ಬೀದಿನಾಯಿಗಳಿಗೆ ಮಹಾನಗರದಲ್ಲಿ ಬಿರಿಯಾನಿ, ಕಬಾಬ್‌!

KannadaprabhaNewsNetwork |  
Published : Aug 24, 2025, 02:00 AM IST
ಮದಮದಮ | Kannada Prabha

ಸಾರಾಂಶ

ಮಹಾನಗರದಲ್ಲಿ 30-35 ಸಾವಿರ ಬೀದಿನಾಯಿಗಳಿವೆ. ಅದರಂತೆ ಮಹಾನಗರದಲ್ಲಿ ನೂರಾರು ಮಾಂಸಾಹಾರಿ ಹೋಟೆಲ್‌, ಮಟನ್‌ ಶಾಪ್‌, ಚಿಕನ್‌ ಸೆಂಟರ್‌ಗಳಿವೆ. ಬೀದಿ ಬದಿಗಳಲ್ಲಿ ಎಗ್‌ ರೈಸ್‌, ಮಟನ್‌ ಕಬಾಬ್‌, ಚಿಕನ್‌ ಕಬಾಬ್‌ ಅಂಗಡಿಗಳಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬೀದಿನಾಯಿಗಳಿಗೆ ಪ್ರತಿನಿತ್ಯ ಭರ್ಜರಿ ಚಿಕನ್‌ ಕಬಾಬ್‌, ಬಿರಿಯಾನಿ!

ಇದೇನಿದು? ಬೀದಿನಾಯಿಗಳಿಗೆ ಸ್ಥಳೀಯ ಸಂಸ್ಥೆ ಮಾಂಸಾಹಾರ ನೀಡುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿತೇ? ಇಲ್ಲ, ಹಾಗೇನೂ ಇಲ್ಲ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯೇನೂ ಮಾಂಸಾಹಾರ ನೀಡುತ್ತಿಲ್ಲ. ಆದರೆ, ತನ್ನ ನಿರ್ಲಕ್ಷ್ಯದಿಂದಾಗಿ ಬೀದಿನಾಯಿಗಳು ಮಾಂಸಾಹಾರ ಸೇವಿಸುವಂತಾಗಿದೆ.

ಪಾಲಿಕೆಯೇ ತಿಳಿಸುವಂತೆ ಮಹಾನಗರದಲ್ಲಿ 30-35 ಸಾವಿರ ಬೀದಿನಾಯಿಗಳಿವೆ. ಅದರಂತೆ ಮಹಾನಗರದಲ್ಲಿ ನೂರಾರು ಮಾಂಸಾಹಾರಿ ಹೋಟೆಲ್‌, ಮಟನ್‌ ಶಾಪ್‌, ಚಿಕನ್‌ ಸೆಂಟರ್‌ಗಳಿವೆ. ಬೀದಿ ಬದಿಗಳಲ್ಲಿ ಎಗ್‌ ರೈಸ್‌, ಮಟನ್‌ ಕಬಾಬ್‌, ಚಿಕನ್‌ ಕಬಾಬ್‌ ಅಂಗಡಿಗಳಿವೆ. ಪ್ರತಿನಿತ್ಯ ಇವುಗಳಲ್ಲಿ ಸಾಕಷ್ಟು ಆಹಾರ ಉಳಿಯುತ್ತದೆ. ನೂರಾರು ಕ್ವಿಂಟಲ್‌ ತ್ಯಾಜ್ಯವೂ ಸಂಗ್ರಹವಾಗುತ್ತದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದಿಲ್ಲ. ಬದಲಿಗೆ ರಸ್ತೆ ಅಕ್ಕ ಪಕ್ಕಗಳಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ.

