ಅನುಮತಿ ಕಡ್ಡಾಯವಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ. ಇದರಿಂದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸೃಷ್ಟಿಸುತ್ತಿದ್ದ ಗೊಂದಲಕ್ಕೂ ಇದರಿಂದ ತೆರೆ ಬಿದ್ದಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಇನ್ನು ಯಾವುದೇ ವಿಳಂಬ ಮಾಡದೆ ಮೇಕೆದಾಟು ಯೋಜನೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದು ಕೇವಲ ಮಂಡ್ಯ ಅಥವಾ ದಕ್ಷಿಣ ಕರ್ನಾಟಕದ ಪ್ರಶ್ನೆಯಲ್ಲ, ಭವಿಷ್ಯದ ಕುಡಿಯುವ ನೀರಿನ ಭದ್ರತೆ ಹಾಗೂ ಜಲಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಯೋಜನೆಯಾಗಿದೆ ಎಂದರು.

ವಿಜಯ್ ಆಗಮನವನ್ನು ಸ್ವಾಗತಿಸುವೆ:

ಆಗಸ್ಟ್ ೩ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕರ್ನಾಟಕಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅವರ ಆಗಮನವನ್ನು ಸ್ವಾಗತಿಸುತ್ತೇನೆ. ಅವರು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ಕರ್ನಾಟಕದ ಹಕ್ಕಿನ ವಿಚಾರದಲ್ಲಿ ಯಾವುದೇ ರೀತಿಯ ಒತ್ತಡ ಬಂದರೂ ರಾಜ್ಯ ಸರ್ಕಾರ ಮಣಿಯಬಾರದು. ಕರ್ನಾಟಕದ ಮುಖ್ಯಮಂತ್ರಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಮಾತುಕತೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ನಿರ್ಧಾರಗಳು ಆಗಬೇಕು ಎಂದು ನುಡಿದರು.

ಮೇಕೆದಾಟು ಯೋಜನೆಗೆ ಬೆಂಬಲವಾಗಿ ಜಿಲ್ಲೆಯ ವಿವಿಧ ಸಂಘಟನೆಗಳು, ರೈತ ಮುಖಂಡರು ಹಾಗೂ ಹೋರಾಟಗಾರರ ಸಭೆಯನ್ನು ಶೀಘ್ರದಲ್ಲೇ ಕರೆಯುವುದಾಗಿ ತಿಳಿಸಿದ ಅವರು, ಯೋಜನೆಯ ಪರವಾಗಿ ಒಗ್ಗಟ್ಟಿನ ಧ್ವನಿ ಎತ್ತುವಂತೆ ಮನವಿ ಮಾಡುತ್ತೇನೆ ಎಂದರು.

ಪರಿಸರ ಸಂರಕ್ಷಣೆ-ಅಭಿವೃದ್ಧಿ ಎರಡೂ ಮುಖ್ಯ:

ಪರಿಸರವಾದಿಗಳು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಹೋರಾಟದ ಭಾವನೆಯನ್ನು ಗೌರವಿಸುತ್ತೇವೆ. ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುವುದು ಸಹಜ. ಆದರೆ, ಯೋಜನೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು ಅಥವಾ ಕೈಬಿಡಬೇಕು ಎನ್ನುವುದು ಸೂಕ್ತ ಪರಿಹಾರವಲ್ಲ. ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಮಾರ್ಗವನ್ನು ಸರ್ಕಾರ ಕಂಡುಕೊಳ್ಳಬೇಕು ಎಂದರು.

ಮಂಗಳವಾರ ನಿಗದಿಯಾಗಿರುವ ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆಯಲ್ಲೂ ವಾಸ್ತವ ಸ್ಥಿತಿಯನ್ನು ಪರಿಗಣಿಸಬೇಕು. ಕರ್ನಾಟಕದಿಂದ ಈಗಾಗಲೇ ಸಾಕಷ್ಟು ಪ್ರಮಾಣದ ನೀರು ತಮಿಳುನಾಡಿಗೆ ಹರಿಯುತ್ತಿದೆ. ಅಗತ್ಯವಿದ್ದರೆ ತಮಿಳುನಾಡು ಕೂಡ ತನ್ನ ವ್ಯಾಪ್ತಿಯಲ್ಲಿ ಹೊಸ ಜಲಾಶಯಗಳನ್ನು ನಿರ್ಮಿಸಿಕೊಳ್ಳಬಹುದು. ಆದರೆ, ಕರ್ನಾಟಕದ ಅಭಿವೃದ್ಧಿಗೆ ತಡೆಯೊಡ್ಡುವುದು ಸರಿಯಲ್ಲ ಎಂದರು.

