ಶಿರಹಟ್ಟಿ: ಶ್ರಾವಣ ಮಾಸದಲ್ಲಿ ಪುರಾಣ, ಪ್ರವಚನ, ಪುಣ್ಯ ಕಥೆಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರ ಮನಸ್ಸು ಶುದ್ದಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯರಾದ ಎನ್.ಆರ್. ಕುಲಕರ್ಣಿ ಹೇಳಿದರು.ಶ್ರಾವಣ ಸಂಜೆ ಕಾರ್ಯಕ್ರಮದ ನಿಮಿತ್ತ ಕಸಾಪ ತಾಲೂಕು ಘಟಕದಿಂದ ಸೋಮವಾರ ಸಂಜೆ ಪಟ್ಟಣದ ಮರಾಠಾ ಗಲ್ಲಿಯ ಅಂಭಾ ಭವಾನಿ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯರು ಸಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ. ಸಂಸಾರದ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರ ದೂರ ಮಾಡಿ ಶಾಂತಿ, ಸಹನೆ, ತಾಳ್ಮೆ ಮೂಡಬೇಕಾದರೆ ಪುರಾಣ ಕೇಳುವುದರಿಂದ ಸಾಧ್ಯವಾಗುತ್ತದೆ ಎಂದರು.ಪುರಾಣ, ಪ್ರವಚನ ಆಲಿಸುವುದರಿಂದ ಕೆಟ್ಟ ವಿಚಾರಗಳು ದೂರವಾಗಿ ಒಳ್ಳೆಯ ಭಾವನೆಗಳು ಮನಸ್ಸಲ್ಲಿ ಮೂಡುತ್ತವೆ. ಅಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ವಿಚಾರಗಳನ್ನು ಹೊಂದಿರುವ ಇಂತಹ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಹೆಚ್ಚು ಭಕ್ತರು ಪಾಲ್ಗೊಳ್ಳಬೇಕು. ಭಕ್ತರ ಮತ್ತು ನಾಡಿನ ಹಿತಕ್ಕಾಗಿ ಕಸಾಪ ಇಂತಹ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ನವೀನ ಅಳವಂಡಿ ಮಾತನಾಡಿ, ಇಂದಿನ ಆಧುನಿಕತೆ ಯುಗದಲ್ಲಿ ಜನರಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಮೂಡಿಸುವ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳನ್ನು ಕೇಳುವುದು ಅವಶ್ಯವಿದೆ ಎಂದರು.ಜನರಲ್ಲಿ ಸಂಸ್ಕಾರ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ. ಯುವಜನರಲ್ಲಿ ಧಾರ್ಮಿಕ ಪರಿಜ್ಞಾನ ಕಡಿಮೆಯಾಗುತ್ತಿದ್ದು, ಎಲ್ಲರೂ ಒತ್ತಡದ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಜನರು ಪ್ರವಚನ ಆಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಸಾರ್ಥಕ ಜೀವನಕ್ಕೆ ಪುರಾಣ, ಪ್ರವಚನಗಳು ಪೂರಕವಾಗಿವೆ. ಇದರಿಂದ ಒಳ್ಳೆಯ ವಿಚಾರಗಳು ಮೂಡಲು ಸಾಧ್ಯ. ಶ್ರಾವಣ ಮಾಸದಲ್ಲಿ ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಯುವಜನತೆ ಹೆಚ್ಚಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಧ್ಯಾತ್ಮದತ್ತ ಒಲವು ತೋರಬೇಕು. ಭಕ್ತಿ ಬದುಕನ್ನು ದಿವ್ಯಗೊಳಿಸುವ ಮಧುರ ಸಾಧನ. ಹಿರಿಯರಾಗಲಿ, ಕಿರಿಯರಾಗಲಿ ಅವರ ಮನಸ್ಸುಗಳಲ್ಲಿ ಭಕ್ತಿ ಭಾವ ಒಡಮೂಡಬೇಕು ಎಂದು ತಿಳಿಸಿದರು.ಕೊಟ್ರಯ್ಯ ಹೊಂಬಾಳ್‌ಮಠ ಉಪನ್ಯಾಸ ನೀಡಿದರು. ಎಚ್.ಎಂ. ದೇವಗಿರಿ, ಎಸ್.ಬಿ. ಹೊಸೂರ, ಗಣಪತಿ ಶೇಳಕೆ, ಶಿವಪ್ರಕಾಶ ಮಹಾಜನಶೆಟ್ಟರ, ಹುಮಾಯೂನ್ ಮಾಗಡಿ, ಶಿವನಗೌಡ ಪಾಟೀಲ, ರಮೇಶ ನಿರ್ವಾಣಶೆಟ್ಟರ, ಗಿರೀಶ ಕೋಡಬಾಳ, ಎಚ್.ಆರ್. ಬೆನಹಾಳ, ಬಸವರಾಜ ಕಳರ್ಪುರ, ಚಂದ್ರು ಕದಡಿ, ಸಿದ್ದು ಹಲಸೂರ, ಆರ್.ಎಚ್. ಪರಬತ, ಪ್ರಭು ಹಲಸೂರ, ಸತೀಶ್ ದೇಶಪಾಂಡೆ, ಎಂ.ಬಿ. ಹಾವೇರಿ, ಬಿ.ಆರ್. ಪಾಟೀಲ, ಜಿ.ಆರ್. ಸರ್ಜಾಪುರ, ಪರಮೇಶ ಪರಬ, ಸುರೇಶ ಸರ್ಜಾಪುರ, ವಾಸುದೇವ ಕಲಾಲ ಭಾಗವಹಿಸಿದ್ದರು.