ಕಂಪ್ಲಿಯಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು

KannadaprabhaNewsNetwork |  
Published : Jun 22, 2025, 11:47 PM IST
ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಸಿಸಿ ಕ್ಯಾಮರಾಗಳ ಕಾರ್ಯ ವೈಖರಿ ಪರಿಶೀಲಿಸಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭರಾಣಿ. | Kannada Prabha

ಸಾರಾಂಶ

ಪಟ್ಟಣದ ವಿವಿಧೆಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಅಪರಾಧ ಪತ್ತೆ, ಅಪರಾಧ ತಡೆಗಟ್ಟುವಿಕೆ ಸೇರಿ ಸಾರ್ವಜನಿಕರ ಸುರಕ್ಷತೆ ಕಾಪಾಡುವಲ್ಲಿ ಪೊಲೀಸರಿಗೆ ಆನೆಬಲ ಬಂದಂತಾಗಿದೆ.

₹17 ಲಕ್ಷ ವೆಚ್ಚದಲ್ಲಿ ಪಟ್ಟಣದ ವಿವಿಧೆಡೆ ಕ್ಯಾಮೆರಾ ಅಳವಡಿಕೆ, ಪೊಲೀಸ್‌ ಠಾಣೆಯಲ್ಲಿ ನಿರ್ವಹಣೆಬಿ.ಎಚ್.ಎಂ. ಅಮರನಾಥ ಶಾಸ್ತ್ರಿ

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ವಿವಿಧೆಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಅಪರಾಧ ಪತ್ತೆ, ಅಪರಾಧ ತಡೆಗಟ್ಟುವಿಕೆ ಸೇರಿ ಸಾರ್ವಜನಿಕರ ಸುರಕ್ಷತೆ ಕಾಪಾಡುವಲ್ಲಿ ಪೊಲೀಸರಿಗೆ ಆನೆಬಲ ಬಂದಂತಾಗಿದೆ.

ಪುರಸಭೆಯ ₹14 ಲಕ್ಷ ಅನುದಾನ ಹಾಗೂ ಸಾರ್ವಜನಿಕರಿಂದ ಸಂಗ್ರಹವಾಗಿದ್ದ ₹3 ಲಕ್ಷ ಸೇರಿ ₹17 ಲಕ್ಷ ವೆಚ್ಚದಲ್ಲಿ ಪಟ್ಟಣದ ವಿವಿಧೆಡೆ 8 ಎಂಪಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ನಡೆದಿದೆ.

ಎಲ್ಲೆಲ್ಲಿ ಕ್ಯಾಮೆರಾ ಅಳವಡಿಕೆ?:

ಪಟ್ಟಣದ ನಡುಲ ಮಸೀದಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಹೊಸ ಬಸ್ ನಿಲ್ದಾಣ, ವಾಲ್ಮೀಕಿ ವೃತ್ತ, ಬಳ್ಳಾರಿ ರಸ್ತೆ, ಕುರುಗೋಡು ರಸ್ತೆ, ಕಂಪ್ಲಿ ಕೋಟೆಯ ತುಂಗಭದ್ರಾ ಸೇತುವೆ ಬಳಿ, ಮಾರೆಮ್ಮ ದೇವಸ್ಥಾನದ ಬಳಿ ಸಣಾಪುರ ರಸ್ತೆ, ಹೌಸಿಂಗ್ ಬೋರ್ಡ್ ತಿರುವಿನ ಬಳಿ, ಮೆಡ್ ಪ್ಲಸ್ ಬಳಿ, ಗಾಂಧಿ ವೃತ್ತದ ಬಳಿ ಸೇರಿ ಈಗಾಗಲೇ 13 ಸ್ಥಳಗಳಲ್ಲಿ 21 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು 13 ಕಡೆಗಳಲ್ಲಿ ಕ್ಯಾಮೆರಾಗಳ ಅಳವಡಿಕೆಯ ಕಾರ್ಯಗಳು ಜರುಗಬೇಕಿದೆ. ಒಟ್ಟಾರೆ ಸೇರಿ ಪಟ್ಟಣದಲ್ಲಿ 38ಕ್ಕೂ ಅಧಿಕ ಕ್ಯಾಮೆರಾಗಳು ಅಳವಡಿಕೆಯಾಗಿ ಭದ್ರತೆಯಲ್ಲಿ ಪೊಲೀಸರಿಗೆ ಸಾಥ್‌ ನೀಡಲಿವೆ.

