ಕನ್ನಡಪ್ರಭ ವಾರ್ತೆ ನಾಗಮಂಗಲ
ಸಾಮಾನ್ಯ ಸಭೆ ನಿರ್ಣಯದಂತೆ ಹೈಟೆಕ್ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಒತ್ತುವರಿ ಜಾಗವನ್ನು ತೆರವುಗೊಳಿಸಿದರೆ ಪುರಸಭೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪಟ್ಟಣದ ಹರಿಶ್ಚಂದ್ರಗುಪ್ತ ಪುತ್ರ, ವರ್ತಕ ಫಣಿಕಿರಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿರುವುದಾಗಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಸಂಜೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಯಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ಬಾಡಿಗೆ ಪಡೆಯುತ್ತಿರುವ ಫಣಿಕಿರಣ್, ಭ್ರಷ್ಟಾಚಾರ ನಿಗ್ರಹದಳವೆಂಬ ಸಂಘಟನೆ ಕುಮ್ಮಕ್ಕಿನಿಂದ ಪುರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿದರು.
ಫಣಿಕಿರಣ್ ಅವರ ಸ್ವತ್ತಿನ ಸಂಖ್ಯೆ 2518/471ರಲ್ಲಿ ಪೂ.ಪ. 27.5 x ಉ.ದ.72.5 ಅಡಿ ವಿಸ್ತೀರ್ಣದ ಸ್ವತ್ತಿನ ಎಡಭಾಗದ ಪೂರ್ವ ದಿಕ್ಕಿನಲ್ಲಿರುವ ೩.೫x೭೨.೫ ವಿಸ್ತೀರ್ಣದ ಜಾಗವು ಸಾರ್ವಜನಿಕರು ಓಡಾಡುವ ಗಲ್ಲಿಯಾಗಿದೆ. ಇದರ ಪಕ್ಕದಲ್ಲಿ ಶಿಥಿಲಾವಸ್ಥೆಯ ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಿ ಇದೇ ಸ್ಥಳದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು ಎಂದರು.ಅದರಂತೆ ಹಳೆಯ ಶೌಚಾಲಯ ಹಾಗೂ ಅನಧಿಕೃತ ಮಳಿಗೆಯನ್ನು ನಿಯಮಾನುಸಾರ ತೆರವುಗೊಳಿಸಲಾಗಿದೆ. ಫಣಿಕಿರಣ್ ಅವರ ಬಳಿ ಸೂಕ್ತ ದಾಖಲಾತಿಗಳಿದ್ದರೆ ಪುರಸಭೆಗೆ ಸಲ್ಲಿಸಲಿ ಅಥವಾ ಕಾನೂನು ಹೋರಾಟ ಮಾಡಲಿ. ಅದನ್ನು ಬಿಟ್ಟು ಅಧಿಕಾರಿಗಳಿಗೆ ಕಿರುಕುಳ ಕೊಟ್ಟು ಬೆದರಿಕೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಫಣಿಕಿರಣ್ ಅವರ ದುರ್ವರ್ತನೆ ವಿರುದ್ಧ ಪಟ್ಟಣ ಪೊಲೀಸ್ ಅಧಿಕಾರಿಗಳಿಗೆ ಮತ್ತು ಇಲಾಖೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತಿದ್ದೇವೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಸಾರ್ವಜನಿಕ ಆಸ್ತಿ ರಕ್ಷಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಸುದ್ಧಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ರಿಜ್ವಾನ್ ಪಾಷ, ನಾಮನಿರ್ದೇಶಿತ ಸದಸ್ಯ ಮಹಮ್ಮದ್ ನದೀಂ ಪಾಷ ಇದ್ದರು.