ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ಸಿಸಿ ಕ್ಯಾಮೆರಾ

KannadaprabhaNewsNetwork | Published : Dec 29, 2024 1:16 AM

ಸಾರಾಂಶ

ಕಾರವಾರ ನಗರದ ಕೆಲವು ಸ್ಥಳಗಳು ಘನತ್ಯಾಜ್ಯ ಎಸೆಯುವ ಹಾಟ್‌ಸ್ಪಾಟ್‌ಗಳಾಗಿದ್ದು, ಇಂತಹ ಕಡೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಕಸ ಎಸೆಯುವುದನ್ನು ನಿಯಂತ್ರಿಸಲು ಇಲ್ಲಿನ ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಾರವಾರ: ನಗರದ ಕೆಲವು ಸ್ಥಳಗಳು ಘನತ್ಯಾಜ್ಯ ಎಸೆಯುವ ಹಾಟ್‌ಸ್ಪಾಟ್‌ಗಳಾಗಿದ್ದು, ಇಂತಹ ಕಡೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಕಸ ಎಸೆಯುವುದನ್ನು ನಿಯಂತ್ರಿಸಲು ಇಲ್ಲಿನ ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

ಘನತ್ಯಾಜ್ಯ ಎಸೆಯುವುದನ್ನು ನಿಯಂತ್ರಣ ಮಾಡುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸದ ಜತೆಗೆ ತಲೆನೋವಾಗಿ ಪರಿಣಮಿಸಿದೆ. ಕಸ ಸಂಗ್ರಹಣಾ ವಾಹನ ಪ್ರತಿನಿತ್ಯ ಮನೆ ಮನೆಗೆ ತೆರಳುತ್ತಿದ್ದರೂ ವಾಹನಕ್ಕೆ ನೀಡಿದೇ ನಿರ್ಜನ ಪ್ರದೇಶದ ಚರಂಡಿಗಳಲ್ಲಿ, ಖಾಲಿ ಜಾಲದಲ್ಲಿ, ಜನರ ಓಡಾಟ ಕಡಿಮೆ ಇರುವ ಕಡೆಗಳಲ್ಲಿ ಕಸವನ್ನು ಎಸೆಯಲಾಗುತ್ತಿದ್ದು, ಎಷ್ಟು ಬಾರಿ ನಗರಸಭೆಯವರು ಸ್ವಚ್ಛಗೊಳಿಸಿದರೂ ಪುನಃ ಅದೇ ಸ್ಥಳದಲ್ಲಿ ಘನತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅವಕಾಶವಾಗುವಂತೆ ಚರಂಡಿಯನ್ನು ಸ್ವಚ್ಛಗೊಳಿಸಲಾಗುತ್ತದೆ. ಆದರೆ ಈ ರೀತಿ ಸ್ವಚ್ಛತೆ ಮಾಡಿದ ವಾರದಲ್ಲೇ ಪುನಃ ತ್ಯಾಜ್ಯವನ್ನು ಎಸೆದು ಮಳೆಯ ನೀರು ಹರಿದುಹೋಗಲು ಸಾಧ್ಯವಾಗದೇ ಕೃತಕ ನೆರೆ ಸೃಷ್ಟಿಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ೬೬ರ ಫ್ಲೈ ಒವರ್ ಕೆಳಗಿನ ಖಾಲಿ ಪ್ರದೇಶ, ಗುರುಭವನದಿಂದ ಗಿಂಡಿ ದೇವಸ್ಥಾನಕ್ಕೆ ಬರುವ ರಸ್ತೆ, ಮಾರಿಯಾ ನಗರ, ಕಾರವಾರ-ಹಬ್ಬುವಾಡದ ಕೆಲವು ಸ್ಥಳ ಹೀಗೆ ಹಲವೆಡೆ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಅದರಲ್ಲೂ ಮದ್ಯದ ಬಾಟಲಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದೆ. ಈ ಹಿಂದೆ ಕಸ ಎಸೆಯುತ್ತಿರುವ ವ್ಯಕ್ತಿ ಸಿಕ್ಕಿಬಿದ್ದರೆ ₹೫೦೦ ದಂಡ ವಿಧಿಸಲಾಗುತ್ತಿತ್ತು. ಬಳಿಕ ಕಸ ಎಸೆಯುವ ಸ್ಥಳದಲ್ಲಿ ನಾಗರಹಾವು ಇದೆ ಕಸ ಎಸೆಯಬೇಡಿ ಎಂದು ಫಲಕವನ್ನೂ ಅಳವಡಿಸಲಾಗಿತ್ತು. ಜತೆಗೆ ಕಸ ಸಂಗ್ರಹ ವಾಹನಗಳಲ್ಲೂ ಧ್ವನಿ ವರ್ಧಕದ ಮೂಲಕ ರಸ್ತೆಯ ಮೇಲೆ ಕಸ ಎಸೆಯದೇ ವಾಹನಕ್ಕೆ ನೀಡುವಂತೆ ಪ್ರತಿನಿತ್ಯ ಹೇಳಲಾಗುತ್ತದೆ. ಆದರೂ ತ್ಯಾಜ್ಯ ಎಸೆಯುವುದು ನಿಂತಿಲ್ಲ. ರಸ್ತೆಯ ಮೇಲೆ ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ಆಗದೇ ಅಧಿಕಾರಿಗಳೇ ಹೈರಾಣಾಗಿದ್ದಾರೆ.

ಕ್ಯಾಮೆರಾ ಅಳವಡಿಕೆ: ಹೊಸ ವಿಧಾನವನ್ನು ಅನುಸರಿಸಿ ಘನ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ಕಸ ಎಸೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಬಹುತೇಕ ಜನವರಿ ತಿಂಗಳ ಅಂತ್ಯದೊಳಗೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ. ನಗರದಲ್ಲಿ ಘನತ್ಯಾಜ್ಯ ಎಸೆಯುವ ಐದು ಸ್ಥಳಗಳನ್ನು ಗುರುತು ಮಾಡಲಾಗಿದೆ. ತ್ಯಾಜ್ಯ ಎಸೆಯುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಹಾಕಲು ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆ ಮುಗಿಸಿ ಅಳವಡಿಕೆ ಮಾಡಲಾಗುತ್ತದೆ. ಈ ಮೂಲಕ ನಿಯಂತ್ರಣಕ್ಕೆ ಕ್ರಮವಹಿಸುತ್ತಿದ್ದೇವೆ ಎಂದು ಪೌರಾಯುಕ್ತ ಕಾರವಾರ ಸಿಎಂಸಿ ಜಗದೀಶ ಹುಲಗೆಜ್ಜಿ ಹೇಳಿದರು.

Share this article