ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

KannadaprabhaNewsNetwork |  
Published : Aug 24, 2025, 02:00 AM IST
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು  | Kannada Prabha

ಸಾರಾಂಶ

ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು.

ಕಾರವಾರ: ಜಿಲ್ಲೆಯಲ್ಲಿ ಆ.27ರಂದು ಆಚರಿಸುವ ಗಣೇಶ ಚತುರ್ಥಿ ಮತ್ತು ಸೆ.5ರ ಈದ್ ಮಿಲಾದ್ ನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲ ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಒಪಿ ಮತ್ತು ರಾಸಾಯನಿಕ ಬಣ್ಣ ಬಳಸಿರುವ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ನೋಡಿಕೊಳ್ಳಬೇಕು. ಪೆಂಡಾಲ್ ನಿರ್ಮಾಣ ಮತ್ತು ಅಲಂಕಾರದಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದರು.

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮತ್ತು ಪ್ರತಿಷ್ಠಾಪನೆ ಪ್ರದೇಶದಲ್ಲಿ ವಿದ್ಯುತ್ ಲೈನ್‌ಗಳ ಸಂಪರ್ಕದಿಂದ ಯಾವುದೇ ಅನಾಹುತಗಳಾಗದಂತೆ ಹೆಸ್ಕಾಂ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸುವ ಆಹಾರ ಪದಾರ್ಥಗಳ ಬಗ್ಗೆ ಆಯೋಜಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಗಣೇಶ ಮೂರ್ತಿ ನಗರದ ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು. ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪತ್ತಿಯಾಗದಂತೆ ಸ್ಥಳೀಯಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಎಲ್ಲ ಅಗತ್ಯ ಅನುಮತಿ ಪಡೆಯುವಂತೆ ತಿಳಿಸಿದರು.

ನಿಗದಿಗಿಂತ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಸುಪ್ರೀಂಕೋರ್ಟ್ ಸೂಚನೆಯಂತೆ ಡಿಜೆಗಳ ಬಳಕೆ ಮಾಡುವಂತಿಲ್ಲ ಆಸ್ಪತ್ರೆ, ಶಾಲೆ, ನ್ಯಾಯಾಲಯ ಇರುವ ಪ್ರದೇಶದಲ್ಲಿ ಧ್ವನಿವರ್ಧಕ ಬಳಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆ ಸಂದರ್ಭದಲ್ಲಿ ಮದ್ಯದಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ 9483511015 ಮತ್ತು ಪೊಲೀಸ್ ಸಹಾಯವಾಣಿ 112 ನ್ನು 24*7 ಸಂಪರ್ಕಿಸಬಹುದು ಎಂದರು.

ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು. ಬೆಂಕಿ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಪೆಂಡಾಲ್‌ಗಳ ಬಳಿ ಸ್ವಯಂ ಸೇವಕರನ್ನು ನಿಯೋಜಿಸಬೇಕು, ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಯಾವುದೇ ಹಂತದಲ್ಲೂ ಕಾನೂನು ಉಲ್ಲಂಘನೆ ಮತ್ತು ಶಾಂತಿ ಸುವ್ಯವಸ್ಥೆಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಗಣೇಶ ಹಬ್ಬಮತ್ತು ಈದ್ ಮಿಲಾದ್ ಅಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದರು.

ಸಭೆಯಲ್ಲಿ ಡಿಜೆಗಳ ಬಳಕೆಯ ಪರ ಮತ್ತು ವಿರೋಧದ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು.

ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೋಬೇಷನರಿ ಐಎಎಸ್ ಅಧಿಕಾರಿ ಜೂಫಿಶಾನ್ ಹಕ್, ಎಎಸ್ಪಿಗಳಾದ ಕೃಷ್ಣಮೂರ್ತಿ, ದೇವರಾಜ್, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