ಗದಗ: ಅಯೋಧ್ಯೆಯಲ್ಲಿ ಜ. ೨೨ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ೩೪೩ ಗ್ರಾಮಗಳ ಎರಡೂವರೆ ಲಕ್ಷ ಮನೆಗಳಿಗೆ ಜ. ೭ರಿಂದ ೧೫ರ ವರೆಗೆ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಆಮಂತ್ರಣ ನೀಡುವ ಅಭಿಯಾನವನ್ನು ಜಿಲ್ಲಾ ವಿಶ್ವ ಹಿಂದೂ ಪರಿಷತ್ತು ಕೈಗೊಂಡಿದೆ ಎಂದು ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹಬೀಬ ಹೇಳಿದರು.
ಹುಬ್ಬಳ್ಳಿಯ ಧರ್ಮಸಿರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಜ.ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು, ಶಿವಾನಂದ ಬ್ರಹನ್ಮಠದ ಸದಾಶಿವಾನಂದ ಸ್ವಾಮೀಜಿ, ಹೊಸಪೇಟೆಯ ಚಿಂತಾಮಣಿ ಮಠದ ಶಿವಾನಂದ ಭಾರತಿ, ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹುಬ್ಬಳ್ಳಿಯ ಶಾರದಾಶ್ರಮದ ತೇಜೋಮಯ ಮಾತೋಶ್ರೀ ಸೇರಿದಂತೆ ಹಲವಾರು ಪೂಜ್ಯರ ಶುಭಾಶೀರ್ವಾದದೊಂದಿಗೆ ಪ್ರಧಾನ ಮಾಡಲಾದ ಈ ಅಕ್ಷತಾ ಕಲಶವನ್ನು ಜಿಲ್ಲೆಯಾದ್ಯಂತ ಸಂಚರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಡಿ.೧೯ ರಂದು ಗದುಗಿನ ಸೇವಾಚೇತನದಲ್ಲಿ ಅಡ್ನೂರ ದಾಸೋಹ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಸ್ವಾಮಿಗಳು, ನೀಲಗುಂದದ ಗುದ್ನೆಶ್ವರ ಮಠದ ಪ್ರಭುಲಿಂಗ ದೇವರು, ಗದುಗಿನ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ. ನೀಲಮ್ಮತಾಯಿ ಅವರ ಸಾನಿಧ್ಯದಲ್ಲಿ ಮಂತ್ರಾಕ್ಷತೆಯ ಕಲಶ ವಿತರಣಾ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆದಿದ್ದು ಇದೀಗ ಜ. ೧೫ರವರೆಗೆ ಜಿಲ್ಲೆಯ ಶ್ರೀರಾಮನ ಭಕ್ತಾಧಿಗಳಿಗೆ ಶ್ರೀರಾಮನ ಭಾವಚಿತ್ರ ಮತ್ತು ಕರಪತ್ರ, ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಲಿದ್ದು ಇದಕ್ಕೆ ವಿ.ಹಿಂ.ಪರಿಷತ್ತಿನ ಎಲ್ಲ ಹಿರಿಯರು, ಪದಾಧಿಕಾರಿಗಳು, ಕಾರ್ಯಕರ್ತರು, ಶ್ರೀರಾಮನ ಭಕ್ತಾಧಿಗಳು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.ದೇಶದಾದ್ಯಂತ ಜ.೧ರಿಂದ ಆರಂಭಗೊಂಡಿರುವ ಈ ಮಂತ್ರಾಕ್ಷತೆ ವಿತರಣೆಯ ಕಾರ್ಯವು ಜ.೧೫ವರೆಗೆ ನಡೆಯಲಿದೆ. ಜ.೨೨ರಂದು ಬೆಳಗಿನ ಶುಭ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೊಳ್ಳುತ್ತಿರುವದು ದೇಶದ ಅಸಂಖ್ಯಾತ ಶ್ರೀರಾಮನ ಭಕ್ತರಲ್ಲಿ ಭಕ್ತಿಭಾವ ತುಂಬಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿ.ಹಿಂ.ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಹೇಮಾದ್ರಿ, ಜಿಲ್ಲಾ ಧರ್ಮಾಚಾರ್ ಸಂಪರ್ಕ ಪ್ರಮುಖರಾದ ಮಾರುತಿ ದಹಿಂಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.