ಸಮತೋಲನದ ನಿರ್ಧಾರ ಅವಶ್ಯ:

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾವೇರಿ ಯೋಜನೆಯ ೬ನೇ ಹಂತದ ಕುರಿತು ಮಾತನಾಡಿದ ಅವರು, ಸರ್ಕಾರ ಈ ಯೋಜನೆಯನ್ನು ಮುಂದುವರಿಸಲು ಬಯಸುತ್ತಿದೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ರೈತರು ನೀರಾವರಿ ಹಿತಾಸಕ್ತಿಯ ದೃಷ್ಟಿಯಿಂದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡೂ ವಿಚಾರಗಳು ಮಾನವೀಯ ಮೌಲ್ಯಗಳಿಗೆ ಸಂಬಂಧಿಸಿದವು. ಒಂದು ಕಡೆ ರೈತರ ಬೆಳೆ ರಕ್ಷಿಸುವ ಅಗತ್ಯವಿದ್ದರೆ, ಮತ್ತೊಂದು ಕಡೆ ಜನರಿಗೆ ಕುಡಿಯುವ ನೀರು ಒದಗಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಸರ್ಕಾರ ಎರಡರ ನಡುವೆ ಸಮತೋಲನ ಸಾಧಿಸುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದರು.

ಪ್ರಸ್ತುತ ೬ನೇ ಹಂತದ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಭವಿಷ್ಯದಲ್ಲಿ ಜನಸಂಖ್ಯೆ ಹಾಗೂ ನೀರಿನ ಬೇಡಿಕೆ ಹೆಚ್ಚಾದಂತೆ ಇನ್ನಷ್ಟು ಹಂತಗಳ ಅಗತ್ಯವೂ ಎದುರಾಗಬಹುದು. ಆದ್ದರಿಂದ ದೀರ್ಘಾವಧಿಯ ಜಲ ನಿರ್ವಹಣೆಯ ದೃಷ್ಟಿಯಿಂದ ಸರ್ಕಾರ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಒತ್ತಾಯಿಸಿದರು.ಸಿಡಬ್ಲ್ಯುಆರ್‌ಸಿ ಆದೇಶವನ್ನು ಸರ್ಕಾರ ಪಾಲಿಸಬಾರದು: ಪಿ.ರವಿಕುಮಾರ್‌

ಕನ್ನಡಪ್ರಭ ವಾರ್ತೆ ಮಂಡ್ಯತಮಿಳುನಾಡಿಗೆ 15 ದಿನಗಳವರೆಗೆ ನಿತ್ಯ 3500 ಕ್ಯುಸೆಕ್‌ ನೀರು ಬಿಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಸರ್ಕಾರ ಪಾಲಿಸಬಾರದು ಎಂದು ಶಾಸಕ ಪಿ.ರವಿಕುಮಾರ್‌ ಮನವಿ ಮಾಡಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಯಾವ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದೆ ಎಂಬುದು ತಿಳಿದಿಲ್ಲ. ರಾಜ್ಯದ ಕಾವೇರಿ ಕಣಿವೆಯ ಜನರು ಹಾಗೂ ರೈತರ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಬೇಕು ನಮ್ಮ ರೈತರಿಗೆ ಬೆಳೆ ಉಳಿಸಿಕೊಳ್ಳಲು ನೀರು ಬೇಕಾಗಿದೆ. ಜನರಿಗೆ ಕುಡಿಯಲು ನೀರು ಬೇಕಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದು ಸಮಂಜಸವಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.ಮೂರು ದಿನಗಳ ಹಿಂದೆ ನಾನು ತಮಿಳುನಾಡು ಪ್ರವಾಸಕ್ಕೆ ಹೋಗಿದ್ದೆ. ಆಗ ಚಿದಂಬರಂ ಸಮೀಪ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಸಮುದ್ರಕ್ಕೆ ಸೇರುತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಅವರ ಬಳಿ ಈಗಾಗಲೇ ಸಾಕಷ್ಟು ನೀರಿದ್ದರೂ ಅದು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಆದರೂ, ಮತ್ತೆ ಕರ್ನಾಟಕದಿಂದ ನೀರು ಬಿಡಬೇಕು ಎನ್ನುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಇದಕ್ಕೆ ಮೊದಲು ಉತ್ತರಿಸಬೇಕು. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಉಳಿಸಿಕೊಳ್ಳಲು ಅಗತ್ಯ ಮೂಲಸೌಕರ್ಯ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ದೃಢ ನಿಲುವು ತಾಳಬೇಕು ಹಾಗೂ ರೈತರ ಹಿತಕ್ಕೆ ವಿರುದ್ಧವಾದ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಗ್ರಾ.ಪಂನಲ್ಲಿ ಅರ್ಹ ಮೂವರು ಗೃಹಲಕ್ಷ್ಮಿಯರಿಗೆ ಸನ್ಮಾನ: ಎಲ್.ಪಿ. ಪ್ರಕಾಶ್‌ಗೌಡ
ಸೌಲಭ್ಯ ವಂಚಿತರಿಗೆ ನೆರವಾಗುವ ದೊಡ್ಡ ಸಂಸ್ಥೆ ರೋಟರಿ: ಅಲೆನ್ ವಿನಯ್ ಲಿವಿಸ್