ಅಪರಾಧ ತಡೆಗೆ ಅನುಕೂಲ:

ಸಿಸಿ ಕ್ಯಾಮೆರಾಗಳು ಕಣ್ಗಾವಲು ಮತ್ತು ಸುರಕ್ಷತೆಗಾಗಿ ಬಳಸುವ ವೀಡಿಯೊ ಕ್ಯಾಮೆರಾಗಳಾಗಿವೆ. ಇವುಗಳನ್ನು ಮುಖ್ಯವಾಗಿ ಅಪರಾಧಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು ಮತ್ತು ಸಾರ್ವಜನಿಕ ಸುರಕ್ಷತೆ ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ. ಸಿಸಿ ಕ್ಯಾಮೆರಾಗಳು ಪೊಲೀಸರ ಮೂರನೇ ಕಣ್ಣು ಎಂದೇ ಕರೆಯಲಾಗುತ್ತಿದ್ದು, ಅಪರಾಧಗಳನ್ನು ತಡೆಗಟ್ಟಲು ಅನುಕೂಲವಾಗಿವೆ. ಈ ಹಿಂದೆ ಸಿಸಿ ಕ್ಯಾಮೆರಾಗಳಿಲ್ಲದೆ ಪಟ್ಟಣದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಮನೆಗಳ್ಳತನ, ಬೈಕ್ ಕಳ್ಳತನ, ಕೊಲೆ, ಗುಂಪು ಗಲಭೆಗಳಂತಹ ಅಪರಾಧಗಳನ್ನು ತಡೆದು ಅಪರಾಧಿಗಳನ್ನು ಸೆರೆ ಹಿಡಿಯಲು ಪೊಲೀಸರಿಗೆ ಬಹು ದೊಡ್ಡ ಸಮಸ್ಯೆಯಾಗಿತ್ತು. ಅಲ್ಲದೇ ಅಪರಾಧಿಗಳ ಸುಳಿವು ಕಲೆ ಹಾಕುವುದು ಪೊಲೀಸರಿಗೆ ಕಬ್ಬಿಣದ ಕಡಲೆಯಷ್ಟೇ ಕ್ಲಿಷ್ಟವಾಗಿತ್ತು. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಪೊಲೀಸರಿಗೆ ಅಪರಾಧ ಪತ್ತೆ ಕಾರ್ಯ ಸುಲಭವಾಗಲಿದೆ.

ಪಟ್ಟಣದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ 38 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ನಿರ್ವಹಣೆ ಪೊಲೀಸ್ ಠಾಣೆಯಲ್ಲಿ ಜರುಗಲಿದೆ. 8 ಎಂಪಿ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಸುಗಮ ಸಂಚಾರಿ ವ್ಯವಸ್ಥೆ ಮೇಲೆ ಕಣ್ಣಿಡಲು ಈ ಕ್ಯಾಮೆರಾಗಳು ಸಹಕಾರಕ್ಕೆ ಬರಲಿವೆ. ಅದರಲ್ಲೂ, ಬೈಕ್ ಕಳ್ಳತನ, ಮನೆಗಳ್ಳತನ, ಕೊಲೆ, ಗುಂಪುಗಲಭೆಗಳನ್ನು ತಡೆ ಹಿಡಿಯುವ ಮೂಲಕ ಅಪರಾಧಿಗಳನ್ನು ಸುಲಭವಾಗಿ ಸೆರೆ ಹಿಡಿದು ಅಪರಾಧಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡಲು ಅನುಕೂಲವಾಗಿದೆ ಎಂದು ಕಂಪ್ಲಿ ಪೊಲೀಸ್ ಠಾಣೆ ಪಿಐ ಕೆ.ಬಿ. ವಾಸುಕುಮಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