ಕನ್ನಡಪ್ರಭ ವಾರ್ತೆ ಕಮಲನಗರ
ಅಯೋಧ್ಯೆಯಲ್ಲಿ ನಿರ್ಮಿಸಿದ ನೂತನ ರಾಮ ಮಂದಿರ ಉದ್ಘಾಟನೆ ಸಂಭ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಮನವಿ ಮಾಡಿದರು.ತಾಲೂಕಿನ ಚಾಂದೋರಿ ಗ್ರಾಮದ ಮಹಾದೇವ ಮಂದಿರದಲ್ಲಿ ನಡೆದ ಅಖಂಡ ಹರಿನಾಮ ಸಪ್ತಾಹ, ಭಾಗವತ ಕಥಾ ಹಾಗೂ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ.22ಕ್ಕೆ ಭವ್ಯ ರಾಮ ಮಂದಿರ ಉದ್ಘಾಟನೆಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಹೀಗಾಗಿ ಪ್ರತಿ ಮನೆಯಲ್ಲೂ ದೀಪ ಬೆಳಗಿಸಬೇಕು ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದರು.ಬೀದರ್ ಲೋಕಸಭಾ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಎರಡು ಬಾರಿ ಸಂಸದನಾಗಿ, ಕೇಂದ್ರದ ಸಚಿವನಾಗಿ ಕಾರ್ಯ ನಿರ್ವಹಿಸುವ ಅವಕಾಶ ಲಭಿಸಿದೆ. ಜನರ ಆಶಯದಂತೆ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಹಲವಾರು ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಬರುವ ಲೋಕಸಭೆ ಚುನಾವಣೆಯಲ್ಲೂ ಕ್ಷೇತ್ರದ ಜನ ಅಭಿವೃದ್ಧಿಗಾಗಿ ತಮಗೆ ಮತ್ತೆ ಅವಕಾಶ ಕೊಡಬೇಕು ಎಂದು ಕೋರಿದರು.
ಮುಖಂಡ ದೀಪಕ ಪಾಟೀಲ ಚಾಂದೋರಿ ಮಾತನಾಡಿ, ಭಕ್ತರಿಗೆ ಆಧಾತ್ಮದ ಸವಿ ಉಣ ಬಡಿಸಲು ಗ್ರಾಮದಲ್ಲಿ ಪ್ರತಿ ವರ್ಷ ಅಖಂಡ ಹರಿನಾಮ ಸಪ್ತಾಹ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ವಿವಿಧೆಡೆಯ ಮಹಾರಾಜರು ಆಗಮಿಸಿ ಭಾಗವತ ಕಥಾ, ಕೀರ್ತನೆ, ಹರಿನಾಮ ಪಾರಾಯಣ ನಡೆಸಿಕೊಡುತ್ತಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾಗೆ ಗ್ರಾಮದ ಮೇಲೆ ವಿಶೇಷ ಪ್ರೀತಿ ಇದೆ. ಎಲ್ಲರೊಂದಿಗೆ ಆತ್ಮೀಯತೆ ಇದೆ. ಬಾಂಧವ್ಯ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.ರಾಮರಾವ್ ಮಹಾರಾಜ ಢೋಕ್ ಅವರು ರಾಮ ಚರಿತ್ರೆ ಕೀರ್ತನೆ ನಡೆಸಿಕೊಟ್ಟರು. ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಾರುತಿರಾವ್ ಮುಳೆ, ಮುಖಂಡರಾದ ದೀಪಕ ಪಾಟೀಲ ಚಾಂದೋರಿ, ವೆಂಕಟರಾವ್ ಮಾಯಿಂದೆ, ಅಣ್ಣೆಪ್ಪ ಖಾನಾಪುರೆ, ನಾರಾಯಣ ಪಾಟೀಲ ಮೊದಲಾದವರು ಇದ್ದರು.
ಮಹಿಳೆಯರು, ಯುವಕರು ಸೇರಿದಂತೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.