ಹೀಗೆ ಎಸೆದ ಆಹಾರದ ಸುತ್ತಲೂ ಬೀದಿನಾಯಿಗಳ ದಂಡು ರಾಜಾರೋಷವಾಗಿ ನೆರೆಯುತ್ತದೆ. ಸೇವಿಸುವಾಗ ಪರಸ್ಪರ ಕಚ್ಚಾಡುತ್ತವೆ. ಯಾರಾದರೂ ಓಡಿಸಲು ಮುಂದಾದರೆ ಅವರ ಮೇಲೆ ದಾಳಿ ನಡೆಸುತ್ತವೆ. ಪ್ರತಿನಿತ್ಯ ಮಾಂಸ ಸೇವಿಸಿ ರೂಢಿಯಾಗಿರುವ ನಾಯಿಗಳು ಮಕ್ಕಳು, ವೃದ್ಧರು ಒಂಟಿಯಾಗಿ ಸಿಕ್ಕರೆ ಅವರ ಮೇಲೆಯೇ ದಾಳಿ ಮಾಡುತ್ತವೆ.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?: ಬೀದಿನಾಯಿಗಳನ್ನು ಶೆಡ್‌ನಲ್ಲಿ ಹಾಕಿ ಎಂದು ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಇದೀಗ ಮತ್ತೆ ತನ್ನ ಆದೇಶವನ್ನು ಬದಲಿಸಿ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ರೇಬಿಸ್‌ ಬಾರದಂತೆ ವ್ಯಾಕ್ಸಿನೇಷನ್‌ ಮಾಡಬೇಕು. ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಎಸೆಯಬಾರದು, ಒಂದು ವೇಳೆ ಎಸೆದರೆ ಅಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಖಡಕ್‌ ಆಗಿ ವಾರ್ನಿಂಗ್‌ ಮಾಡಿದೆ. ಈ ಆದೇಶ ರಾಷ್ಟ್ರರಾಜಧಾನಿ ದೆಹಲಿಗೆ ನೀಡಿದ್ದರೂ, ಅಲ್ಲಷ್ಟೇ ಸೀಮಿತವಲ್ಲ. ಇಡೀ ದೇಶಕ್ಕೆ ಸಂಬಂಧಪಡುತ್ತದೆ.

ಹಾಗಂತ ಇಲ್ಲಿನ ಮಹಾನಗರ ಪಾಲಿಕೆ ಏನೂ ಮಾಡುತ್ತಲೇ ಇಲ್ಲ ಅಂತೇನೂ ಇಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಶಿವಳ್ಳಿಯಲ್ಲಿ ಶೆಡ್‌ ನಿರ್ಮಿಸಿದೆ. ಆದರೆ, ಈ ವರೆಗೂ ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿಲ್ಲ. ಇನ್ನು ರಸ್ತೆ ಮೇಲೆ ಮಾಂಸಾಹಾರ, ಅದರ ತ್ಯಾಜ್ಯ ಎಸೆಯಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಿಕೆಯದ್ದು. ಆ ಕೆಲಸವನ್ನೂ ಮಾಡುತ್ತಿಲ್ಲ. ಬರೀ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಚರ್ಚೆಗಷ್ಟೇ ಸೀಮಿತವಾಗಿದೆ. ಇನ್ನು ಆಡಳಿತ ಮಂಡಳಿ ಕೂಡ ಮೇಯರ್‌- ಉಪಮೇಯರ್‌ ಬದಲಾದಾಗೊಮ್ಮೆ ಈ ಬಗ್ಗೆ ಚರ್ಚೆ ನಡೆಸುತ್ತಾರೆ. ಬಣ್ಣ ಬಣ್ಣದ ಮಾತುಗಳನ್ನು ಆಡುತ್ತಾರೆ. ಮತ್ತೆ ಯಥಾಪ್ರಕಾರ ಬೀದಿನಾಯಿಗಳ ಹಾವಳಿ ನಿಲ್ಲುವುದಿಲ್ಲ; ಅವುಗಳಿಗೆ ಕಡಿವಾಣ ಹಾಕುವ ಯೋಚನೆಯನ್ನೂ ಪಾಲಿಕೆ ಮಾಡುವುದಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

ಬೀದಿನಾಯಿ ಹಾವಳಿ ತಡೆಗಟ್ಟಲು ಪಾಲಿಕೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಶಿವಳ್ಳಿಯಲ್ಲಿ ಶೆಡ್‌ ನಿರ್ಮಿಸಲಾಗುತ್ತಿದೆ. ಅಲ್ಲಿ ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇನ್ನು ಬೀದಿನಾಯಿ ಮರಿಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ ಎಂದು ಚಿಟಗುಪ್ಪಿ ಆಸ್ಪತ್ರೆ ಮುಖ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಹೇಳಿದರು.

ಬೀದಿನಾಯಿಗಳಿಗೆ ನಗರದಲ್ಲಿ ಮಾಂಸಾಹಾರ ಹೋಟೆಲ್‌, ಖಾನಾವಳಿಗಳೆಲ್ಲ ತ್ಯಾಜ್ಯ, ಉಳಿದ ಆಹಾರವನ್ನೆಲ್ಲ ಹಾಕುತ್ತವೆ. ತಿಂದು ತಿಂದು ಕೊಬ್ಬಿ ಬಿಟ್ಟಿವೆ. ಮನುಷ್ಯರು, ಮಕ್ಕಳ ಮೇಲೆಲ್ಲ ದಾಳಿ ಮಾಡುತ್ತವೆ. ಉಳಿದ ಆಹಾರ ಎಸೆಯುವ ಎಲ್ಲ ಮಾಂಸಾಹಾರಗಳ ಮೇಲೆ ಪಾಲಿಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ರಮೇಶ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!