ಹೋಳಿ ಹಬ್ಬ ಹಾಗೂ ರಂಜಾನ್ ಮಾಸಾಚರಣೆ ಹಿನ್ನೆಲೆ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ
ಗುರುವಾರ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಹೋಳಿ ಹಬ್ಬ ಹಾಗೂ ರಂಜಾನ್ ಮಾಸಾಚರಣೆ ಕುರಿತ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಲೋಕಸಭಾ ಚುನವಾಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಕೇವಲ ಚುನಾವಣೆ ಸಂಬಂಧಿತ ಕಾರ್ಯಕ್ರಮಗಳಲ್ಲದೆ, ಇತರ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಚುನಾವಣಾ ಸಿಬ್ಬಂದಿ ಭಾಗವಹಿಸಿ ಇಡೀ ಕಾರ್ಯಕ್ರಮದ ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ಆದ್ದರಿಂದ ಹೋಳಿ ಹಬ್ಬದ ಅಂಗವಾಗಿ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಮುಂದಿನ ವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಣ್ಣ ಎರಚುವುದು, ಬಸ್ ತಡೆಯುವುದು ಮಾಡಬೇಡಿ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಕಾಮ ದಹನ ಹಾಗೂ ಹೋಳಿ ಆಚರಣೆ ದಿನ ರಸ್ತೆ ಸಂಚಾರಕ್ಕೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಬ್ಬ ಆಚರಿಸಬೇಕು. ಪ್ರಸ್ತುತ ರಂಜಾನ್ ಮಾಸವು ಆರಂಭವಾಗಿದ್ದು, ಇತರೆ ಧರ್ಮದವರ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ, ಅವರ ಆಚರಣೆ, ನಂಬಿಕೆಗಳಿಗೆ ಅಡಚಣೆ ಆಗದಂತೆ ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದಿಂದ ಹೋಳಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಧಾರ್ಮಿಕ ಮುಖಂಡರಿಗೆ ಸೂಚಿಸಿದರು.ಜಿಲ್ಲೆಯಾದ್ಯಂತ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ. ಕರ್ಕಶ ಧ್ವನಿ ವರ್ಧಕಗಳನ್ನು ಸಹ ನಿಷೇಧಿಸಿದೆ. ಡಿಜೆ ಹಾಗೂ ಕರ್ಕಶ ಧ್ವನಿವರ್ಧಕಗಳು ಶಬ್ದಮಾಲಿನ್ಯದ ಜೊತೆಗೆ ತೀವ್ರತರ ಅನಾರೋಗ್ಯದಿಂದ ಬಳಲುತ್ತಿರುವವರ ಜೀವಕ್ಕೆ ಅಪಾಯ ತಂದೊಡ್ಡಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಹೋಳಿ ಆಚರಣೆ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮದಲ್ಲಿ ಡಿಜೆ ಬಳಕೆ ಮಾಡುಂವಂತಿಲ್ಲ. ಹೋಳಿ ಸಂದರ್ಭ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮದ್ಯ ಮಾರಾಟ ನಿಷೇಧಿಸಲಾಗುವುದು. ನಿಷೇಧದ ನಂತರವೂ ಮದ್ಯ ಮಾರಾಟ, ದಾಸ್ತಾನು ಕಂಡುಬಂದಲ್ಲಿ ಅಂತವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಬಹದ್ದೂರ ಬಂಡಿಯಲ್ಲಿ ಹೋಳಿ ಹಬ್ಬವನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅವರ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ ಮಾದರಿ ನೀತಿ ಸಂಹಿತೆ ಜಾರಿ ಇರುವುದರಿಂದ ಕಾರ್ಯಕ್ರಮವನ್ನು ಎಚ್ಚರಿಕೆಯಿಂದ ಆಯೋಜಿಸಬೇಕು. ಯಾವುದೇ ರೀತಿ ನೀತಿ ಸಂಹಿತೆ ಉಲ್ಲಂಘನೆ, ರಾಜಕೀಯ ಮುಖಂಡರು, ವಿಷಯಗಳು ಕಾರ್ಯಕ್ರಮದಲ್ಲಿ ಕಂಡುಬಂದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಮಾತನಾಡಿ, ಜಿಲ್ಲೆಯಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಹೋಳಿ ಹಬ್ಬ ಆಚರಿಸಲಾಗುತ್ತದೆ. ಕೊಪ್ಪಳದಲ್ಲಿ ಮಾ. 23 ರಂದು ಕಾಮದಹನ ಹಾಗೂ ಮಾ. 24 ರಂದು ಹೋಳಿ ಆಚರಿಸಿದರೆ ಗಂಗಾವತಿಯಲ್ಲಿ ಮಾ.25ರಂದು ಕಾಮದಹನ ಹಾಗೂ ಮಾ.26 ರಂದು ಹೋಳಿ ಆಚರಿಸಲಾಗುತ್ತದೆ. ಸ್ಥಳೀಯ ಆಚರಣೆಗೆ ಅನುಸಾರವಾಗಿ ಇಲಾಖೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸಭೆ ನಡೆಸಲಾಗುತ್ತಿದೆ. ಹೋಳಿ ಹಬ್ಬದ ಕುರಿತಂತೆ ಯಾವುದೇ ಕಾರ್ಯಕ್ರಮ ಆಯೋಜನೆಗೂ ಮುನ್ನ ಸುವಿಧಾ ಆ್ಯಪ್ ಮೂಲಕ ಎಆರ್‌ಒ ಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಪಿಎಸ್‌ಐಗಳು, ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.