ನಾಳೆಯಿಂದ 3 ದಿನ ರನ್ನನ ಗತವೈಭವದ ಸಂಭ್ರಮ

KannadaprabhaNewsNetwork |  
Published : Feb 21, 2025, 12:47 AM IST
ಗುರುಕಿರಣ್‌ | Kannada Prabha

ಸಾರಾಂಶ

ಮುಧೋಳದಲ್ಲಿ ಫೆ.22 ರಿಂದ 24ರವರೆಗೆ ನಡೆಯಲಿರುವ ರನ್ನ ವೈಭವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮುಧೋಳದಲ್ಲಿ ಫೆ.22 ರಿಂದ 24ರವರೆಗೆ ನಡೆಯಲಿರುವ ರನ್ನ ವೈಭವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಲಿದ್ದಾರೆ.

ಉತ್ಸವದ ನಿಮಿತ್ತ ಫೆ.22 ರಂದು ಬೆಳಗ್ಗೆ 10 ಗಂಟೆಗೆ ರನ್ನ ಬೆಳಗಲಿಯ ಬಂದಲಕ್ಷ್ಮೀ ದೇವಸ್ಥಾನದಿಂದ ಕವಿ ಚಕ್ರವರ್ತಿ ರನ್ನ ವೇದಿಕೆಯವರೆಗೆ ನಡೆಯಲಿರುವ ಜಾನಪದ ವಾಹಿನಿ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಜನಪದ ಕೋಲಾಟ, ಡೊಳ್ಳಿನ ವಾದ್ಯ, ಶಹನಾಯಿ, ಸಂಬಾಳ, ಝಾಂಜ್ ಮೇಳ, ಪುರವಂತಿಕೆ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ 30 ವಿವಿಧ ಕಲಾತಂಡಗಳು ಭಾಗವಹಿಸಲಿವೆ.

ಸಂಜೆ ರನ್ನ ಬೆಳಗಲಿಯ ಕವಿ ಚಕ್ರವರ್ತಿ ರನ್ನವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್ ಸಚಿವ ಪ್ರೀಯಾಂಕ ಖರ್ಗೆ, ಜವಳಿ, ಸಕ್ಕರೆ ಮತ್ತು ಕೃಷಿ ಸಚಿವ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಪ ಸದಸ್ಯರು ಇತರೆ ಗಣ್ಯರು ಆಗಮಿಸಲಿದ್ದಾರೆ.

ರನ್ನ ಕಾವ್ಯದರ್ಶನ ವಿಚಾರ ಸಂಕಿರಣ:

ರನ್ನ ವೈಭವ ನಿಮಿತ್ತ ಫೆ.22 ರಂದು ಬೆಳಗ್ಗೆ 11 ಗಂಟೆಗೆ ಮುಧೋಳ ರನ್ನ ಭವನದ ಅಜೀತಸೇನಾಚಾರ್ಯ ವೇದಿಕೆಯಲ್ಲಿ ನಡೆಯಲಿರುವ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮುಧೋಳನ ಹಿರಿಯ ವೈದ್ಯ, ಸಾಹಿತಿ ಡಾ.ಶಿವಾನಂದ ಕುಟಸದ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಮಾಧವ ಪೆರಾಜೆ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಆಶಯ ನುಡಿ ಹೇಳಲಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರವರೆಗೆ ಗೋಷ್ಠಿ-1ರಲ್ಲಿ ರನ್ನ ಕಾವ್ಯಧಾರ ಎಂಬ ವಿಷಯದ ಮೇಲೆ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಮೈತ್ರೆಯಿಣಿ ಗದಿಗೆಪ್ಪಗೌಡರ ಮಹಾಕವಿ ರನ್ನನ ಕಾವ್ಯದಲ್ಲಿ ಸ್ತ್ರೀವಾದಿ ನಿಲುವು ಕುರಿತು, ಸಾಹಿತಿ ಡಾ.ಮೈನುದ್ದೀನ್‌ ರೇವಡಿಗಾರ ಗದಾಯುದ್ದದಲ್ಲಿ ರನ್ನನ ಸ್ವಾಗತ ಕುರಿತು ಮಾತನಾಡಲಿದ್ದಾರೆ. ಗೋಷ್ಠಿ-2ರಲ್ಲಿ ರನ್ನನ ಗಾಯುದ್ದದಲ್ಲಿ ಯುದ್ಧ ವಿರೋಧಿ ನೀತಿ ಕುರಿತು ಅಮೀನಗಡ ಸಂ.ಸಂ. ಪ.ಪೂ ಕಾಲೇಜಿನ ಉಪ ಪ್ರಾಚಾರ್ಯ ಆರ್.ಜಿ. ಸನ್ನಿ, ರನ್ನನ ಗದಾಯುದ್ದದ ಸಂಗತಿ ಕುರಿತು ಮೈಸೂರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಡಾ.ಚಲಪತಿ ಆರ್ ಮಂಡನೆ ಮಾಡಲಿದ್ದಾರೆ.

