ಭಟ್ಕಳ: ತಾಲೂಕಿನಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಸಹಾಯಕ ಆಯುಕ್ತೆ ಕಾವ್ಯರಾಣಿ ಕರೆ ನೀಡಿದರು.ತಾಲೂಕು ಆಡಳಿತ ಸೌಧದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ಕರೆದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಗಣೇಶ ಮೂರ್ತಿ ತಯಾರಕರು ಗಣೇಶ ಮೂರ್ತಿಯನ್ನು ಜೇಡಿಮಣ್ಣು ಹಾಗೂ ಸಹಜ ಬಣ್ಣಗಳನ್ನು ಉಪಯೋಗಿಸಿಕೊಂಡು ಸಿದ್ಧಪಡಿಸಬೇಕು. ಪಿಒಪಿ ಗಣೇಶ ಮೂರ್ತಿಯಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಉಪಯೋಗಿಸುವುದರಿಂದ ಮೂರ್ತಿ ನೀರಿನಲ್ಲಿ ಸುಲಭವಾಗಿ ಕರಗದೆ ಬಹುಕಾಲದ ವರೆಗೂ ತ್ಯಾಜ್ಯವಾಗಿ ಉಳಿದುಕೊಳ್ಳುತ್ತದೆ. ಇದರಿಂದ ಜಲಮೂಲಗಳು ಸಹ ವಿಷಕಾರಿಯಾಗುತ್ತದೆ. ಇದರಿಂದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದ ಮೇರೆಗೆ ಪಿಒಪಿ ಗಣೆಶ ಮೂರ್ತಿ ಸಂಪೂರ್ಣ ನಿಷೇಧಿಸಲಾಗಿದ್ದು, ಯಾರಾದರೂ ಪಿಒಪಿ ಬಳಸಿ ಮೂರ್ತಿ ತಯಾರಿಸಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ತಾಲೂಕಿನಾದ್ಯಂತ ಒಟ್ಟೂ 120 ಕಡೆ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಸಮಿತಿಯವರು ಅರ್ಜಿ ಸಲ್ಲಿಸಿ, ಅನುಮತಿ ಪಡೆದುಕೊಳ್ಳಬೇಕು. ಪ್ರತಿಷ್ಠಾಪನೆ ದಿನಾಂಕ, ವಿಸರ್ಜನೆ ದಿನಾಂಕ ಸ್ಪಷ್ಟವಾಗಿ ನಮೂದಿಸಬೇಕು. ಸ್ಥಳ ಬದಲಾವಣೆ ಮಾಡುವಂತಿಲ್ಲ. ಅಗ್ನಿಶಾಮಕ, ಹೆಸ್ಕಾಂ, ಪೊಲೀಸ್ ಇಲಾಖೆ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅನುಮತಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಗಳಲ್ಲಿ, ನಗರ ಭಾಗದಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಅನುಮತಿಗಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ ಎಂದರು.ಡಿವೈಎಸ್ಪಿ ಮಹೇಶ ಕೆ. ಮಾತನಾಡಿ, ಸಂಚಾರಕ್ಕೆ ಅಡ್ಡಿಯಾಗದಂತೆ ರಸ್ತೆಯಲ್ಲಿ ಗಣೇಶೋತ್ಸವದ ಪೆಂಡಾಲ್ ನಿರ್ಮಿಸಬಾರದು. ಗಣೇಶ ಪೆಂಡಾಲ್ ಎದುರುಗಡೆ ಸಮಿತಿಯ ಅಧ್ಯಕ್ಷರು ಹಾಗೂ ತುರ್ತು ಅಗತ್ಯವಿರುವ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸುವ ಫಲಕ ಹಾಕಬೇಕು. ಬೆಂಕಿ ಅವಘಡ ಸಂಭವಿಸಿದರೆ ತುರ್ತು ಪ್ರತಿಕ್ರಿಯಿಸಲು ಸಾಕಷ್ಟು ನೀರು, ಮರಳು ಶೇಖರಿಸಿಟ್ಟುಕೊಂಡಿರಬೇಕು ಎಂದ ಅವರು, ವಿದ್ಯುತ್ ಅವಘಡ ಆಗದಂತೆ ಗುಣಮಟ್ಟದ ವಿದ್ಯುತ್ ಪರಿಕರ ಬಳಸಬೇಕು. ಸಭೆಯಲ್ಲಿ ಪ್ರಚೋದನಕಾರಿ ಭಾಷಣಕ್ಕೆ ಹಾಗೂ ಸಾಮಾಜಿಕ ಜಾಲತಾಣ ಬಳಸಿ ಗಾಳಿಸುದ್ದಿ ಹರಡಲು ಅವಕಾಶ ನೀಡದಂತೆ ಮನವಿ ಮಾಡಿದರು.
ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಆಟೋ ಚಾಲಕ ಮಾಲೀಕರ ಸಂಘದ 5 ದಿನದ ಗಣೇಶೋತ್ಸವಾಗಿದ್ದು, ವಿಸರ್ಜನಾ ದಿನದಂದ ಮೆರವಣಿಗೆಗೆ ಅನುಕೂಲವಾಗುವಂತೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗುವ ವಾಹನಗಳನ್ನು ತೆರವುಗೊಳಿಸಿ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದರು. ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಗ್ರಾಮೀಣ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ, ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್, ತಾಪಂ ಇಒ ಸುನಿಲ್ ಎಂ., ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ನಾಯ್ಕ, ಪ್ರಮುಖರಾದ ಶ್ರೀಧರ ನಾಯ್ಕ, ಕೃಷ್ಣ ನಾಯ್ಕ, ಸಂಜಯ ಗುಡಿಗಾರ ಇದ್ದರು.