ಕನ್ನಡಪ್ರಭವಾರ್ತೆ ಕುಶಾಲನಗರ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ. ದಿನೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಕುಶಾಲನಗರ ಗುಮ್ಮನಕೊಲ್ಲಿ ಬಸವೇಶ್ವರ ಬಡಾವಣೆ, ಬಯಲು ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಕುಶಾಲನಗರದ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ಉದ್ಘಾಟನೆ ಮತ್ತು ಕ್ಯಾಮರಾ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮತ್ತು ಪುರಸಭೆಗೆ ಹಸ್ತಾಂತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ಅಪರಾಧಗಳನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಮಹತ್ತರ ಪಾತ್ರ ವಹಿಸುತ್ತಿದೆ ಎಂದ ಅವರು, ಪ್ರತಿಯೊಬ್ಬರು ತಮ್ಮ ಮನೆ ವ್ಯಾಪಾರ ವಹಿವಾಟು ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಆ ಮೂಲಕ ಅಪರಾಧ ತಡೆ ಸಾಧ್ಯ ಎಂದರು. ಸಮಿತಿ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಿ ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣದ ಗುರಿಯೊಂದಿಗೆ ಸಮಾಜಮುಖಿ ಸೇವೆ ಸಲ್ಲಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಪಿ ಮಾತನಾಡಿ ಪೊಲೀಸ್ ಇಲಾಖೆಯೊಂದಿಗೆ ನಾಗರಿಕರ ಸಹಭಾಗಿತ್ವವಿದ್ದಲ್ಲಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಂದಾಜು 20 ಲಕ್ಷ ರು. ಅಧಿಕ ವೆಚ್ಚದಲ್ಲಿ ಹಾರಂಗಿ ರಸ್ತೆ, ಗುಡ್ಡೆ ಹೊಸೂರು ಹೆದ್ದಾರಿ ಜಂಕ್ಷನ್, ಕೈಗಾರಿಕಾ ಬಡಾವಣೆ, ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ಅಧ್ಯಕ್ಷ ಸುದೀಪ್ ಕುಮಾರ್ ಮಾಹಿತಿ ನೀಡಿದರು. ಹಾರಂಗಿ ರಸ್ತೆಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಪ್ರಕರಣಗಳನ್ನು ಸಿಸಿ ಕ್ಯಾಮರಾಗಳ ಮೂಲಕ ಪತ್ತೆಹಚ್ಚಲಾಗಿದೆ. ಅಲ್ಲಿ ಈಗ ಸ್ವಚ್ಛ ವಾತಾವರಣ ಇದೆ ಎಂದರು. ಹೆದ್ದಾರಿಯಲ್ಲಿ ಸಾಗುವ ಪ್ರತಿ ವಾಹನಗಳ ನೊಂದಣಿ ಸಂಖ್ಯೆ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗುತ್ತಿದ್ದು, ಅಪರಾಧ ಪತ್ತೆ ಕಾರ್ಯ ಸುಸೂತ್ರವಾಗಿದೆ ಎಂದರು.
ಪುರಸಭೆಯ ಕಂದಾಯ ಅಧಿಕಾರಿ ರಾಮು, ಎಸ್ ಎಲ್ ಎನ್ ಕಾಫಿ ಸಂಸ್ಥೆಯ ಮಾಲೀಕರಾದ ಎನ್ ಸಾತಪ್ಪನ್, ಕಾಫಿ ಉದ್ಯಮಿ ಈಶ್ವರನ್ ಜವಾಹರ್ ಮತ್ತಿತರರು ಇದ್ದರು.ಕುಶಾಲನಗರ ಸುತ್ತಮುತ್ತ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ವ್ಯವಸ್ಥೆ ಕಲ್ಪಿಸಲು ಕೈ ಜೋಡಿಸಿದ ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿರುವ 25 ಕ್ಕೂ ಅಧಿಕ ಉದ್ಯಮಿಗಳಿಗೆ ಮತ್ತು ಈ ಸಂದರ್ಭ ಸಹಕರಿಸಿದ ಸಿ ಸಿ ಕ್ಯಾಮೆರಾ ತಂತ್ರಜ್ಞ ರಜನಿಕಾಂತ್ ಮತ್ತು ಸ್ಥಳೀಯರಿಗೆ ಸಮಿತಿ ಪರವಾಗಿ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ನಿರ್ದೇಶಕರು ಮತ್ತು ಬಡಾವಣೆಯ ನಿವಾಸಿಗಳು ಇದ್ದರು.