ಗುರುಕಿರಣ ತಂಡದಿಂದ ಚಿತ್ರ ಸಂಗೀತ ಸುಧೆ;ಫೆ.22ರಂದು ಸಂಜೆ ನಡೆಯಲಿರುವ ಕವಿ ಚಕ್ರವರ್ತಿ ರನ್ನ ವೇದಿಕೆಯಲ್ಲಿ ರಾತ್ರಿ 9 ರಿಂದ 11 ಗಂಟೆವರೆಗೆ ಸಂಗೀತ ಮಾಂತ್ರಿಕ ಗುರುಕಿರಣ ಹಾಗೂ ತಂಡದವರಿಂದ ಚಿತ್ರ ಸಂಗೀತ ಸುಧೆ ಕಾರ್ಯಕ್ರಮ ಜರುಗಲಿದೆ. ಇದರ ಜೊತೆಗೆ ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೆ ಯಮನಪ್ಪ ಪೂಜೇರಿಯಿಂದ ಚೌಡಕಿ ಪದ, ಕುಮಾರ ಬಡಿಗೇರಿಂದ ಶಾಸ್ತ್ರೀಯ ಸಂಗೀತ, ಕೃಷ್ಣಪ್ಪ ಹೂಲಗೇರಿಯಿಂದ ಡೊಳ್ಳಿನ ಪದ, ಡಾ.ವೆಂಕಪ್ಪ ಸುಗತೇಕರಿಂದ ಗೊಂದಳಿ ಪದ, ನಟರಾಜ ಸಂಗೀತ ನೃತ್ಯನಿಕೇತನದಿಂದ ಸಮೂಹ ನೃತ್ಯ, ಕಾಂಚನಾ ಘಾರಗೆಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಈರಪ್ಪ ಅಥಣಿಯಿಂದ ಭಜನಾ ಪದ ಕಾರ್ಯಕ್ರಮ ನಡೆಯಲಿದೆ.

ರಾಚಯ್ಯ ಮುಧೋಳ ಜೋಗತಿ ಮತ್ತು ದೀಪ ನೃತ್ಯ, ನಟರಂಗ ಕಲ್ಚರಲ್‌ ಅಕಾಡೆಮಿಯಿಂದ ಲಂಬಾಣಿ ನೃತ್ಯ, ಪ್ರೀಯಾಂಕ ಸರಶೆಟ್ಟಿ ಭರತನಾಟ್ಯ, ಯಶವಂತ ವಾಜಂತ್ರಿಯಿಂದ ಹಾಸ್ಯ ಸಂಜೆ, ಉತ್ತರ ಕನ್ನಡ ಅಮೇಜಿಂಗ್ ಸಿದ್ದಿ ಬಾಯ್ಸ್‌ ನಿಂದ ಸಿದ್ದ ಡಮಾಮಿ ನೃತ್ಯ, ಗುರುರಾಜ ಹೊಸಕೋಟಿಯಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಲಿವೆ.

ವಿಶೇಷ ಬಸ್ ವ್ಯವಸ್ಥೆ: ಮುಧೋಳದಲ್ಲಿ 22 ರಿಂದ 24 ವರೆಗೆ ಜರುಗಲಿರುವ ರನ್ನವೈಭವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಮುಧೋಳ, ಜಮಖಂಡಿ, ಮಹಾಲಿಂಗಪುರ, ಬಾಗಲಕೋಟೆ ಹಾಗೂ ಬೀಳಗಿ ಬಸ್ ನಿಲ್ದಾಣಗಳಿಂದ ಕವಿ ಚಕ್ರವರ್ತಿರನ್ನ ಕ್ರೀಡಾಂಗಣಕ್ಕೆ ತೆರಳಲು ವಿಶೇಷ ಬಸ್‌ ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ವಿಶೇಷ ವಾಹನಗಳ ಸದುಪಯೋಗ ಪಡೆದುಕೊಳ್ಳುವಂತೆ ಬಾಗಲಕೋಟೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!