ಕನ್ನಡಪ್ರಭ ವಾರ್ತೆ ವಿಜಯಪುರ
ಕಳೆದ ಹಲವಾರು ವರ್ಷಗಳಿಂದ ವಿಜಯಪುರ ನಗರದ ಡಿಸಿ ಕಚೇರಿ ಹಿಂಬಾಗದಲ್ಲಿ ಕಣಕಿ-ಹುಲ್ಲು ಮಾರಾಟ ಮಾಡುವವರನ್ನು ಸ್ಥಳಾಂತರಿಸುತ್ತಿರುವುದು ಖಂಡನೀಯ ಕೂಡಲೇ ಅವರಿಗೆ ಅಲ್ಲಿ ಕುಳಿತು ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಕಣಕಿ-ಹುಲ್ಲು ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಕಣಕಿ ಹುಲ್ಲು ಮಾರಾಟ ಮಾಡುವ ಬೀದಿ ಬದಿಯ ಬಡ ರೈತಾಪಿ ವ್ಯಾಪಾರಸ್ಥರನ್ನು ದಿಢೀರ್ ಎತ್ತಂಗಡಿ ಮಾಡುತ್ತಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳ ನಡೆ ಖಂಡನೀಯ. ನಗರದ ಕೇಂದ್ರ ಭಾಗದಲ್ಲಿ ಕಣಕಿ ಬಜಾರ್ ಇದ್ದು, ನಾಗಚಂದ್ರ ರಸ್ತೆಯ ಬದಿ ಇರುವ ಡಿಡಿಪಿಆಯ್ ಕಚೇರಿ ಹತ್ತಿರ ಖುಲ್ಲಾ ಜಾಗದಲ್ಲಿ ಯಾರಿಗೂ ತೊಂದರೆಯಾಗದಂತೆ ಕಣಕಿ ಹುಲ್ಲು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಬಡವರನ್ನು ಏಕಾಏಕಿ ಜಾಗ ಖಾಲಿ ಮಾಡಿಸಿರುವುದು ಸರಿಯಲ್ಲ. ಕೂಡಲೇ ಅವರಿಗೆ ಅಲ್ಲೇ ವ್ಯಾಪಾರ ಮಾಡಿಕೊಂಡು ಹೋಗಲು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಹೋರಾಟಗಾರ ಅಜೀಜ್ ಮುಕಬಿಲ್ ಮಾತನಾಡಿ, ನಗರದಲ್ಲಿರುವ ಜನ ಜಾನುವಾರುಗಳಿಗೆ, ಟಾಂಗಾ ಕುದುರೆ, ಕುರಿ ಮೇಕೆಗಳಿಗೆ ಇಲ್ಲಿಂದಲೇ ಮೇವು ಖರೀದಿ ಮಾಡಿಕೊಂಡು ಹೋಗುತ್ತಾರೆ. ಇಲ್ಲಿಂದ ಇವರನ್ನು ಖಾಲಿ ಮಾಡಿಸಿದರೇ ನಗರ ಪ್ರದೇಶದ ಜಾನುವಾರಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ವ್ಯಾಪಾರಸ್ಥರು ಈ ಉದ್ಯೋಗದಿಂದ ವಿಮುಖರಾದರೇ ಹಲವಾರು ಕುಟುಂಬಗಳು ಬೀದಿಗೆ ಬೀಳುತ್ತವೆ. ಹಾಗಾಗಿ ಅಧಿಕಾರಿಗಳು ಹಾಗೂ ಶಾಸಕರು ಬೀದಿ ಬದಿ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯದೇ ಅವರ ತಿನ್ನುವ ಅನ್ನಕ್ಕೆ ಕಲ್ಲು ಹಾಕದೇ ದೊಡ್ಡ ಮನಸು ಮಾಡಿ ಅವರಿಗೆ ಅಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಬೀದಿ ಬದಿ ಹುಲ್ಲು-ಕಣಿಕೆ ಮಾರುವ ರೈತ ಅಂಬರೀಷ ಹಜೇರಿ ಮಾತನಾಡಿ, ನಮ್ಮ ತಾತನ ಕಾಲದಿಂದಲೂ ನಾವು ಕಣಕಿ-ಹುಲ್ಲು ಮಾರುವ ವೃತ್ತಿ ಮಾಡಿಕೊಂಡು ಬಂದಿರುವ ನಮಗೆ ಮತ್ತೊಂದು ವೃತ್ತಿಯ ಬಗ್ಗೆ ಮಾಹಿತಿ ಇಲ್ಲ. ಈ ವೃತ್ತಿಯನ್ನು ಬಿಟ್ಟರೆ ಬೇರೆಯಾವ ವೃತ್ತಿಯು ನಮಗೆ ಬರುವುದಿಲ್ಲ. ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಿದರೇ ನಾನು ನನ್ನಂತೆ ಹಲವಾರು ಕುಟುಂಬಗಳು ಬೀದಿಗೆ ಬರುವುದು ನಿಶ್ಚಿತ. ಕಾರಣ ನಮಗೆ ಇಲ್ಲಿಯೇ ವ್ಯಾಪಾರ ಮುಂದುವರೆಸಲು ಅನುಮತಿಸಬೇಕು ಇಲ್ಲದಿದ್ದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮುಖಂಡರಾದ ಹೀರಾಮಣಿ ರಾಠೋಡ, ಸುಭಾನ್ ನಾಗರಬಾವಡಿ, ಸಲೀಂ ಕನ್ನೂರ, ಆಕಾಶ ರಾಠೋಡ, ಮ್ಸೀತಾಬಾಯಿ ರಾಠೋಡ, ಮೇನಕಾಬಾಯಿ ಚವ್ಹಾಣ, ಶಾರುಬಾಯಿ ರಾಠೋಡ, ಶಾಂತಬಾಯಿ ಪವಾರ, ಮೋತಿಲಾಲ್ ರಾಠೋಡ, ಫಾತಿಮಾ ಇನಾಂದಾರ, ಆಕಾಶ್ ರಾಠೋಡ್ ಮುಂತಾದವರು ಇದ್ದರು.