ನರಗುಂದ: ಎಸ್ಎಸ್‌ಎಲ್‌ಸಿ ಜೀವನದ ಮುಖ್ಯ ಹಂತವಾಗಿದೆ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಶಾಸಕ, ಲಯನ್ಸ್ ಶಿಕ್ಷಣ ಸಂಸ್ಥೆ ಚೇರಮನ್ ಸಿ.ಸಿ. ಪಾಟೀಲ ತಿಳಿಸಿದರು.
ಸರಳ ಪ್ರಶ್ನೆಗಳನ್ನು ಮೊದಲು ಬರೆದು ನಂತರ ಕಠಿಣ ಪ್ರಶ್ನೆಗಳನ್ನು ಬರೆದಾಗ ಹೆಚ್ಚಿನ ಅಂಕ ಪಡೆದು ಅಂದುಕೊಂಡ ಫಲಿತಾಂಶ ಸಾಧಿಸಲು ಸಾಧ್ಯ. ಪಠ್ಯದ ಸಾರವನ್ನು ಸಂಪೂರ್ಣ ಅರಿತರೆ ಯಾವುದೇ ಪ್ರಶ್ನೆಗಳಿಗಾದರೂ ಉತ್ತರಿಸಬಹುದು. 100ಕ್ಕೆ 100 ಅಂಕಗಳನ್ನು ಪಡೆಯಲು ಸಾಧ್ಯ ಎಂದರು.
ಲಯನ್ಸ್ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಗುರಿ ಸಾಧಿಸಿದ್ದಾರೆ. ಅದೇ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಗುರಿ ಸಾಧಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಉತ್ತಮ ನಾಗರಿಕರಾಗಿ ಕಲಿತ ಸಂಸ್ದೆಗೆ, ಹೆತ್ತ ತಂದೆ- ತಾಯಿಗಳಿಗೆ ಹಾಗೂ ಬೋಧಿಸಿದ ಗುರುಗಳಿಗೆ ಕೀರ್ತಿ ತರಬೇಕು. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ₹10 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು.ಕಾರ್ಯದರ್ಶಿ ಡಾ. ಪ್ರಭು ನಂದಿ ಮಾತನಾಡಿ, 10ನೇ ತರಗತಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಬೆಳೆಸಬೇಕು. ಜೀವನದಲ್ಲಿ ಮೂರು ನಿಯಮ ಪಾಲಿಸಬೇಕು. ಶಿಸ್ತು, ತಾಳ್ಮೆ ಹೊಂದಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರ ಶ್ರಮ ವಹಿಸಿ ಉತ್ತಮ ಅಂಕ ಪಡೆದ ಸಂಸ್ಥೆಯ ಕೀರ್ತಿ ಹೆಚ್ಚಿಸಬೇಕೆಂದರು.ಈ ಸಂದರ್ಭದಲ್ಲಿ ಮಹಾ ಸರಸ್ವತಿ ಪೂಜೆಗೆ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ನೆನಪಿನ ಕಾಣಿಕೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಭಾನುಪ್ರಿಯ ಪುರೋಹಿತ, ಪ್ರಿತಂ ಪಟ್ಟಣಶೆಟ್ಟಿ, ಕವನಾ ಪಿಡ್ಡನಾಯ್ಕರ, ಸಹನಾ ಗೊಂಬಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಜಂಟಿ ಕಾರ್ಯದರ್ಶಿ ವಿಜಯಕುಮಾರ್ ಬೇಲೇರಿ, ಹಿರಿಯ ನಿರ್ದೇಶಕರಾದ ಜಿ.ಟಿ. ಗುಡಿಸಾಗರ, ಜಿ.ಬಿ. ಕುಲಕರ್ಣಿ, ಡಾ. ಬಿ.ಎಂ. ಜಾಬಣ್ಣವರ, ಪ್ರೊ. ಸಿ.ಎಸ್. ಸಾಲೂಟಗಿಮಠ ಇದ್ದರು. ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಡಾ. ಬಸವರಾಜ ಹಲಕುರ್ಕಿ, ವಿಭಾ ರಾಮದುರ್ಗ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್.ಜಿ. ಜಕ್ಕಲಿ ವಂದಿಸಿದರು.