ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಿ: ಅಶೋಕ ಭಟ್ಟ

KannadaprabhaNewsNetwork | Published : Aug 7, 2024 1:10 AM

ಸಾರಾಂಶ

ಪ್ರತಿಯೊಂದು ಇಲಾಖೆಯಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಿ, ತಮ್ಮ ತಮ್ಮ ಇಲಾಖೆಯ ಕಟ್ಟಡಕ್ಕೆ ತಳಿರು-ತೋರಣ ಕಟ್ಟಿ, ದೀಪಾಲಂಕಾರ ಮಾಡಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಅಶೋಕ ಭಟ್ಟ ಸೂಚಿಸಿದರು.

ಯಲ್ಲಾಪುರ: ಆ. ೧೫ರಂದು ಸ್ವಾತಂತ್ರ್ಯ ದಿನಾಚರಣೆಯು ರಾಷ್ಟ್ರೀಯ ಹಬ್ಬವಾಗಿದ್ದು, ಇದನ್ನು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಸುವಂತೆ ತಹಸೀಲ್ದಾರ್ ಅಶೋಕ ಭಟ್ಟ ತಿಳಿಸಿದರು.ಆ. ೬ರಂದು ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಪ್ರತಿಯೊಂದು ಇಲಾಖೆಯಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಿ, ತಮ್ಮ ತಮ್ಮ ಇಲಾಖೆಯ ಕಟ್ಟಡಕ್ಕೆ ತಳಿರು-ತೋರಣ ಕಟ್ಟಿ, ದೀಪಾಲಂಕಾರ ಮಾಡಬೇಕು ಎಂದರು.

ತಮ್ಮ ಕಚೇರಿಯಲ್ಲಿ ಬೆಳಗ್ಗೆ ೮.೧೫ರೊಳಗೆ ಧ್ವಜಾರೋಹಣ ನೆರವೇರಿಸಿ, ೮.೪೫ರೊಳಗೆ ಕಾಳಮ್ಮನಗರದ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಭಾಗವಹಿಸಬೇಕು. ಪ್ಲಾಸ್ಟಿಕ್ ಧ್ವಜ ಬಳಕೆಯನ್ನು ನಿಷೇಧಿಸಲಾಗಿದೆ. ಅಂಗಡಿಗಳಲ್ಲೂ ಪ್ಲಾಸ್ಟಿಕ್ ಧ್ವಜವನ್ನು ಮಾರುವಂತಿಲ್ಲ ಎಂದರು.

ಎಲ್ಲಿಯೂ ರಾಷ್ಟ್ರಧ್ವಜಕ್ಕೆ ಅಗೌರವ ಆಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಧ್ವಜ ಕಟ್ಟುವುದು ಮತ್ತು ಆರೋಹಣ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಗಮನ ವಹಿಸಬೇಕು. ಈ ಎಲ್ಲ ಸಂಗತಿಗಳನ್ನು ಪಟ್ಟಣದ ಎಲ್ಲ ಶಾಲಾ- ಕಾಲೇಜು ಮುಖ್ಯಸ್ಥರಿಗೆ ಸೂಚಿಸಲಾಗುತ್ತಿದೆ. ರಾಷ್ಟ್ರಧ್ವಜಾರೋಹಣಕ್ಕೆ ಎಲ್ಲ ಶಿಕ್ಷಕರು, ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಕಾರಿಗಳೂ ಆಗಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ, ಪಪಂ ಮುಖ್ಯಾಧಿಕಾರಿ ಸುನಿಲ ಗಾವಡೆ, ಗ್ರೇಡ್ ೨ ತಹಸೀಲ್ದಾರ್ ಸಿ.ಜಿ. ನಾಯ್ಕ, ಉಪತಹಸೀಲ್ದಾರ್ ಗೀತಾ ಜಾಧವ್, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಜಿಪಂ ಅಭಿಯಂತರ ಸಂತೋಷ ಬಂಟ, ಸಿಡಿಪಿಒ ಫಾತಿಮಾ ಚುಳಕಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದಾಕ್ಷಾಯಣಿ ನಾಯ್ಕ, ಪಿಎಸ್ಐ ಸಿದ್ದಪ್ಪ ಗುಡಿ, ಟಿಪಿಇಒ ಪ್ರಕಾಶ ತಾರೀಕೊಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳೀಕೋಟೆ, ಭಾರತ ಸೇವಾದಳದ ತಾಲೂಕಾಧ್ಯಕ್ಷ ಎಂ.ಆರ್. ಹೆಗಡೆ, ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಕೀರ್ತಿ ಬಿ.ಎಂ., ಎಪಿಎಂಸಿ ಅಧಿಕಾರಿ ಎಂ.ಟಿ. ನಾಯ್ಕ, ಮೋಜಣಿ ಇಲಾಖೆಯ ಸಹಾಯಕ ನಿರ್ದೇಶಕಿ ವನಿತಾ ಪಾಟೀಲ, ಸಹಾಯಕ ಗ್ರಂಥಪಾಲಕ ಎಫ್.ಎಚ್. ಬಾಸೂರ್, ಪ್ರಾ.ಶಾ.ಶಿ. ಸಂಘದ ತಾಲೂಕಾಧ್ಯಕ್ಷ ಆರ್.ಆರ್. ಭಟ್ಟ, ದೈ.ಶಿ. ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ನಂದನ ಬಾಳಗಿ ಇತರರು ಇದ್ದರು.

Share this article