ಅಭಿವೃದ್ಧಿ ಕಾರ್ಯ । ಕಚೇರಿ ಸಿಬ್ಬಂದಿಯೇ ಖರ್ಚು ಮಾಡಿ ಕಟ್ಟಡ ನವೀಕರಣ । ಶಿಶು ಅಭಿವೃದ್ಧಿ ಅಧಿಕಾರಿ ಚರಣ್ ರಾಜ್ ಕಾಳಜಿಗೆ ಶ್ಲಾಘನೆ
ಸಮರ್ಪಕ ನಿರ್ವಹಣೆ ಇಲ್ಲದೆ ಹತ್ತಾರು ವರ್ಷಗಳಿಂದ ನಿರುಪಯುಕ್ತವಾಗಿದ್ದ ತರೀಕೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಕಾಳಜಿಯಿಂದ ಜೀವಕಳೆಯೇ ಬಂದಿದೆ.
ವಿಶೇಷವೆಂದರೆ ಈ ಸ್ತ್ರೀಶಕ್ತಿ ಭವನವನ್ನು ನವೀಕರಣಗೊಂಳಿಸಿರುವುದು ಸ್ವಂತ ಹಣ ಹಾಗೂ ದಾನಿಗಳ ನೆರವಿನಿಂದ ಹಾಗಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಚೇರಿ ಸಿಬ್ಬಂದಿ ಸಹ ಈ ಕಾರ್ಯಕ್ಕೆ ಆರ್ಥಿಕ ನೆರವು ನೀಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.ಸುಮಾರು 13 ವರ್ಷಗಳ ಹಿಂದೆ ಪಟ್ಟಣದಲ್ಲಿ ನಿರ್ಮಾಣವಾದ ಈ ಕಟ್ಟಡ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ, ಹೇರಳವಾಗಿ ಗಿಡಗಳು ಬೆಳೆದು ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿತ್ತು. ಒಂದು ಕಟ್ಟಡ ವ್ಯರ್ಥವಾಗುತ್ತಿರುವುದನ್ನು ಗಮನಿಸಿದ ಸಿಡಿಪಿಒ ಚರಣ್ ರಾಜ್, ಕಚೇರಿ ಸಿಬ್ಬಂದಿ ಸಹಯೋಗದಲ್ಲಿ ಕಟ್ಟಡದ ಸ್ವಚ್ಛತೆ ಮತ್ತು ಸುತ್ತಮುತ್ತ ಬೆಳೆದಿದ್ದ ಗಿಡಗಳನ್ನೆಲ್ಲಾ ಪುರಸಭೆ ಸಹಾಯದಿಂದ ತೆರವುಗೊಳಿಸಿ ಇಡೀ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿ ಬಳಸಲು ಯೋಗ್ಯವಾಗಿಸಲಾಗಿದೆ.
2013ರಲ್ಲಿ ಪಟ್ಟಣದಿಂದ ತುಸು ದೂರವೇ ನಿರ್ಮಾಣಗೊಂಡಿದ್ದ ಈ ಕಟ್ಟಡದಲ್ಲಿ ನೀರು, ಶೌಚಾಲಯ ವ್ಯವಸ್ಥೆಗಳು ಅಪೂರ್ಣಗೊಂಡಿದ್ದ ಕಾರಣಕ್ಕೆ ಕಟ್ಟಡವನ್ನು ಇದುವರೆಗೂ ಪಡಿತರ ಅಕ್ಕಿ ಸಂಗ್ರಹಣೆಗೆ ಮಾತ್ರ ಬಳಸಲಾಗುತ್ತಿತ್ತು. ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಗೌರವಧನ, ತರಬೇತಿ ಇತ್ಯಾದಿ ಕಾರ್ಯಕ್ರಮ ದಿನಾಚರಣೆಗಳನ್ನು ಆಚರಿಸಲು ಸ್ಥಳಾವಕಾಶದ ತೊಂದರೆ ಗಮನಿಸಿದ ಸಿಡಿಪಿಒ ಎನ್.ಚರಣ್ ರಾಜ್ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಈ ಕಟ್ಟಡಕ್ಕೆ ಕಾಯಕಲ್ಪ ನೀಡಲು ನಿರ್ಧರಿಸಿ ಅದನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಎಂದು ತರೀಕೆರೆ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ರಮಾಮಣಿ ಹೇಳಿದ್ದಾರೆ.
ಸ್ತ್ರೀಶಕ್ತಿ ಸಂಘದ ಮಹಿಳೆಯರು ಸ್ವಾವಲಂಬಿಗಳಾಗಿ ತಾವು ಉತ್ಪಾದಿಸಿದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಒದಗಿಸುವ ಮಹತ್ವಾಂಕ್ಷೆಯಿಂದ ಈ ಕಟ್ಟಡ ನಿರ್ಮಿಸಲಾಗಿತ್ತು ಎಂದು ಹೇಳಿದರು.
ರಮಾಮಣಿ, ಅಧ್ಯಕ್ಷೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ತರೀಕೆರೆ.
ಎನ್.ಚರಣ್ ರಾಜ್, ಸಿಡಿಪಿಒ, ಶಿಶು ಅಭಿವೃದ್ಧಿ ಇಲಾಖೆ, ತರೀಕೆರೆ.