ಹಿಂದೂಗಳ ಬಂಧನ ಮುಂದುವರಿಸಿದರೆ ಬೀದಿಗಳಿದು ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಹೋರಾಟ
ಹಿಂದೂಗಳು, ಕರ ಸೇವಕರನ್ನೇ ಗುರಿಯಾಗಿಸಿಕೊಂಡ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಬಂಧಿಸುವ ಕೆಲಸ ಮಾಡುತ್ತಿದ್ದು, ಈ ಸರ್ಕಾರಕ್ಕೆ ಹಿಂದೂಗಳೇ ಟಾರ್ಗೆಟ್ ಆಗಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಹೋರಾಟ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಹಿಂದೂ ಪರ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಪರ ಹೋರಾಟ ತೀವ್ರಗೊಂಡ ನಂತರ ಬಿಡುಗಡೆ ಮಾಡಲಾಗಿದೆ ಎಂದರು.ರಾಜ್ಯದಲ್ಲಿ ಹಿಂದೂಗಳ, ಕರ ಸೇವಕರನ್ನೇ ಸಿದ್ದರಾಮಯ್ಯ ಸರ್ಕಾರ ಗುರಿ ಮಾಡುತ್ತಿದೆ. ಇದು ರೈತ ವಿರೋಧಿ, ಹಿಂದು ವಿರೋಧಿ, ತುಘಲಕ್ ಸರ್ಕಾರವಾಗಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ದಾಂಧಲೆ, ಗಲಭೆ ಪ್ರಕರಣದ ಆರೋಪಿಗಳ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ಬ್ರದರ್ಸ್ ಎನ್ನುತ್ತಾರೆ. ಪೊಲೀಸ್ ಠಾಣೆ, ವಾಹನಗಳು, ಜನ ಸಾಮಾನ್ಯರ ಮನೆಗಳಿಗೆ ನುಗ್ಗಿದವರು, ಮನೆ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಗಳ ಮೇಲಿನ ಕೇಸ್ ಹಿಂಪಡೆಯಲು ಮುಂದಾಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯವ್ಯಾಪಿ ಬೀದಿಗಿಳಿದು ಹೋರಾಟ:
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಹರಿಹರದ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ, ಪಾಲಿಕೆ ಸದಸ್ಯ ಆರ್.ಎಲ್.ಶಿವಪ್ರಕಾಶ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ರಾಜು ವೀರಣ್ಣ, ಅಣಜಿ ಬಸವರಾಜ, ಪ್ರವೀಣ ಜಾಧವ್ ಇತರರಿದ್ದರು.
ಭೀಕರ ಬರ ಇದ್ದರೂ, ರೈತರಿಗೆ ಕೇವಲ 2 ಸಾವಿರ ರು. ಪರಿಹಾರ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವು ಅನ್ನದಾತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣ, ಓಲೈಕೆಯಲ್ಲಿ ತೊಡಗಿರುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ರಾಜ್ಯದ ಜನತೆ ಇದಿರು ನೋಡುತ್ತಿದ್ದಾರೆ.
............
ಜ.8ರಂದು ಬೆಳಿಗ್ಗೆ 10.30ಕ್ಕೆ ಪಕ್ಷಾತೀತವಾಗಿ ಭಜನೆ ಮಾಡುವ ಮೂಲಕ ಹೋರಾಟ ಹಮ್ಮಿಕೊಂಡಿದ್ದೇವೆ. ದಾವಣಗೆರೆಯ ಪಿಜೆ ಬಡಾವಣೆಯ ಶ್ರೀರಾಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ. ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರ್‌ಗೆ ಬಂಧಿಸಿದ್ದಿರಲ್ಲ, ಪೊಲೀಸರಿಗೆ, ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಎಂತಹ ಹೆಸರುಗಳು. ಆದರೆ, ತಮ್ಮದೇ ಹೆಸರಿಗೆ ತದ್ವಿರುದ್ಧವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಟೀಕಿಸಿದರು.