ಶ್ರದ್ಧಾ, ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

KannadaprabhaNewsNetwork |  
Published : Jul 22, 2024, 01:16 AM IST
ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಭಾನುವಾರ ಸಿದ್ಧಾರೂಢರ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿರುವುದು. | Kannada Prabha

ಸಾರಾಂಶ

ನಗರದಲ್ಲಿರುವ ಎಲ್ಲ ಸಾಯಿ ಮಂದಿರಗಳು ಜನರಿಂದ ತುಂಬಿಹೋಗಿದ್ದವು. ಹಲವು ಕಡೆಗಳಲ್ಲಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಗರದಾದ್ಯಂತ ಭಾನುವಾರ ಗುರುಪೂರ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೆ ಸಂಜೆಯ ವರೆಗೂ ಮಠ, ಮಂದಿರ ಸೇರಿದಂತೆ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಸಾವಿರಾರು ಜನರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿನ ಶ್ರೀ ಸಿದ್ಧಾರೂಢರ ಮಠ, ಮೂರುಸಾವಿರ ಮಠ, ಕೋರ್ಟ್ ವೃತ್ತದ ಬಳಿ ಇರುವ ಶ್ರೀ ಸಾಯಿ ಮಂದಿರ ಹಾಗೂ ದೇಶಪಾಂಡೆ ನಗರದ ಶ್ರೀಕೃಷ್ಣ ಮಂದಿರ ಹಾಗೂ ಉಣಕಲ್ಲಿನ ಚಂದ್ರಮೌಳಿಶ್ವರ ದೇವಸ್ಥಾನ ಮತ್ತು ಸ್ವಾಮಿ ವಿವೇಕಾನಂದ ಆಶ್ರಮ, ದಾಜಿಬಾನ್ ಪೇಠೆಯ ವಿಠ್ಠಲ ದೇವರ, ರುಕ್ಮಾಯಿದೇವಿ ಮಂದಿರ ಸೇರಿದಂತೆ ನಗರದಲ್ಲಿರುವ ಎಲ್ಲ ಸಾಯಿ ಮಂದಿರಗಳು ಜನರಿಂದ ತುಂಬಿಹೋಗಿದ್ದವು. ಹಲವು ಕಡೆಗಳಲ್ಲಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಗುರುಪೂರ್ಣಿಮಾ ಉತ್ಸವದ ಅಂಗವಾಗಿ ನಗರದ ಕೋರ್ಟ್ ವೃತ್ತದ ಬಳಿ ಇರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಭಜನೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕಳೆದ 2-3 ದಿನಗಳಿಂದ ಬೆಳಗ್ಗೆ ಆಧ್ಯಾತ್ಮಿಕ ಪ್ರವಚನ, ಭಜನೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಭಾನುವಾರದಂದು ಬೆಳಗ್ಗೆ ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ ಜರುಗಿತು. ಬೆಳಗ್ಗೆ ಕಾಕಡಾರತಿ, ಮಹಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಸ್ವರ್ಣಪಾದ ದರ್ಶನ ಹಾಗೂ ಬೆಳ್ಳಿ ಪಾದಪೂಜೆ ಆರತಿ, ಮಹಾಪ್ರಸಾದ ವಿತರಿಸಲಾಯಿತು.

ರಾತ್ರಿ ಶ್ರೀ ಸಾಯಿ ಸದ್ಭಕ್ತರಿಂದ ಭಜನಾ ಕಾರ್ಯಕ್ರಮ ಜರುಗಿತು. ಇಲ್ಲಿನ ಮೂರುಸಾವಿರ ಮಠಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಗದ್ದುಗೆಯ ದರ್ಶನ ಪಡೆದರು. ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಗದ್ದುಗೆಯ ದರ್ಶನ ಪಡೆದರು. ಇನ್ನು ಮನೆಯಲ್ಲಿನ ಮಕ್ಕಳು ತಮ್ಮ ತಂದೆ- ತಾಯಿ ಹಾಗೂ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಮೂಲಕ ಸಂಭ್ರಮದಿಂದ ಗುರುಪೂರ್ಣಿಮೆ ಆಚರಣೆ ಮಾಡಿದರು.

ಸಿದ್ಧಾರೂಢರ ಗದ್ದುಗೆ ದರ್ಶನ

ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ನಗರದ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಗದ್ದುಗೆಯ ದರ್ಶನ ಪಡೆದುಕೊಂಡರು. ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಅಲಂಕಾರ ಪೂಜೆ ನೆರವೇರಿತು. ಬೆಳಗ್ಗೆ ಕಾಕಡಾರತಿ, ಅಭಿಷೇಕ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಸಂಜೆ ಪ್ರವಚನ, ಭಜನೆ ಹಮ್ಮಿಕೊಳ್ಳಲಾಯಿತು. ಸಂಜೆಯ ವೇಳೆ ಶ್ರೀಮಠದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಸಂಭ್ರಮಿದಿಂದ ನೆರವೇರಿತು.

ಜಡಿಮಳೆಗೆ ಭಕ್ತರು ಹೈರಾಣು

ಗುರುಪೂರ್ಣಿಮೆ ದಿನವಾದ ಭಾನುವಾರವೂ ವರುಣನ ಕಣ್ಣಾಮುಚ್ಚಾಲೆಗೆ ಭಕ್ತರು ಕಿರಿಕಿರಿ ಅನುಭ‍ವಿಸಿದರು. ಕೆಲಕಾಲ ತುಂತುರು ಮಳೆ ಸುರಿದರೆ ಮತ್ತೇ ಕೆಲಕಾಲ ಜೋರಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ತೆರಳುವ ಭಕ್ತರು ತೊಂದರೆ ಅನುಭವಿಸಿದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದು, ಭಾನುವಾರವೂ ಮುಂದುವರೆಯಿತು. ಬೆಳಗ್ಗೆ ದೇವಸ್ಥಾನಗಳಿಗೆ ತೆರಳುವ ಭಕ್ತರು ಮಳೆಯಲ್ಲಿಯೇ ನೆನೆಯುತ್ತ ಆಗಮಿಸುತ್ತಿದ್ದರೆ, ಇನ್ನೂ ಕೆಲವರು ಕೊಡೆಗಳ ಮೊರೆ ಹೋದರು. ಮಳೆಯಿಂದಾಗಿ ಕೆಲ ದೇವಸ್ಥಾನಗಳ ಎದುರು ನೆನೆಯುತ್ತಾ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