ಅಂಗವಿಕಲರ ಮಾಸಾಶನಕ್ಕೆ ಕುಟುಂಬದ ಆದಾಯ ಮಿತಿ ರದ್ಧತಿಗೆ ಆಗ್ರಹ

KannadaprabhaNewsNetwork |  
Published : Jul 21, 2026, 02:00 AM IST
ಹಗರಿಬೊಮ್ಮನಹಳ್ಳಿಯಲ್ಲಿ ಅಂಗವಿಕಲರ ಮಾಸಾಶನಕ್ಕೆ ಸರ್ಕಾರ ನಿಗದಿಪಡಿಸಿರುವ ಅವೈಜ್ಞಾನಿಕ ಕುಟುಂಬದ ಆದಾಯ ಮಿತಿ ರದ್ಧತಿಗೆ ಒತ್ತಾಯಿಸಿ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೋಮವಾರ ಅಂಗವಿಕಲರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟಿಸಿದರು. | Kannada Prabha

ಸಾರಾಂಶ

ಅವೈಜ್ಞಾನಿಕ ಮಾನದಂಡದಿಂದಾಗಿ ರಾಜ್ಯದ ಸಾವಿರಾರು ಅಂಗವಿಕಲರು ಮಾಸಾಶನದಿಂದ ವಂಚಿತರಾಗುತ್ತಿದ್ದಾರೆ ಎಂದು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್ ಆಕ್ರೋಶ ವ್ಯಕ್ತಪಡಿಸಿದರು.

ಹಗರಿಬೊಮ್ಮನಹಳ್ಳಿ: ಅಂಗವಿಕಲರಿಗೆ ಮಾಸಾಶನ ನೀಡುವಲ್ಲಿ ಸರ್ಕಾರ ನಿಗದಿಪಡಿಸಿರುವ ಕುಟುಂಬದ ವಾರ್ಷಿಕ ಆದಾಯ ಮಿತಿ ಅವಾಸ್ತವಿಕ ಹಾಗೂ ದೋಷಪೂರ್ಣವಾಗಿದೆ. ಈ ಅವೈಜ್ಞಾನಿಕ ಮಾನದಂಡದಿಂದಾಗಿ ರಾಜ್ಯದ ಸಾವಿರಾರು ಅಂಗವಿಕಲರು ಮಾಸಾಶನದಿಂದ ವಂಚಿತರಾಗುತ್ತಿದ್ದಾರೆ ಎಂದು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್ ಆಕ್ರೋಶ ವ್ಯಕ್ತಪಡಿಸಿದರು.

ಅವೈಜ್ಞಾನಿಕ ಮಾನದಂಡದ ರದ್ಧತಿಗೆ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಒಕ್ಕೂಟದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಅಂಗವಿಕಲರ ಮಾಸಾಶನಕ್ಕೆ ಕುಟುಂಬದ ಆದಾಯ ಮಿತಿಯನ್ನು ₹32,000 ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಕಿಡಿ ಕಾರಿದರು.

ಒಕ್ಕೂಟದ ತಾಲೂಕು ಅಧ್ಯಕ್ಷೆ ಬಿ. ರೇಣುಕಾ ಮಾತನಾಡಿ, ನೆರೆ ರಾಜ್ಯಗಳಲ್ಲಿ ಅಂಗವಿಕಲರ ಮಾಸಾಶನಕ್ಕೆ ಆದಾಯದ ಮಿತಿ ₹1.20 ಲಕ್ಷದಿಂದ ₹3 ಲಕ್ಷ ನಿಗದಿಪಡಿಸಲಾಗಿದೆ. ಆದರೆ, ಕರ್ನಾಟಕದ ಆದಾಯದ ಮಾನದಂಡವಾದ ₹32,000 ಹಾಸ್ಯಾಸ್ಪದವಾಗಿದೆ. ಜೊತೆಗೆ ಕಡಿಮೆ ಹಾಗೂ ಅತ್ಯಂತ ಕನಿಷ್ಟ ಆದಾಯದ ಮಿತಿಯ ಮೂಲಕ ವಿಶ್ವಸಂಸ್ಥೆಯ ಅಂಗವಿಕಲರ ಹಕ್ಕುಗಳ ಒಡಂಬಡಿಕೆ ಹಾಗೂ ವಿಕಲಚೇತನರ ಹಕ್ಕುಗಳ ಕಾಯ್ದೆಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಅವೈಜ್ಞಾನಿಕ ವಾರ್ಷಿಕ ಮಾನದಂಡವನ್ನು ಕೂಡಲೇ ರದ್ದುಗೊಳಿಸಿ ಕನಿಷ್ಟ ಬಿಪಿಎಲ್ ರೇಷನ್ ಕಾರ್ಡಿಗೆ ಅನ್ವಯಿಸುವ ₹1.20ಲಕ್ಷ ಆದಾಯದ ಮಿತಿಯನ್ನು ಅಂಗವಿಕಲರ ಮಾಸಾಶನಕ್ಕೂ ಅನ್ವಯಿಸಬೇಕು. ಕಳೆದ 5 ತಿಂಗಳಿಂದ ಸಂದಾಯವಾಗಬೇಕಿರುವ ಮಾಸಾಶನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಸಮಾವೇಶದ ಕೊನೆಗೆ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವಂತೆ ಉಪ ತಹಸೀಲ್ದಾರ್ ಶಿವಕುಮಾರಗೌಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಉಪಾಧ್ಯಕ್ಷ ಕೂಡ್ಲಿಗಿ ಹುಲುಗಪ್ಪ, ತಾಲೂಕು ಮುಖಂಡರಾದ ಡಿ.ಬಸವರಾಜ್, ಎನ್.ನಾಗರತ್ನಾ, ಉಲುವತ್ತಿ ಕಲೀಲ್ ಬಾಷಾ, ಸೋಗಿ ಬಸವರಾಜ, ಉಸ್ಮಾನ್ ಭಾಷಾ, ಮರಬ್ಬಿಹಾಳು ಮಂಜುನಾಥ್, ಮರಳುಸಿದ್ದಪ್ಪ, ಏಣಗಿ ರುದ್ರಪ್ಪ, ಬೆಣಕಲ್ಲು ಅಂಜಿನಪ್ಪ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳ ಅಂಗವಿಕಲರು ಮತ್ತು ಪಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಡದಂಡೆ ಭಾಗದ ಕಾಲುವೆಗೆ ನೀರು, ಅಧಿಕಾರಿಗಳ ಜತೆ ವಾಗ್ವಾದ
ಕಾರಟಗಿಯಲ್ಲಿ ಇಂದಿನಿಂದ ಶಾಶ್ವತ ನ್ಯಾಯಾಲಯ