ಕೊಪ್ಪಳ:
ಕೊಪ್ಪಳ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಬಿಎಸ್‌ಪಿಎಲ್ ಕಾರ್ಖಾನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ ಎಂದು ಹೇಳುವ ಮೂಲಕ ಕಾರ್ಖಾನೆ ಸ್ಥಾಪನೆ ಅನಿವಾರ್ಯ ಎಂಬ ಅರ್ಥದಲ್ಲಿ ಸದನದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ನೀಡಿರುವ ಹೇಳಿಕೆ ಖಂಡಿಸಿ ನಗರದಲ್ಲಿ ಶನಿವಾರ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನೆತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಕಾರ್ಖಾನೆ ಸ್ಥಾಪನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರ ಬಿಎಸ್‌ಪಿಎಸ್ ಕಾರ್ಖಾನೆ ಕುರಿತು ಸ್ಪಷ್ಟ ನಿಲುವು ಹೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಸಚಿವರ ಪೋಸ್ಟರ್ ಸುಟ್ಟು ಹಾಕಿದರು.
ಅಧಿವೇಶನದಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ, ಬಸಾಪುರ ಕೆರೆಯನ್ನು ಎಂಎಸ್‌ಪಿಎಲ್ ಕಾರ್ಖಾನೆ ಅತಿಕ್ರಮಿಸಿದ್ದು ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಈ ಕುರಿತು ಸರ್ಕಾರದ ನಿಲುವೇನು? ಕಾರ್ಖಾನೆ ವಿಸ್ತರಣೆ ಕುರಿತು ಮುಖ್ಯಮಂತ್ರಿ ತಡೆಯಾಜ್ಞೆ ಯಾಕೆ ಜಾರಿಗೆ ಬಂದಿಲ್ಲ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಚಿವರು ಸಮರ್ಪಕವಾದ ಉತ್ತರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ಡಿ.ಎಂ. ಬಡಿಗೇರ, ಮುದುಕಪ್ಪ ಹೊಸಮನಿ, ಎಸ್.ಎ. ಗಫಾರ್, ಶಿವಪ್ಪ ಹಡಪದ, ರವಿ ಕಾಂತನವರ, ಮಂಗಳೇಶ ರಾಠೋಡ, ಹನುಮಂತಪ್ಪ ಗೊಂದಿ, ಶಾಂತಪ್ಪ ಅಂಗಡಿ, ಎಂ.ಡಿ. ಪಾಟೀಲ, ಶಂಭುಲಿಂಗಪ್ಪ ಹರಗೇರಿ, ಹನುಮಪ್ಪ ಕಟಗಿ, ಬಂದೇನವಾಜ ಮನಿಯಾರ, ಸುಂಕಪ್ಪ ಮೀಸಿ, ಯಮನೂರಪ್ಪ, ಸುಂಕಮ್ಮ ಇದ್ದರು.