ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಿಸಿಎಸ್‌ಆರ್ ಸಹಭಾಗಿತ್ವ ಅಗತ್ಯ-ಜಿಲ್ಲಾಧಿಕಾರಿ

KannadaprabhaNewsNetwork |  
Published : Jul 21, 2026, 02:15 AM IST
ಹಾವೇರಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳು, ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಮಾಲೋಚನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳು, ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಯಿತು.

ಹಾವೇರಿ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳು, ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೈಗಾರಿಕೆಗಳು, ಉದ್ಯಮಿಗಳು ಹಾಗೂ ಸಮಾಜದ ಪಾಲುದಾರಿಕೆ ಅತ್ಯಂತ ಅಗತ್ಯವಾಗಿದೆ. ಸರ್ಕಾರದೊಂದಿಗೆ ಖಾಸಗಿ ವಲಯ ಕೈಜೋಡಿಸಿದರೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸರ್ಕಾರವು ರೂಪಿಸಿರುವ ಸಿಸಿಎಸ್‌ಆರ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆಗಳಲ್ಲಿ ಸ್ಮಾರ್ಟ್ ಇಂಟರಾಕ್ಟಿವ್ ತರಗತಿಗಳು, ವಿಜ್ಞಾನ ಹಾಗೂ ಪ್ರಯೋಗಾಲಯಗಳು, ಗ್ರಂಥಾಲಯ, ಡಿಜಿಟಲ್ ಕಲಿಕಾ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ, ಕ್ರೀಡಾ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಾರ್ಪೊರೇಟ್ ಸಂಸ್ಥೆಗಳ ನೆರವಿನಿಂದ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ಹೇಳಿದರು.

ಪ್ರತಿ ಕೈಗಾರಿಕೆ ಅಥವಾ ಕಾರ್ಪೊರೇಟ್ ಸಂಸ್ಥೆ ಕನಿಷ್ಠ ಒಂದು ಅಥವಾ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ರೂಪಿಸುವಂತೆ ಜಿಲ್ಲಾಧಿಕಾರಿಗಳು ಕರೆ ನೀಡಿದರು. ಸಿಸಿಎಸ್‌ಆರ್ ಅಡಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಸಂಸ್ಥೆಗಳ ಹೆಸರನ್ನು ಶಾಲೆಗೆ ನಾಮಕರಣ ಮಾಡುವ ಅವಕಾಶವೂ ಸರ್ಕಾರ ನೀಡಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪರಿಕಲ್ಪನೆಯ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು. ಎಲ್‌ಕೆಜಿ ಯಿಂದ ಪಿಯುಸಿ ವರೆಗೆ ಒಂದೇ ಆವರಣದಲ್ಲಿ ಶಿಕ್ಷಣ, ದ್ವಿಭಾಷಾ ಬೋಧನೆ, ಕೌಶಲ್ಯಾಧಾರಿತ ಶಿಕ್ಷಣ, ಉಚಿತ ಸಾರಿಗೆ, ಸ್ಮಾರ್ಟ್ ಕ್ಲಾಸ್, ವಿಶೇಷ ವಿಷಯ ಶಿಕ್ಷಕರ ನೇಮಕ, ವಿದ್ಯಾರ್ಥಿಗಳ ನಿರಂತರ ಕಲಿಕಾ ಮೌಲ್ಯಮಾಪನ ಹಾಗೂ ವೃತ್ತಿಪರ ಕೌಶಲ್ಯ ತರಬೇತಿ ಸೇರಿದಂತೆ ಹಲವು ನವೀನ ಅಂಶಗಳನ್ನು ಕೆಪಿಎಸ್‌ನಲ್ಲಿ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಸಿಸಿಎಸ್‌ಆರ್ ಯೋಜನೆಯಡಿ ಹೊಸ ಶಾಲೆಗಳ ನಿರ್ಮಾಣ, ಈಗಿರುವ ಶಾಲೆಗಳ ಉನ್ನತೀಕರಣ, ಡಿಜಿಟಲ್ ಮೂಲಸೌಕರ್ಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಹಾಗೂ ಸಾಂಸ್ಕೃತಿಕ ಸೌಲಭ್ಯ, ಅಂಗವಿಕಲ ಸ್ನೇಹಿ ವ್ಯವಸ್ಥೆ, ಪರಿಸರ ಸ್ನೇಹಿ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕಾರ್ಪೊರೇಟ್ ಸಂಸ್ಥೆಗಳು ನೆರವು ನೀಡಬಹುದಾಗಿದೆ ಎಂದು ತಿಳಿಸಲಾಯಿತು.

ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಿಸಿಎಸ್‌ಆರ್ ಸೆಲ್ ಕಾರ್ಯನಿರ್ವಹಿಸಲಿದ್ದು, ಕೈಗಾರಿಕೆಗಳು ಮತ್ತು ಶಾಲೆಗಳ ನಡುವೆ ಸಮನ್ವಯ ಸಾಧಿಸಿ ಅಗತ್ಯ ಒಪ್ಪಂದ ಪ್ರಕ್ರಿಯೆ, ಯೋಜನೆಗಳ ಮೇಲ್ವಿಚಾರಣೆ ಹಾಗೂ ಪಾರದರ್ಶಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಿಎಸ್‌ಆರ್ ಪಾಲುದಾರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲರ ಮಾಸಾಶನಕ್ಕೆ ಕುಟುಂಬದ ಆದಾಯ ಮಿತಿ ರದ್ಧತಿಗೆ ಆಗ್ರಹ
ಎಡದಂಡೆ ಭಾಗದ ಕಾಲುವೆಗೆ ನೀರು, ಅಧಿಕಾರಿಗಳ ಜತೆ ವಾಗ್ವಾದ