ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬಕ್ರೀದ್ ಹಬ್ಬವನ್ನು ಈದ್ - ಉಲ್ - ಅಜಹಾ ಅಥವಾ ತ್ಯಾಗದ ಈದ್ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಜಗತ್ತಿನ ಎಲ್ಲೆಡೆ ಅತ್ಯಂತ ಗೌರವ ಮತ್ತು ಸಹೋದರತ್ವದಿಂದ ಆಚರಿಸಲಾಗುತ್ತದೆ. ಈ ಈದ್ ಅನ್ನು ಪ್ರತಿ ವರ್ಷ ಇಸ್ಲಾಂನ ಹಜ್ ಯಾತ್ರೆಯ ಅಂತ್ಯದಲ್ಲಿ ಆಚರಿಸಲಾಗುತ್ತದೆ. ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಮತ್ತು ಅಲ್ಲಾಹು ನ ಮೇಲಿನ ಭಕ್ತಿಯಿಂದಾಗಿ ಹಾಗು ಅವರ ತ್ಯಾಗದ ಪ್ರತೀಕವಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ದೊಡ್ಡಬಳ್ಳಾಪುರದ ವಿವಿಧ ಈದ್ಗಾಗಳಲ್ಲಿ ಮತ್ತು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶ್ವೇತವಸ್ತ್ರ ಧರಿಸಿ, ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.ಇಲ್ಲಿನ ಶಾಂತಿನಗರದ ಈದ್ಗಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಭಾಗಿಯಾದರು. ಬಕ್ರೀದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದರು. ತೂಬಗೆರೆ, ದೊಡ್ಡಬೆಳವಂಗಲ, ಕನಸವಾಡಿ, ಸಾಸಲು ಹೋಬಳಿಗಳ ವಿವಿಧ ಗ್ರಾಮಗಳಲ್ಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಸಂದೇಶ ನೀಡಿದ ಧರ್ಮಗುರುಗಳು ಮಾತನಾಡಿ, ಈ ಹಬ್ಬವು ತ್ಯಾಗ, ನಂಬಿಕೆ ಮತ್ತು ಅನೇಕ ಉದಾತ್ತ ಆದರ್ಶಗಳನ್ನು ಹೊಂದಿದ್ದು , ಈ ಶುಭ ಸಂದರ್ಭದಲ್ಲಿ, ನಾವೆಲ್ಲರೂ ಸಮಾಜ ಮತ್ತು ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಒಟ್ಟಾಗಿ ಕೆಲಸ ಮಾಡೋಣ. ಈದ್-ಉಲ್-ಜುಹಾ ತ್ಯಾಗದ ಶಕ್ತಿ ಮತ್ತು ಔದಾರ್ಯವನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದರು.